Merry Christmas: ಗುಬ್ಬಿ ಪಟ್ಟಣದಲ್ಲಿದೆ ಶತಮಾನದ ಇತಿಹಾಸವಿರುವ ವಿಲಿಯಂ ಅರ್ಥರ್ ಸ್ಮಾರಕ ಚರ್ಚ್, ಅಲ್ಲೀಗ ಕ್ರಿಸ್‌ಮಸ್ ಸಂಭ್ರಮ
Merry Chirstmas: ಗುಬ್ಬಿ ಪಟ್ಟಣದ ಶತಮಾನ ಹಳೆಯ ವಿಲಿಯಂ ಅರ್ಥರ್ ಸ್ಮಾರಕ ಚರ್ಚ್‌ನಲ್ಲಿ ಈಗ ಕ್ರಿಸ್ಮಸ್ ಹಬ್ಬದ ಸಡಗರ. ಗುಬ್ಬಿಯಲ್ಲಿರುವ ಈ ಐತಿಹಾಸಿಕ ಚರ್ಚ್ ಈಗ ಕ್ರಿಸ್ಮಸ್ ಹಬ್ಬದ ಆಚರಣೆಗಾಗಿ ವಿಶೇಷ ಅಲಂಕಾರಗಳೊಂದಿಗೆ ಸಜ್ಜಾಗಿದೆ. (ವರದಿ: ಈಶ್ವರ್, ತುಮಕೂರು)
Merry Chirstmas: ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ವಿಲಿಯಂ ಅರ್ಥರ್ ಸ್ಮಾರಕ ಚರ್ಚ್‌ನಲ್ಲಿ ಈಗ ಕ್ರಿಸ್ಮಸ್ ಹಬ್ಬದ ಸಡಗರ. ಗುಬ್ಬಿಯಲ್ಲಿರುವ ಈ ಐತಿಹಾಸಿಕ ಚರ್ಚ್ ಈಗ ಕ್ರಿಸ್ಮಸ್ ಹಬ್ಬದ ಆಚರಣೆಗಾಗಿ ವಿಶೇಷ ಅಲಂಕಾರಗಳೊಂದಿಗೆ ಸಜ್ಜಾಗಿದೆ. ವಿಶೇಷ ವಾಸ್ತುಶಿಲ್ಪ ಹೊಂದಿರುವ ಈ ಚರ್ಚ್‌ಗೆ ದೊಡ್ಡ ಇತಿಹಾಸವಿದ್ದು ಬ್ರಿಟಿಷರ ಕಾಲದಲ್ಲೇ ನಿರ್ಮಾಣವಾಗಿರುವ ಚರ್ಚ್ ಇದಾಗಿದೆ. ವೆಸ್ಲಿಯನ್ ಮಿಷನರಿಗಳು 1800ರಲ್ಲಿ ಕರ್ನಾಟಕಕ್ಕೆ ಬಂದಿದ್ದು, ಮೈಸೂರು ಸಂಸ್ಥಾನದ ಒಡೆಯರ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಭೌಗೋಳಿಕವಾಗಿ ಗುಬ್ಬಿಯು ಕೇಂದ್ರ ಸ್ಥಾನವಾಗಿದ್ದ ಕಾರಣ ಅವರು ತಮ್ಮ ಮಿಷನರಿ ಚಟುವಟಿಕೆಗಳನ್ನು ಈ ಸ್ಥಳದಿಂದ ಆರಂಭಿಸಿದರು ಎಂಬ ಮಾಹಿತಿ ಇದೆ.
ಗುಬ್ಬಿಯಲ್ಲಿ ರೆವರೆಂಡ್ ಥಾಮಸ್ ಹಡ್ಸನ್
ಹೆಡ್ಸನ್ 1836 ರಲ್ಲಿ ಕೊಡಗು ಮತ್ತು ಪಶ್ಚಿಮ ಕರಾವಳಿಗೆ ಪ್ರವಾಸಕ್ಕೆ ಬಂದ ಸಮಯದಲ್ಲಿ ತುಮಕೂರಿನ ಮಾರ್ಗವಾಗಿ ಹಿಂತಿರುಗಿದರು, ಕೆಲವು ದಿನಗಳು ತುಮಕೂರಿನಲ್ಲಿ ಕಳೆದ ನಂತರ ಅಲ್ಲಿಂದ 12 ಮೈಲಿ ದೂರವಿರುವ ಗುಬ್ಬಿಗೆ ಹೋದರು, ಗುಬ್ಬಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿಷನರಿ ಕಾರ್ಯಕ್ಕೆ ಸೂಕ್ತ ಸ್ಥಳ ಎಂದು ಇದನ್ನು ಆಯ್ಕೆಮಾಡಿದರು. 1837 ರಲ್ಲಿ ಪ್ರಥಮ ಸಭೆಯು ದೇವರ ಆರಾಧನೆಗೆ ಒಂದು ಕಟ್ಟಡವನ್ನು ಶ್ರೀಮತಿ ಹಾಗೂ ರೆವರೆಂಡ್ ಥಾಮಸ್ ಹಡ್ಸನ್ ಕಟ್ಟಿಸಿದರು, 1837 ರಲ್ಲಿ ವೆಸ್ಲಿಯನ್ ಮೆಥೋಡಿಸ್ಟ್ ಮಿಷನರಿಗಳು ಈ ಸಭೆಯನ್ನು ಸ್ಥಾಪಿಸಿದರು, ಥಾಮಸ್ ಹಡ್ಸನ್ ಅವರ ವರದಿಯ ಫಲಿತಾಂಶವಾಗಿ 1837 ರಲ್ಲಿ ಸಿನೋಡಿನ ನಿರ್ಧಾರದ ಪ್ರಕಾರ ಗುಬ್ಬಿಯಲ್ಲಿ ಮಿಷನರಿ ಕೇಂದ್ರ ಸ್ಥಾಪಿಸಲಾಯಿತು. 1837 ಏಪ್ರಿಲ್ ನಲ್ಲಿ ಹಡ್ಸನ್ ಅವರು ಮತ್ತು ಅವರ ಪತ್ನಿ ಹಾಗೂ ಸಹಾಯಕ ಮಿಷನರಿ ಚಾರ್ಲ್ಸ್ ಫ್ರಾಂಕ್ ಇನ್ ಗುಬ್ಬಿಗೆ ಬಂದು ಒಂದು ಡೈರಿಯಲ್ಲಿ ವಾಸಿಸತೊಡಗಿದರು, ನಂತರ ಒಂದು ಸಣ್ಣ ಕಟ್ಟಡ ಕಟ್ಟಿಕೊಂಡರು, 1848 ರ ತನಕ ಗುಬ್ಬಿ ಮದ್ರಾಸ್ ಜಿಲ್ಲೆಗೆ ಸೇರಿತ್ತು, ತರುವಾಯ ಅದು ಮೈಸೂರು ಜಿಲ್ಲೆಗೆ ಸೇರಲ್ಪಟ್ಟಿತು.
ಮುಂದೆ, 1838 ರಲ್ಲಿ ಶ್ರೀಮತಿ ಹಡ್ಸನ್ ಗುಬ್ಬಿಯಲ್ಲಿ ಒಂದು ಖಾಯಂ ಮಿಷನರಿ ಮನೆಗೆ ಶಂಕುಸ್ಥಾಪನೆ ನೆರವೇರಿಸಿದರು, ವಿಲಿಯಂ ಅರ್ಥರ್ ಅಕ್ಟೋಬರ್ 1838 ರಲ್ಲಿ ಗುಬ್ಬಿಗೆ ಬಂದರು ವಿಲಿಯಂ ಅರ್ಥ್‌ರ್ ಗುಬ್ಬಿಯಲ್ಲಿ ಕೇವಲ ಎರಡು ವರ್ಷ ಮಾತ್ರ ಸೇವೆ ಸಲ್ಲಿಸಿದರು, ಅವರು ಸಲ್ಲಿಸಿದ ಸೇವೆ ಜನರ ಮನಸ್ಸಿನ ಮೇಲೆ ಅದ್ಭುತವಾಗಿ ಪರಿಣಾಮವನ್ನೇ ಬೀರಿತ್ತು, 1840 ರಲ್ಲಿ ಹಿಂತಿರುಗಿದರು. ಸೇವೆ ಪ್ರಾರಂಭವಾದ ಐದು ವರ್ಷಗಳ ನಂತರ 1843ರಲ್ಲಿ ಮಿಷನರಿ ಸೇವೆಯ ಫಲಶ್ರುತಿ ಕಂಡು ಬಂದಿತು, ವೃತ್ತಿಯಲ್ಲಿ ಅಗಸನಾಗಿದ್ದ ಸಿಂಗೋನಹಳ್ಳಿಯ ಚಿಕ್ಕಯ್ಯ ವಿಶ್ವಾಸಿಯಾಗಿ ಮತಾಂತರ ಹೊಂದಿ ಡ್ಯಾನಿಯಲ್ ಎಂಬ ಹೆಸರನ್ನು ಪಡೆದುಕೊಂಡನು, ಈತನು ಆತ ತನ್ನ ಕೊನೆ ಉಸಿರು ಇರುವವರೆಗೂ ಕ್ರೈಸ್ತ ಧರ್ಮದ ಮೇಲೆ ದೃಢವಾದ ನಂಬಿಕೆ ಇಟ್ಟುಕೊಂಡು 1875ರಲ್ಲಿ ದೈವಾಧೀನನಾದನು, ಈತನ ಮೂರನೇ ತಲೆಮಾರಿನವರು ಇಂದು ಸಹ ಗುಬ್ಬಿಯಲ್ಲಿ ವಾಸ ಮಾಡುತ್ತಿದ್ದಾರೆ.
ಗುಬ್ಬಿಯಲ್ಲಿ 188 ವರ್ಷಕ್ಕೂ ಹಿಂದೆ ಮಿಷನರಿ ಕಾರ್ಯ ಶುರು
ಮಿಷನರಿಗಳು ಗುಬ್ಬಿಯಲ್ಲಿ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿದರು, ಬಾಲಕಿಯರ ಮಾಧ್ಯಮಿಕ ಪಾಠಶಾಲೆ, ಬೆಂಗಳೂರು ಪಾಳ್ಯ ಶಾಲೆ, ಸಿಂಗೋನಹಳ್ಳಿ ಮತ್ತು ಹೊಸಹಳ್ಳಿಗಳಲ್ಲಿ ಶಾಲೆಗಳನ್ನ ಆರಂಭಿಸಿದರು, ಶಿಕ್ಷಣದ ಜೊತೆಯಲ್ಲಿ ವೈದ್ಯಕೀಯ ಸೇವೆ ನೀಡಲು ಮಿಷನರಿಗಳು ಮುಂದಾದವು.1904 ರಿಂದ 1944 ರ ಅವಧಿಯಲ್ಲಿ ಪ್ರತಿ ಸೋಮವಾರ ಚಿಕಿತ್ಸಾಲಯ ನಡೆಸಲಾಗುತ್ತಿತ್ತು, ಮಿಷನರಿಗಳು ಪ್ರೀತಿ ಮತ್ತು ಕಾಳಜಿಯಿಂದ ನೀಡುತ್ತಿದ್ದ ವೈದ್ಯಕೀಯ ಸೇವೆಯನ್ನ ಗುಬ್ಬಿಯ ಜನರು ಗೌರವದಿಂದ ಸ್ವಾಗತಿಸಿದರು. 1934 ರಿಂದ 37ರ ಅವಧಿಯಲ್ಲಿ ಗುಬ್ಬಿ ಭಾಗದ ಹಳ್ಳಿಗಳು ಪ್ಲೇಗ್ ಖಾಯಿಲೆಗೆ ತುತ್ತಾಗಿದ್ದವು, ಇಂತಹ ಸಂದರ್ಭದಲ್ಲಿ ಹೆಚ್ಚು ಸಾವು ಸಂಭವಿಸುತ್ತಿತ್ತು, ಈ ಸಾವನ್ನ ನಿವಾರಣೆ ಮಾಡುವುದೇ ದುಸ್ತರವಾಗಿತ್ತು, ಅಂತಹ ಸಮಯದಲ್ಲಿ ಮಿಷನರಿಯಲ್ಲಿ ಕೆಲಸ ಮಾಡುತ್ತಿದ್ದಂತಹ ಸುವಾರ್ತಾ ಸೇವಕರು ಅವರ ಸೇವೆ ಮಾಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದರು.
ಶತಮಾನದ ಇತಿಹಾಸವಿರುವ ವಿಲಿಯಂ ಆರ್ಥರ್ ಸ್ಮಾರಕ ಚರ್ಚ್
1937ನೇ ವರ್ಷವೂ ವಿಲಿಯಮ್ ಅರ್ಥರ್ ಸ್ಮಾರಕ ದೇವಾಲಯ ಹಾಗೂ ಮಿಷನರಿಯಲ್ಲಿ ಕಾರ್ಯಕ್ಕೆ ಮೆಚ್ಚುಗೆ ಇದ್ದು 1937 ರಲ್ಲಿ ಗುಬ್ಬಿಯಲ್ಲಿದ್ದ ದೇವಾಲಯದ ಶತಮಾನೋತ್ಸವ ಆಚರಿಸಲಾಯಿತು, ಈ ಶತಮಾನೋತ್ಸವದ ನೆನಪಿಗಾಗಿ ಒಂದು ಕಟ್ಟಡ ಕಟ್ಟಲಾಯಿತು, ಅದೇ ಈಗಿನ ಭಜನಾ ಮಂದಿರ.
ಗುಬ್ಬಿ ರಸ್ತೆಯಲ್ಲಿರುವ ವಿಲಿಯಂ ಅರ್ಥರ್ ಸ್ಮಾರಕ 1837ರಲ್ಲಿ ಗುಬ್ಬಿಗೆ ಬಂದ ಮಿಷನರಿಗಳು ಶ್ರಮಪಟ್ಟು ಸೇವೆ ಸಲ್ಲಿಸಿದ್ದಕ್ಕೆ ಸಾಕ್ಷಿಯಾಗಿ ನಿಂತಿದ್ದು ಡಿಸೆಂಬರ್ ತಿಂಗಳು ಪೂರ್ತಿ ಪ್ರತಿನಿತ್ಯ ಹಲವು ಆಚರಣೆ ಇಲ್ಲಿ ನಡೆದು ಬಂದಿವೆ, ಇದೀಗ ಕ್ರಿಸ್‌ಮಸ್ ಹಬ್ಬಕ್ಕೆ ಚರ್ಚ್ ಸಿಂಗಾರಗೊಂಡಿದೆ. ಕರ್ನಾಟಕದ ಮೊದಲ ಸಭೆ ನಡೆದಿದ್ದು ಇಲ್ಲಿಯೆ, ಅಂದಾಜು 2 ಶತಮಾನಗಳ ಇತಿಹಾಸವಿದ್ದು ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿತ್ತು, ಕ್ರಿಸ್‌ಮಸ್ ಹಿನ್ನಲೆ ಡಿ.1 ರಿಂದ ಡಿ.31 ರ ವರೆಗೆ ಹಲವು ಆಚರಣೆ ನಡೆಯುತ್ತವೆ ಗುಬ್ಬಿ ಚರ್ಚ್‌ನ ಫಾದರ್ ಅಜಯ್ ಪ್ರಭುದಾಸ್ ತಿಳಿಸಿದ್ದಾರೆ.