Micro Finance: ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್‌ಗಳಿಗೆ ಮೂಗುದಾರ, ಸುಗ್ರಿವಾಜ್ಞೆ ಮೂಲಕ ಕಠಿಣ ಕಾನೂನು ಜಾರಿಗೆ ಸಂಪುಟ ತೀರ್ಮಾನ
ಕರ್ನಾಟಕದಲ್ಲಿ ಮಿತಿ ಮೀರಿ ಜನ ಜೀವ ಕಳೆದುಕೊಂಡು ಮನೆ ತೊರೆಯುವ ಹಂತಕ್ಕೂ ಹೋಗಿರುವ ಮೈಕ್ರೋ ಫೈನಾನ್ಸ್‌ಗಳ ಮೇಲೆ ನಿಗ್ರಹ ಹೇರಲು ಸುಗ್ರಿವಾಜ್ಞೆ ಮೂಲಕ ಕಠಿಣ ಕಾನೂನು ಜಾರಿಗೆ ಸಚಿವ ಸಂಪುಟ ತೀರ್ಮಾನಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಮೈಕ್ರೊ ಫೈನಾನ್ಸ್ ಕಿರುಕುಳಕ್ಕೆ ಹಲವರು ಆತ್ಮಹತ್ಯೆಗೆ ಶರಣಾಗಿ, ಮನೆ ತೊರೆದು ಹೋಗಿರುವ ಘಟನೆಗಳು ಹೆಚ್ಚಿರುವ ನಡುವೆಯೇ ಮೈಕ್ರೋಫೈನಾನ್ಸ್‌ನವರ ಬೆದರಿಕೆ, ದಬ್ಬಾಳಿಕೆಗೆ ಕಡಿವಾಣ ಹಾಕಲು ಕೊನೆಗೂ ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಗಟ್ಟಿಯಾದ ಕಾನೂನು ರೂಪಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಸಭೆ ಸಂಪೂರ್ಣ ಅಧಿಕಾರ ನೀಡಿದೆ. ಗುರುವಾರ ಸಂಜೆಯೇ ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವರೊಂದಿಗೆ ಸಭೆ ನಡೆಯಲಿದ್ದು, ಕಾನೂನಿ ಸ್ವರೂಪ, ಸುಗ್ರಿವಾಜ್ಞೆ ಕುರಿತು ಅಂತಿಮ ತೀರ್ಮಾನವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋಫೈನಾನ್ಸ್ ಹಾವಳಿ ಹಾಗೂ ತಡೆ ಕುರಿತಾಗಿಯೇ ಮಹತ್ವದ ಚರ್ಚೆ ನಡೆಯಿತು. ಕಿರುಕುಳ ತಡೆದು ಜನ ನಿರುಮ್ಮಳ, ಭಯಮುಕ್ತವಾಗಿ ಬದುಕುವ ನಿಟ್ಟಿನಲ್ಲಿಯೇ ಕಾನೂನು ಜಾರಿಗೊಳಿಸಲು ಸದ್ಯವೇ ಸುಗ್ರೀವಾಜ್ಞೆ ಹೊರಡಿಸುವಕ್ಕೂ ಅನುಮೋದನೆ ಸಿಕ್ಕಿತು. ಈ ಕುರಿತು ಹಲವು ಸಚಿವರು ತಮ್ಮ ಭಾಗದಲ್ಲಿ ಆಗುತ್ತಿರುವ ಕಿರುಕುಳ, ಘಟನೆಗಳ ಕುರಿತು ಗಂಭೀರವಾಗಿಯೇ ಚರ್ಚಿಸಿದರು. ಎರಡು ವಾರದಲ್ಲಿ ಮೈಸೂರು, ಚಾಮರಾಜನಗರ, ತುಮಕೂರು, ಧಾರವಾಡ, ಕಲಬುರಗಿ, ರಾಯಚೂರು ಸಹಿತ ಹಲವು ಕಡೆಗಳಲ್ಲಿ ಮೈಕ್ರೋಫೈನಾನ್ಸ್‌ನ ಕಿರುಕುಳದ ಘಟನೆಗಳು, ಇದರಿಂದ ಹದಿನೈದಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿರುವ ಕುರಿತು ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ಗುರುವಾರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್‌ಕೆ ಪಾಟೀಲ್, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆಗೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಗುರುವಾರ ಸಂಜೆ 4 ಘಂಟೆಗೆ ಹಿರಿಯ ಸಚಿವರ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಅಂತಿಮ ತೀರ್ಮಾನವೂ ಆಗಲಿದೆ. ಅಂತಿಮ ತೀರ್ಮಾನ ಕೈಗೊಳ್ಳುವ ಪರಮಾಧಿಕಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಅವರು ನೀಡುವ ಸೂಚನೆ ಆಧರಿಸಿ ಕಾನೂನು ಸಚಿವಾಲಯ ಕಠಿಣ ಕಾನೂನು ರೂಪಿಸಲಿದೆ. ಆನಂತರ ಅದನ್ನು ಜಾರಿಗೊಳಿಸಲಾಗುತ್ತದೆ ಎಂದರು.
ಈ ಕುರಿತು ತೀರ್ಮಾನಗಳನ್ನು ಕೈಗೊಳ್ಳಲು ಸಂಪುಟ ಸಭೆಯಲ್ಲಿ ಸಂಪೂರ್ಣ ಅಧಿಕಾರ ಸಿಎಂ ಅವರಿಗೆ ನೀಡಲಾಗಿದೆ. ನಮ್ಮಲ್ಲಿರುವ ಕಾನೂನುಗಳು ಕೆಲವು ಚೆನ್ನಾಗಿದ್ದರೆ, ಇನ್ನಷ್ಟು ಕಾನೂನುಗಳಲ್ಲಿ ವ್ಯತ್ಯಾಸಗಳೂ ಇವೆ. ಈ ಕಾರಣದಿಂದಲೇ ಕಾನೂನಾತ್ಮಕ ತೀರ್ಮಾನಕ್ಕೆ ಸಂಜೆ ಹಿರಿಯ ಸಚಿವರ ಸಭೆ ಕರೆಯಲಾಗಿದೆ. ಸಿಎಂ ಜೊತೆ ಸಭೆಯ ಬಳಿಕ ಕಾನೂನಾತ್ಮಕವಾಗಿ ಅಂತಿಮ ತೀರ್ಮಾನ ಆಗಲಿದೆ ಎನ್ನುವುದು ಎಚ್‌ಕೆ ಪಾಟೀಲ್ ನೀಡಿದ ವಿವರಣೆ.
ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುವುದು, ಕಿರುಕುಳ ನೀಡುವುದನ್ನು ನಿಷೇಧಿಸುವ "ಕರ್ನಾಟಕ ಮೈಕ್ರೋಫೈನಾನ್ಸ್ ಪ್ರಿವೆನ್ಷನ್ ಆಫ್ ಕೋಯೆರ್ಸಿವ್ ಆ್ಯಂಡ್ ಇನ್‌ಹ್ಯೂಮನ್ ಆ್ಯಕ್ಷನ್ 2025" ಮಸೂದೆ ಕುರಿತು ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ಹಾಗೂ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಕಂದಾಯ ಮತ್ತು ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಗಟ್ಟಲು ತ್ವರಿತವಾಗಿ ಕಾನೂನು ತರಬೇಕು ಎಂದು ಮುಖ್ಯಂಮತ್ರಿಯವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮೈಕ್ರೋಫೈನಾನ್ಸ್‌ಗಳ ಅಮಾನುಷ ವರ್ತನೆಯ ಘಟನೆಗಳು ಗಮನಕ್ಕೆ ಬಂದ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಡಾ.ಪರಮೇಶ್ವರ್ ಬುಧವಾರ ಹೇಳಿದ್ದರು.
