SM Krishna: ಎಸ್‌ಎಂ ಕೃಷ್ಣರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, ಇತರ ನಾಯಕರು: 3 ದಿನ ಕರ್ನಾಟಕದಲ್ಲಿ ಶೋಕಾಚರಣೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗಿನ ಸಾರ್ವಜನಿಕ ಬದುಕಿನ ಕ್ಷಣಗಳನ್ನು ಸಿಎಂ ಸಿದ್ದರಾಮಯ್ಯ ಸಹಿತ ಹಲವರು ಹಂಚಿಕೊಂಡಿದ್ದಾರೆ.
ಬೆಂಗಳೂರು:ಮಾಜಿ ಸಿಎಂ ಹಾಗೂ ಕೇಂದ್ರದಲ್ಲಿ ಸಚಿವರಾಗಿದ್ದ ಪದ್ಮವಿಭೂಷಣ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಕರ್ನಾಟಕದ ಎಲ್ಲಾ ಪಕ್ಷಗಳ ನಾಯಕರು, ವಿವಿಧ ಕ್ಷೇತ್ರದವರು ಕಂಬನಿ ಮಿಡಿದಿದ್ದಾರೆ. ಅವರೊಂದಿಗೆ ರಾಜಕೀಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅವರೊಬ್ಬ ಮುತ್ಸದಿ ರಾಜಕಾರಣಿ, ಅಜಾತಶತೃವೂ ಆಗಿದ್ದರು. ಆಡಳಿತದ ಮೂಲಕ ಜನಪರವಾಗಿ ಕೆಲಸ ಮಾಡಿದವರು ಎಂದು ಹಲವರು ನೆನಪಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಅವರ ಸಂಪುಟದ ಹಲವು ಸಚಿವರು ಕೂಡ ಕೃಷ್ಣ ಅವರೊಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ನಡುವೆ ಎಸ್‌ಎಂ ಕೃಷ್ಣ ಅವರ ನಿಧನಕ್ಕೆ ಮೂರು ದಿನದ ಶೋಕಾಚರಣೆಯನ್ನು ಕರ್ನಾಟಕದಲ್ಲಿ ಘೋಷಿಸಲಾಗಿದೆ.
ಮೋದಿ ನೆನಪಿನ ಕನ್ನಡ ಟ್ವೀಟ್
ಎಸ್.ಎಂ ಕೃಷ್ಣ ಅವರು ಅಸಾಧಾರಣ ನಾಯಕರಾಗಿದ್ದರು, ಸಮಾಜದ ಎಲ್ಲ ವರ್ಗಗಳ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೆ ಶ್ರಮಿಸಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದನ್ನು ಸ್ಮರಿಸಿಕೊಳ್ಳಲಾಗುತ್ತದೆ. ಶ್ರೀ ಎಸ್.ಎಂ ಕೃಷ್ಣ ಅವರು ಸಮೃದ್ಧ ಓದುಗ ಮತ್ತು ಚಿಂತಕರೂ ಆಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ನೆನಪಿಸಿಕೊಂಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಶ್ರೀ ಎಸ್.ಎಂ. ಕೃಷ್ಣ ಅವರೊಂದಿಗೆ ಸಂವಾದ ನಡೆಸುವ ಅನೇಕ ಅವಕಾಶಗಳು ನನಗೆ ದೊರೆತವು ಮತ್ತು ಆ ಸಂವಾದಗಳನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.
ನಾಡಿಗಾಗಿ ಅನುಪಮ ಸೇವೆ: ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು.
ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮಖ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಹೇಳಿದ್ದಾರೆ.
ಎಸ್.ಎಂ. ಕೃಷ್ಣ ಆಗಲಿಕೆಯಿಂದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬಸವರಾಜ ಬೊಮ್ಮಾಯಿ
ದೆಹಲಿ: ಕರ್ನಾಟಕ ಕಂಡಂತಹ ಅತ್ಯಂತ ಧೀಮಂತ, ಹಿರಿಯ ರಾಜಕಾರಣಿ, ಸ್ವಾತಂತ್ರ್ಯ ಪೂರ್ವದ ತಲೆಮಾರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತಾತ್ಮಕ ಅನೇಕ ಹುದ್ದೆ ಅಲಂಕರಿಸಿದ್ದ ನಮ್ಮ ಕನ್ನಡದ ಹೆಮ್ಮೆಯ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖ ಹಾಗೂ ದಿಗ್ಧಮೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದ ದೇಶ ಒಬ್ಬ ಹಿರಿಯರು, ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಂತಾಗಿದೆ. ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪರಿಶುದ್ಧವಾದ ಬದುಕು ನಡೆಸಿ, ಆದರ್ಶ ಮಯ ಜೀವನ ನಡೆಸಿ, ಇಡೀ ಭಾರತಕ್ಕೆ ಪ್ರಿಯರಾಗಿರುವಂತಹವರು. ಎಸ್.ಎಂ ಕೃಷ್ಣ, ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ನಂತರ ತಮ್ಮ ಸೊಸಿಯಲಿಸ್ ಮನೋಭಾವನೆ ಬಿಟ್ಟುಕೊಡದೇ ಪಥಮ ಬಾರಿಗೆ ಸ್ವತಂತವಾಗಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ನಾಲ್ಕೂ ಸದನಗಳಲ್ಲಿ ಸೇವೆ ಮಾಡಿದ್ದಾರೆ. ರಾಜ್ಯದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ದೇಶದ ಸೇವೆ ಹಾಗೂ ರಾಜ್ಯದ ಸೇವೆ ಮಾಡಿದ್ದಾರೆ.
ರಾಜಕಾರಣಿಗಳಿಗೆ ಆದರ್ಶವಾಗಿರುವ, ಆಡಳಿತಗಾರರಿಗೆ ಮಾರ್ಗದರ್ಶನವಾಗಿರುವ ಅವರ ಭಾಷೆ, ಮಿತವ್ಯಯದ ಮಾತು, ಅವರ ನಡವಳಿಗೆ ನಮ್ಮ ಯುವ ರಾಜಕಾರಣಿಗಳಿಗೆ ಅತ್ಯಂತ ಅವಶ್ಯವಿದೆ. ಅವರು ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬೆಂಗಳೂರಿನ ಬೆಳವಣಿಗೆ, ಐಟಿ ಬಿಟಿ ವಿಚಾರದಲ್ಲಿ ಅವರು ನೀಡಿದ ಕೊಡುಗೆ ಅಪಾರ, ಅವರು ಜಾರಿಗೆ ತಂದಿರುವ ಮಿಡ್ ಡೆ ಮೀಲ್ ಯೋಜನೆ ಯಶಸ್ವಿಯಾಗಿದೆ. ಅವರು ರಾಜಕಾರಣದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ಕೂಡ ತಮ್ಮ ವ್ಯಕ್ತಿತ್ವವನ್ನು ಬಿಟ್ಟುಕೊಡದೇ ಅತ್ಯಂತ ಸ್ವಾಭಿಮಾನದ ಬದುಕು ನಡೆಸಿದರು.
ಅವರು ಬಿಜೆಪಿ ಸೇರಿ ನಮ್ಮ ಪಧಾನ ಮಂತ್ರಿಗಳಿಗೆ ಅತ್ಯಂತ ಹತ್ತಿರದ ನಾಯಕರಾಗಿದ್ದರು. ಹಿಂದಿನ ಪೀಳಿಗೆಯ ಮಹತ್ವದ ಘಟ್ಟ ಕಳೆದುಕೊಂಡಂತಾಗಿದೆ. ಬರುವಂತಹ ದಿನಗಳಲ್ಲಿ ಅವರ ಬದುಕು ನಮಗೆ ಆದರ್ಶವಾಗಲಿ, ಎಸ್.ಎಂ. ಕೃಷ್ಣ ಅವರು ನನಗೆ ವಯಕ್ತಿಕವಾಗಿ ಅತ್ಯಂತ ಹತ್ತಿರವಾಗಿದ್ದ ನಾಯಕರು, ನಮ್ಮ ತಂದೆಯ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದ ನಾಯಕರಾಗಿದ್ದರು. ಅವರ ಅಗಲಿಗೆ ನನಗೆ ಬಹಳ ನೋವು ತಂದಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ ಸಂತಾಪ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ಕರ್ನಾಟಕ ಕಂಡಂತ ಮೇರು ವ್ಯಕ್ತಿತ್ವದ ಅಪ್ರತಿಮಾ ರಾಜಕಾರಣಿ, ದೂರದೃಷ್ಟಿಯುಳ್ಳ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿರುವುದು ಅತೀವ ನೋವನ್ನುಂಟು ಮಾಡಿದೆ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾಗದ ನಷ್ಟ.
ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ಅವರು ಕೈಗೊಂಡ ಜನಪರ ಕಾರ್ಯಗಳು ಅನನ್ಯ. ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕವನ್ನು, ಪ್ರಮುಖವಾಗಿ ಬೆಂಗಳೂರು ನಗರವನ್ನು ವಿಶ್ವಕ್ಕೆ ಪರಿಚಯಿಸಿದರು. ಈ ಮೂಲಕ ರಾಜ್ಯದ ಲಕ್ಷಾಂತರ ಯುವಕರಿಗೆ ಉದ್ಯೋಗ ಕಲ್ಪಿಸಿದರು. ರಾಜ್ಯದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಅವರ ರಾಜಕೀಯ ಜೀವನ ನನಗೆ ಅನುಕರಣೀಯ.
ಮೃತರ ಆತ್ಮಕ್ಕೆ ಚಿರ ಶಾಂತಿ ಕೊರುತ್ತೇನೆ. ಅವರ ಕುಟುಂಬ ವರ್ಗ, ಅಭಿಮಾನಿಗಳು, ಆಪ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಸಚಿವರು ಸಂತಾಪದಲ್ಲಿ ಹೇಳಿದ್ದಾರೆ.
ಎಸ್ ಎಂ ಕೃಷ್ಣ ನಿಧನಕ್ಕೆ ಸಚಿವ ಎಂ ಬಿ ಪಾಟೀಲ ಸಂತಾಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರ ನಿಧನದಿಂದ ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಒಂದು ಪ್ರಮುಖ ಕೊಂಡಿ ಕಳಚಿ ಬಿದ್ದಂತಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಅಧಿಕೃತವಾಗಿ ಯೂರೋಪ್ ಪ್ರವಾಸದಲ್ಲಿ ಇರುವ ಅವರು, ಅಲ್ಲಿಂದಲೇ ತಮ್ಮ ಶೋಕ ಸಂದೇಶ ಕಳಿಸಿ, ಕಂಬನಿ ಮಿಡಿದಿದ್ದಾರೆ.
ಕೃಷ್ಣ ಅವರು ಸುಸಂಸ್ಕೃತಿ ಮತ್ತು ಸೌಜನ್ಯಗಳಿಗೆ ಹೆಸರುವಾಸಿಯಾದ ವರ್ಚಸ್ವಿ ರಾಜಕಾರಣಿಯಾಗಿದ್ದರು. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ದೇಶದ ಐ ಟಿ ರಾಜಧಾನಿಯಾಗಿ ಬೆಳೆದು, ಜಾಗತಿಕ ಮಟ್ಟದಲ್ಲಿ ಒಂದು ಬ್ರ್ಯಾಂಡ್ ಆಗಿ ಬೆಳೆಯಿತು. ಅವರಿಗಿದ್ದ ದೂರದೃಷ್ಟಿಯ ಫಲದಿಂದಾಗಿ ಕರ್ನಾಟಕ ಇಂದು ಬಿಟಿ, ಸ್ಟಾರ್ಟಪ್, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮುಂತಾದ ವಲಯಗಳಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇದಕ್ಕಾಗಿ ನಾಡು ಅವರನ್ನು ಅದಾ ನೆನಪಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಕೃಷ್ಣ ಅವರು ಸ್ಪೀಕರ್, ಸಚಿವ, ಕೇಂದ್ರ ಮಂತ್ರಿ, ರಾಜ್ಯಪಾಲ ಹುದ್ದೆ ಮತ್ತು ಕೆಪಿಸಿಸಿ ಅಧ್ಯಕ್ಷ ಪದವಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಅಪರೂಪದ ವ್ಯಕ್ತಿಯಾಗಿದ್ದರು. ಓರ್ವ ವ್ಯಕ್ತಿಯಾಗಿ ಕೂಡ ಅವರು ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಅವರ ನಿಧನದಿಂದ ಉಂಟಾಗಿರುವ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೂ ಅಭಿಮಾನಿಗಳಿಗೂ ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಎಂದು ಪಾಟೀಲ ಪ್ರಾರ್ಥಿಸಿದ್ದಾರೆ.
7 ಕೋಟಿ ಕನ್ನಡಿಗರು ಮೆಚ್ಚಿದ ನಾಯಕ: ಈಶ್ವರ ಖಂಡ್ರೆ
ಬೆಳಗಾವಿ: ಕರ್ನಾಟಕದ 7ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದ ನಾಯಕ ರಾಜ್ಯದ 10ನೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಅವರು, ಬೆಂಗಳೂರು ನಗರಕ್ಕೆ ಸಿಲಿಕಾನ್ ಸಿಟಿ ಎಂಬ ಖ್ಯಾತಿ ಬರಲು ಕಾರಣರಾದ ದೂರದರ್ಶಿತ್ವದ ನಾಯಕ ಎಸ್.ಎಂ. ಕೃಷ್ಣ ಅವರು 7 ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದ ಮೇರು ನಾಯಕ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ನಿನ್ನೆ ತಾವು ವಿಧಾನಸಭೆಯಲ್ಲಿ ಅನುಭವ ಮಂಟಪದ ಬಗ್ಗೆ ಮಾತನಾಡುವಾಗ 2002ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಮ್ಮತಿಸಿದ್ದನ್ನು ಸ್ಮರಿಸಿದ್ದೆ. ಆದರೆ ಅವರು ಇಂದು ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಕೇಳಿ ತೀವ್ರ ನೋವಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ವೈಯಕ್ತಿಕ ರಾಗ ದ್ವೇಷಕ್ಕೆ ಆಸ್ಪದವಿಲ್ಲದೆ ಕಾರ್ಯ ನಿರ್ವಹಿಸಿದ ಎಸ್.ಎಂ. ಕೃಷ್ಣ ಅವರು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದವರು. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಅವರು ತಮ್ಮದೇ ಆದ ಪರಿಕಲ್ಪನೆ ಇಟ್ಟುಕೊಂಡಿದ್ದರು.ಹೀಗಾಗಿಯೇ ಅವರು ತಮ್ಮ ದೂರದರ್ಶಿತ್ವದಿಂದ ಈ ನಾಡಿನಲ್ಲಿ ಅಳಿಸಲಾರದ ಛಾಪು ಮೂಡಿಸಿದ್ದರು ಎಂದು ತಿಳಿಸಿದ್ದಾರೆ.
ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ, ಮುಖ್ಯಮಂತ್ರಿಗಳಾಗಿ ಹಾಗೂ ಸಂಸತ್ ಸದಸ್ಯರಾಗಿ, ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಈ ನಾಡಿಗೆ ಅನುಪಮ ಕೊಡುಗೆ ನೀಡಿರುವ ಎಸ್.ಎಂ. ಕೃಷ್ಣ ಅವರನ್ನು ಕರ್ನಾಟಕ ಮತ್ತು ಕರುನಾಡಿನ ಜನರು ಮರೆಯಲು ಸಾಧ್ಯವೇ ಇಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸಂಯಮ, ತಾಳ್ಮೆ, ಸಜ್ಜನಿಕೆಗೆ ಹೆಸರಾಗಿದ್ದ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹಲವು ಸವಾಲುಗಳನ್ನು ಎದುರಿಸಿದರು, ಆದರೆ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದರು ಎಂದು ತಿಳಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ
ಬೆಳಗಾವಿ : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ರಾಜ್ಯಪಾಲರಾಗಿ ಅವರು ಈ ನಾಡಿಗೆ ಸಲ್ಲಿಸಿದ ಸೇವೆ ಅನುಪಮವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಅವರು ಗುರುವಿನಂತೆ ಇದ್ದು ಮಾರ್ಗದರ್ಶನ ನೀಡುತ್ತಿದ್ದರು. ಅವರ ಅವಧಿಯಲ್ಲಿ ಐಟಿ, ಬಿಟಿ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಕರ್ನಾಟಕ ವಿಶ್ವದಲ್ಲೇ ಹೆಸರಾಗುವಂತೆ ಮಾಡಿದ್ದರು ಎಂದು ಸಚಿವರು ಸ್ಮರಿಸಿದ್ದಾರೆ.
ಅಜಾತಶತ್ರುಗಳಾಗಿದ್ದ ಅವರು, ಕಿರಿಯ ರಾಜಕಾರಣಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಅವರ ನಡೆ ನುಡಿ, ಜೀವನ ಶೈಲಿ, ರಾಜಕೀಯದ ಹೆಜ್ಜೆಗಳು ಸದಾ ಅನುಕರಣೀಯ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ