ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿಗೆ ಮಿತಿಮೀರಿ ವರ್ತಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಿ: ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಕಟ್ಟಾಜ್ಞೆ
ಕರ್ನಾಟಕದಲ್ಲಿ ಎರಡು ವಾರದಿಂದ ಮೈಕ್ರೋಫೈನಾನ್ಸ್ ಕಂಪೆನಿಗಳ ವಸೂಲಿ ಕಿರುಕುಳದಿಂದ ಹಲವರು ಆತ್ಮಹತ್ಯೆಗೆ ಶರಣಾದರೆ, ಇನ್ನಷ್ಟು ಮಂದಿ ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.

ಬೆಂಗಳೂರು: ʼರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು 59 ಸಾವಿರ ಕೋಟಿ ರೂ. ಸಾಲ ನೀಡಿವೆ. ಅಲ್ಲದೆ, ತಮ್ಮ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಸಲುವಾಗಿ ಆರ್‌ಬಿಐ ಮಾರ್ಗಸೂಚಿಗಳನ್ನೇ ಉಲ್ಲಂಘಿಸಿ ಸಾಲ ನೀಡುತ್ತಿವೆ. ಓರ್ವ ವ್ಯಕ್ತಿಗೆ 2ಲಕ್ಷಕ್ಕಿಂತ ಹೆಚ್ಚು ಸಾಲ ನೀಡಬಾರದು ಎಂದು ಆರ್‌ಬಿಐ ಮಾರ್ಗಸೂಚಿ ಇದೆ. ಇದನ್ನು ಯಾರೂ ಅನುಸರಿಸುತ್ತಿಲ್ಲ. ಓರ್ವ ವ್ಯಕ್ತಿಗೆ 5-6 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ. ಸಾಲ ನೀಡುವಾಗ ಸಾಲ ಪಡೆದವರ ಆರ್ಥಿಕ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿರುವುದು ಅಹಿತಕರ ಪ್ರಸಂಗಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ". ಇದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಕಂದಾಯ ಇಲಾಖೆ ನೀಡಿರುವ ಕಟ್ಟುನಿಟ್ಟಿನ ಸೂಚನೆ.
ಸಾಲ ಮರುಪಾವತಿ ಮಾಡದಿದ್ದರೆ ಮೈಕ್ರೋ ಫೈನಾನ್ಸ್ ಕಂಪೆನಿಗಳ ಅಸ್ಥಿತ್ವಕ್ಕೂ ತೊಂದರೆಯಾಗಲಿದೆ. ಹೀಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಈ ವಾರದೊಳಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿ ಸಾಲ ವಸೂಲಾತಿಗೆ ಆರ್‌ಬಿಐ ನಿಗದಿಪಡಿಸಿರುವ ಮಾದರಿ ಕಾರ್ಯಾಚರಣೆಯನ್ನು ಪಾಲನೆ ಮಾಡಲು ಹಾಗೂ ಬೇಜಾಬ್ದಾರಿಯಿಂದ ಸಾಲ ನೀಡುವುದನ್ನೂ ನಿಗ್ರಹಿಸಲು ಸೂಚಿಸಲಾಗಿದೆ ಎನ್ನುವುದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ವಿವರಣೆ.
ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಯಾವುದೇ ವಿಶೇಷ ಅಧಿಕಾರ ನೀಡಿಲ್ಲ. ಆದರೆ, ರಾಜ್ಯ ಸರ್ಕಾರವೇ ತನ್ನ ಅಧಿಕಾರದ ಮಿತಿಯಲ್ಲಿ ಬೇರೆ ಬೇರೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್ಗಳ ಅಕ್ರಮಗಳಿಗೆ ಕಡಿವಾಣ ಹಾಕಲಿದೆ. ಇಂತಹ ಕಂಪೆನಿಗಳ ಅವ್ಯಾಹತ ಅಕ್ರಮಗಳನ್ನು ಕಂಡು ರಾಜ್ಯ ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದನ್ನು ಹೀಗೆ ಬಿಟ್ರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್-ಎಸಿ ಕೋರ್ಟ್ ಕೇಸ್ ಮುಗಿಸಲು 6 ತಿಂಗಳ ಗಡುವು
ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಇರುವ ಎಲ್ಲಾ ಪ್ರಕರಣಗಳ ಇತ್ಯರ್ಥಕ್ಕೆ ಆರು ತಿಂಗಳ ಗಡುವು ನೀಡಲಾಗಿದೆ ಎಂಬುದು ಸಚಿವ ಕೃಷ್ಣ ಬೈರೇಗೌಡ ಅವರು ನೀಡಿದ ಸೂಚನೆ.
ತಕರಾರು ಪ್ರಕರಣಗಳನ್ನು ತಹಶೀಲ್ದಾರ್ ನ್ಯಾಯಾಲಯಗಳು 90 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಎಂಬ ನಿಯಮವಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವಧಿ ಮೀರಿದ 10,774 ಪ್ರಕರಣಗಳಿದ್ದವು. ಪ್ರಸ್ತುತ ಈ ಸಂಖ್ಯೆಯನ್ನು 369ಕ್ಕೆ ಇಳಿಸಲಾಗಿದೆ. ಈ ಹಿಂದೆ ಪ್ರತಿ ಪ್ರಕರಣಗಳ ಇತ್ಯರ್ಥಕ್ಕೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಸರಾಸರಿ 7 ತಿಂಗಳಿಗಿಂತ ಹೆಚ್ಚು ಸಮಯ ವ್ಯಯವಾಗುತ್ತಿತ್ತು. ಆದರೆ, ಪ್ರಸ್ತುತ 67 ದಿನಕ್ಕೆ ಪ್ರಕರಣಗಳನ್ನು ವಿಲೇ ಮಾಡಲಾಗುತ್ತಿದೆ ಎನ್ನುವುದು ಅವರ ಆಕ್ಷೇಪ.
ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 62,857 ಪ್ರಕರಣಗಳು ಬಾಕಿ ಇದ್ದವು. ಆದರೆ, ಇದೀಗ ಆ ಸಂಖ್ಯೆಯನ್ನು 26,726ಕ್ಕೆ ಇಳಿಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ 36,131 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನಾವು ಅಧಿಕಾರ ಸ್ವೀಕರಿಸುವಾಗ ಐದು ವರ್ಷಕ್ಕೆ ಮೇಲ್ಪಟ್ಟ 32777 ಪ್ರಕರಣಗಳಿದ್ದವು, ಈ ಸಂಖ್ಯೆಯನ್ನು 6,602ಕ್ಕೆ ಇಳಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಉಳಿದ ಪ್ರಕರಣಗಳನ್ನೂ ಇತ್ಯರ್ಥಪಡಿಸಲು ಸೂಚಿಸಲಾಗಿದೆ. ಇದರಿಂದ ಜನರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎನ್ನುವ ಸಲಹೆಯನ್ನು ಸಚಿವರು ನೀಡಿದರು.
