ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ: ನಂಜನಗೂಡು ತಾಲ್ಲೂಕಲ್ಲಿ ಒಂದೇ ದಿನ ಇಬ್ಬರ ಆತ್ಮಹತ್ಯೆ,ಕ್ರಮಕ್ಕೆ ಹೆಚ್ಚಿದ ಒತ್ತಡ
ಮೈಕ್ರೋಫೈನಾನ್ಸ್ ಸಾಲ ಮರುಪಾವತಿ ಕಿರುಕುಳ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದ್ದು, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಒಂದೇ ದಿನ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಸೂರು/ನಂಜನಗೂಡು : ಮೈಕ್ರೋಫೈನಾನ್ಸ್ ಕಿರುಕುಳದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ಬೆಳಕಿಗೆ ಬರುತ್ತಿವೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿಯೇ ಹಲವು ಮಹಿಳೆಯರು ಮನೆ ಖಾಲಿ ಮಾಡಿದ ಘಟನೆ ಮುನ್ನವೇ ಒಂದೇ ದಿನ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂಜನಗೂಡು ತಾಲ್ಲೂಕಿನಲ್ಲಿಯೇ ಈ ಪ್ರಕರಣಗಳು ವರದಿಯಾಗಿವೆ. ಮೈಕ್ರೋ ಫೈನಾನ್ಸ್‌ನವರು ನೀಡಿದ ಕಿರುಕುಳದಿಂದಲೇ ನಮ್ಮ ಮನೆಯ ಸದಸ್ಯರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ನಂಜನಗೂಡು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಪೊಲೀಸರು ಘಟನೆ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ. ಸರ್ಕಾರವೂ ಕಠಿಣ ಕ್ರಮವನ್ನು ಕೈಗೊಂಡು ಸಾಲ ಪಡೆದವರು ವಾಪಾಸ್ ನೀಡಲು ಕಾಲಾವಕಾಶ ನೀಡುವಂತೆಯೂ ಕುಟುಂಬದವರು ಒತ್ತಾಯಿಸಿದ್ದಾರೆ.
ವಿಷ ಮಾತ್ರೆ ಸೇವಿಸಿದ ಮಹಿಳೆ
ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಜಯಶೀಲ (53) ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ.
ಐ ಐ ಎಫ್ ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ 5 ಲಕ್ಷ ಸಾಲವನ್ನು ಜಯಶೀಲ ಪಡೆದುಕೊಂಡಿದ್ದರು. ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ ಸಾಲ ಮಾಡಿಕೊಂಡಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇ ಎಂ ಐ ಕಟ್ಟಬೇಕಾಗಿತ್ತು. ಸಾಲ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು. ಇದರಿಂದ ಬೇಸತ್ತು ಸಮೀಪದ ಹುಲ್ಲಹಳ್ಳಿಗೆ ತೆರಳಿ ವಿಷದ ಮಾತ್ರೆಗಳನ್ನು ತಂದು ಜಮೀನಿನಲ್ಲಿ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕುಟುಂಬಸ್ಥರು ತಿಳಿಸಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಕೂಲಂಕುಷ ತನಿಖೆಯ ನಂತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ನಂಜನಗೂಡು ಪೊಲೀಸರು ಮಾಹಿತಿ ನೀಡಿದ್ದಾರೆ.
ವ್ಯಕ್ತಿ ನೇಣಿಗೆ ಶರಣು
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಆರೋಪ ಕೇಳಿ ಬಂದಿದ್ದು, ನಂಜನಗೂಡು ತಾಲ್ಲೂಕಿನಲ್ಲಿ ಮತ್ತೊಬ್ಬ ಸಾಲಗಾರ ಬಲಿಯಾಗಿದ್ದಾನೆ.
ಸಾಲ ಕಟ್ಟಲಾಗದೇ ಸಿಬ್ಬಂದಿ ಕಿರುಕುಳಕ್ಕೆ ಬೆದರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ (33) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ನೇಣಿಗೆ ಶರಣಾಗಿರುವ ಕೃಷ್ಣಮೂರ್ತಿ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೈಕ್ರೋ ಫೈನಾನ್ಸ್‌ನ ವಿವಿಧ ಸಂಘ ಸಂಸ್ಥೆಗಳಿಂದ 6 ಲಕ್ಷ ಹಣವನ್ನು ಸಾಲ ಪಡೆಯಲಾಗಿತ್ತು. ಸಾಲ ಕಟ್ಟಲಾಗದೆ ಬೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಕುಟುಂಬಸ್ಥರು. ದಾಖಲಿಸಲಿಸಿದ್ದಾರೆ. ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ಸಾಗಿಸಲಾಗಿದೆ.
ಶಾಸಕ ಹೇಳಿಕೆ
ಮೈಕ್ರೋ ಫೈನಾನ್ಸ್ ನಿಂದ ನಂಜನಗೂಡಿನಲ್ಲಿ ಇಬ್ಬರ ಸಾವಿನ ಪ್ರಕರಣಗಳ ಕುರಿತು ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಪ್ರತಿಕ್ರಿಯಿಸಿದ್ದು. ಈಗಾಗಲೇ ಕೆಡಿಪಿ ಸಭೆ ಮಾಡಿ ಕ್ರಮ ತೆಗೆದುಕೊಳ್ಳಲು ಹೇಳಿದ್ದೇವೆ. ತಹಶೀಲ್ದಾರ್ ಕೂಡ ಆರ್‌ಬಿಐ ಗೆ ಪತ್ರ ಬರೆದಿದ್ದಾರೆ. ಆದರೂ ಕೆಲವರು ಹೆದರಿ ಈ ರೀತಿ ಮಾಡಿಕೊಳ್ಳುತ್ತಿದ್ದು. ಯಾರೂ ಆತ್ಮಹತ್ಯೆಯಂತಹ ತೀರ್ಮಾನ ಮಾಡಬಾರದು ಎಂದು ಮನವಿ ಮಾಡಿದರು.
ಮಲ್ಕುಂಡಿ ಗ್ರಾಮದಲ್ಲಿ ಮತ್ತೊಂದು ಸಾವಾಗಿದೆ. ಈ ರೀತಿ ಆಗಬಾರದಿತ್ತು ನಿಜಕ್ಕೂ ನೋವಾಗಿದೆ. ಯಾರು ಕೂಡ ಹೆದರಬೇಡಿ, ನಿಮ್ಮ ಜೊತೆ ನಾವಿದ್ದೇವೆ. ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ತಹಶೀಲ್ದಾರ್ ಗೆ ಹೇಳಿದ್ದೇನೆ. ಸಿಎಂ ಸಿದ್ದರಾಮಯ್ಯ ಕೂಡ ಸಭೆ ಮಾಡಿ ಹೇಳಿದ್ದಾರೆ. ನಿಮ್ಮ ಜೊತೆ ನಾವು ಇರುತ್ತೇವೆ ಯಾರು ಧೃತಿಗೆಡಬೇಡಿ ಎಂದು ದರ್ಶನ್ ಮನವಿ ಮಾಡಿದರು.
ಯದುವೀರ್ ಒತ್ತಾಯ
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಹೆಚ್ಚುತ್ತಿರುವ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಮಾತನಾಡಿದರು.
ಇದು ಬಹಳ ಗಂಭೀರವಾದ ವಿಚಾರ. ಬ್ಯಾಂಕುಗಳು ಸ್ನೇಹಮಯಿಯಾಗಿ ಕೆಲಸ ಮಾಡಬೇಕು. ಜನರಿಗೆ ಕಿರುಕುಳ ಕೊಡಬಾರದು, ಈಗ ಆಗುತ್ತಿರುವ ಘಟನೆಗಳು ನಿಜಕ್ಕೂ ಖಂಡನೀಯ.ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯದುವೀರ್ ಒಡೆಯರ್ ಒತ್ತಾಯಿಸಿದರು.
