ಬೆಂಗಳೂರು: 4 ಲಕ್ಷ ರೂ ಸಾಲಕ್ಕೆ 42 ಲಕ್ಷ ರೂಪಾಯಿ ವಸೂಲಿ; ಮೀಟರ್ ಬಡ್ಡಿ ದಂಧೆಯ ಆರೋಪಿ ಶಾರದಮ್ಮ ಬಂಧನ
ಸಾಲದ ರೂಪದಲ್ಲಿ ಪಡೆದಿದ್ದು 4 ಲಕ್ಷ 23 ಸಾವಿರ, ಆದರೆ ಮರುಪಾವತಿ ಮಾಡಿರೋದು ಬರೋಬ್ಬರಿ 42 ಲಕ್ಷ ರೂಪಾಯಿ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆಯ ಆರೋಪದಲ್ಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಅಪರಾಧ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: 4.23 ಲಕ್ಷ ರೂಪಾಯಿ ಸಾಲಕ್ಕೆ 42 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ವಸೂಲಿ ಮಾಡಿ ದೌರ್ಜನ್ಯ ಎಸಗಿದ್ದ ಆರೋಪದಡಿಯಲ್ಲಿ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋನದಾಸಪುರ ಗ್ರಾಮದ ನಿವಾಸಿ ಶಾರದಮ್ಮ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯ ಮೀಟರ್ ಬಡ್ಡಿ ವಂಚನೆ ಕುರಿತು ಅದೇ ಗ್ರಾಮದ ಪವಿತ್ರಾ ಎಂಬುವರು ದೂರು ನೀಡಿದ್ದರು.
ಪವಿತ್ರಾ ಅವರು ಶಾರದಮ್ಮ ಅವರ ಬಳಿ ಹಂತ ಹಂತವಾಗಿ ಸುಮಾರು 4.23 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆರಂಭದಲ್ಲಿ ತಿಂಗಳಿಗೆ ಶೇ 10 ಬಡ್ಡಿ ಪಡೆಯುತ್ತಿದ್ದರು. ಒಂದು ವರ್ಷದ ನಂತರ ಶಾರದಮ್ಮ ವಾರಕ್ಕೆ ಶೇ 15 ಬಡ್ಡಿಯನ್ನು ನೀಡುವಂತೆ ಕಿರುಕುಳ ನೀಡಿ 42 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಾಲ ಕುರಿತು ಪತಿಗೆ ತಿಳಿಸಿರಲಿಲ್ಲ. ಸಾಲಕ್ಕೆ ಬಡ್ಡಿ ಕಟ್ಟಲು ತಮ್ಮ ಸಂಬಂಧಿಕರಿಂದ ಸುಮಾರು 20 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿ ಶಾರದಮ್ಮ ಅವರಿಗೆ ನೀಡಲಾಗಿದೆ. ಬಡ್ಡಿ ಹಣಕ್ಕಾಗಿ ಶಾರದಮ್ಮ ನೀಡುತ್ತಿದ್ದ ಮಾನಸಿಕ ಕಿರುಕುಳ ತಾಳಲಾರದೆ ಪವಿತ್ರಾ ಒಂದು ಬಾರಿ ಆತ್ಮಹತ್ಯೆಗೊ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪತಿಗೆ ವಿಷಯ ತಿಳಿದು ಶಾರದಮ್ಮ ಬಳಿ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
18 ಲಕ್ಷ ಹಣವನ್ನು ನೀಡಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಉಳಿದ ಹಣವನ್ನು ನಗದು ಮೂಲಕ ನೀಡಲಾಗಿದೆ. ಪ್ರಕರಣ ದಾಖಲಾಗಿ ಮೂರು ದಿನ ಕಳೆದರೂ ಪೊಲೀಸರು ಶಾರದಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಮಹಿಳೆ ಪವಿತ್ರ ದಂಪತಿ ಆರೋಪಿಸಿದ್ದಾರೆ.
ಕೌಟುಂಬಿಕ ಕಲಹ; ಕೆಎಸ್ ಡಿಎಲ್ ಉದ್ಯೋಗಿ ಆತ್ಮಹತ್ಯೆ
ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್‌ನ(ಕೆಎಸ್‌ಡಿಎಲ್) ಮಾರುಕಟ್ಟೆ ವಿಭಾಗದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಅಮೃತ್ ಶಿರೂರ್ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಕೌಟುಂಬಿಕ ಕಲಹದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ..
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಮೂಲದ ಅಮೃತ್ ಅವರು ಕೆಎಸ್‌ಡಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮಿ ಲೇ ಔಟ್‌ನ ಮುನೇಶ್ವರ ಬ್ಲಾಕ್‌ನ 4ನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಡಿ.28ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ಅಮೃತ್ ಅವರು ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೆ ಮಾಲೀಕ ಗಿರೀಶ್ ದೂರು ನೀಡಿದ್ದಾರೆ.
ಬಿಎನ್ಎಸ್ಎಸ್ ಕಲಂ 194 ಅಡಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ತು ವರ್ಷದಿಂದ ಕೆಎಸ್‌ಡಿಎಲ್‌ನಲ್ಲಿ ಅಮೃತ್ ಅವರು ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿಗೆ ಡೈವೋರ್ಸ್ ನೀಡಿದ್ದ ಅವರು ಎರಡನೇ ವಿವಾಹ ಮಾಡಿಕೊಂಡಿದ್ದರು. ಆದರೆ ಈ ವಿವಾಹದಿಂದಲೂ ಅವರು ನೆಮ್ಮದಿ ಕಂಡುಕೊಂಡಿರಲಿಲ್ಲ. ಕೌಟುಂಬಿಕ ಕಲಹದಿಂದ ಬೇಸತ್ತು, ಎರಡನೇ ಪತ್ನಿಗೂ ವಿಚ್ಛೇದನ ನೀಡಲು ಮುಂದಾಗಿದ್ದರು. ಡೈವೋರ್ಸ್ ಕುರಿತು ವಿಚಾರಣೆ ನಡೆಯುತ್ತಿರುವಾಗಲೇ ಆತ್ಮಹತ್ಯೆಗ ಶರಣಾಗಿದ್ದಾರೆ.
ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದರು ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದೆ. ಕೈಯಲ್ಲಿ ಡೆತ್ ನೋಟ್ ಹಿಡಿದುಕೊಂಡೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೋಷಕರಿಗೆ ಒಳ್ಳೆಯ ಮಗನಾಗಲಿಲ್ಲ. ಹೆಂಡತಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಮರಣ ಪತ್ರದಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವ್ಹೀಲಿಂಗ್ ಮಾಡುತ್ತಿದ್ದ 7 ಮಂದಿ ವಿರುದ್ಧ ಎಫ್‌ಐಆರ್
ನಗರದಲ್ಲಿ ವ್ಹೀಲೀಂಗ್ ಮಾಡುತ್ತಾ ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಕಾರ್ಯಾಚರಣೆಯನ್ನು ನಗರ ಸಂಚಾರ ಪೊಲೀಸರು ಮುಂದುವರೆಸಿದ್ದಾರೆ. ಡಿಸೆಂಬರ್ 28 ಹಾಗೂ 29ರಂದು ವ್ಹೀಲಿಂಗ್ ಮಾಡುತ್ತಾ ದ್ವಿಚಕ್ರ ವಾಹನ ಓಡಿಸುತ್ತಿದ್ದ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಗ್ರಹಪಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮ ಸಂಚಾರ ವಿಭಾಗದ ಬ್ಯಾಟರಾಯನಪುರ, ಕೆಂಗೇರಿ, ಜ್ಞಾನಭಾರತಿ ಹಾಗೂ ಕಾಮಾಕ್ಷಿಪಾಳ್ಯ ಠಾಣೆಯ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಈ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.