Lakshmi Hebbalkar: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ಗೆ ಅಪಘಾತ: ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಎಂಎಲ್ಸಿ ಸಿಟಿ ರವಿ
Lakshmi Hebbalkar: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಶೀಘ್ರ ಗುಣಮುಖರಾಗುವಂತೆ ಮಾಜಿ ಸಚಿವ ಹಾಗೂ ಎಂಎಲ್ಸಿ ಸಿಟಿ ರವಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರು: ಕಳೆದ ತಿಂಗಳು ಸದನದಲ್ಲಿ ಅಸಂವಿಧಾನಿಕ ಪದ ಬಳಕೆ ಸಂಬಂಧ ಜಟಾಪಟಿ ನಡೆಸಿ ಕಾನೂನು ಕ್ರಮ ಎದುರಿಸುತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಜಗಳ ಸದ್ದು ಮಾಡಿತ್ತು. ಈಗ ಬೆಳಗಾವಿಗೆ ಹೋಗುವ ಮಾರ್ಗದಲ್ಲಿ ಅಪಘಾತಕ್ಕೆ ಒಳಗಾಗಿ ಬೆಳಗಾವಿಯ ಆಸ್ಪತ್ರೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ಇದರ ನಡುವೆಯೇ ಗಾಯಗೊಂಡಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ಬೇಗನೇ ಗುಣಮುಖರಾಗಿ ಬರಲಿ ಎಂದು ಸಿಟಿ ರವಿ ಅವರು ಕೋರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಜಗಳ ಬೇರೆ, ವೈಯಕ್ತಿಕ ಬದುಕು, ಸಾರ್ವಜನಿಕ ಜೀವನವೇ ಬೇರೆ ಎನ್ನುವುದನ್ನು ಸಿಟಿರವಿ ಪ್ರದರ್ಶಿಸಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಸಿ.ಟಿ.ರವಿ, ಇಂದು ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಶೀಘ್ರ ಗುಣಮುಖರಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.
ಸಿಟಿ ರವಿ ಅವರು ಈ ರೀತಿ ಪ್ರಾರ್ಥಿಸಿ ಸಂದೇಶ ಹಾಕಿರುವುದಕ್ಕೆ ಅವರ ಬೆಂಬಲಿಗರು, ಆತ್ಮೀಯರು, ಹಿತೈಷಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಿಮ್ಮ ಮೇಲೆ ಏನೇ ಮಾಡಿದರೂ ಅದನ್ನೆಲ್ಲಾ ಮರೆತು ಗುಣಮುಖರಾಗುವಂತೆ ಕೋರುವುದು ನಿಮ್ಮ ದೊಡ್ಡ ಗುಣ ಎಂದು ಹಲವರು ಹೇಳಿದ್ದಾರೆ.
ಕಳೆದ ತಿಂಗಳು ವಿಧಾನ ಮಂಡಳದ ಅಧಿವೇಶನ ಬೆಳಗಾವಿಯಲ್ಲಿ ನಡೆದಾಗ ಕೊನೆಯ ದಿನ ವಿಧಾನಪರಿಷತ್ ಕಲಾಪದಲ್ಲಿ ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ಸಿಟಿ ರವಿ ತಮ್ಮ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳಕರ್ ದೂರಿದ್ದರು. ಹೆಬ್ಬಾಳಕರ್ ಬೆಂಬಲಿಗರು ಸದನಕ್ಕೆ ನುಗ್ಗಿ ರವಿ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ರವಿ ವಿರುದ್ದ ಪ್ರಕರಣ ದಾಖಲಾಗಿ ಅವರನ್ನು ರಾತ್ರೋರಾತ್ರಿ ಬಂಧಿಸಲಾಗಿತ್ತು. ಅಲ್ಲದೇ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಯಲ್ಲಿ ರಾತ್ರಿ ಪೊಲೀಸ್ ವಾಹನದಲ್ಲಿಯೇ ರವಿ ಅವರನ್ನು ಸುತ್ತಿಸಲಾಗಿತ್ತು. ಕೋರ್ಟ್ ನಿರ್ದೇಶನದ ಬಳಿಕ ದಾವಣಗೆರೆ ಬಳಿ ರವಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಈ ಕುರಿತು ಇಬ್ಬರ ನಡುವೆ ಜಗಳ ಮುಂದುವರಿದಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಸಿಐಡಿಗೆ ಒಪ್ಪಿಸಲಾಗಿದ್ದು, ತನಿಖೆ ನಡೆದಿದೆ.
ಬೆಂಗಳೂರಿನಲ್ಲಿ ಭಾನುವಾರ ನಡೆದಿದ್ದ ಕಾಂಗ್ರೆಸ್ ಸಭೆ ಹಾಗೂ ಶಾಸಕಾಂಗ ಸಭೆಯನ್ನು ಮುಗಿಸಿಕೊಂಡು ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿಗೆ ಕಾರಿನಲ್ಲಿ ಸಹೋದರರಾಗಿರುವ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರೊಂದಿಗೆ ಬರುತ್ತಿದ್ದರು. ಈ ವೇಳೆ ಕಿತ್ತೂರು ಬಳಿ ಕಾರಿಗೆ ನಾಯಿ ಅಡ್ಡ ಬಂದಿದ್ದು, ಡಿಕ್ಕಿ ತಪ್ಪಿಸಲು ಹೋದಾಗ ಕಾರು ಮರಕ್ಕೆ ಡಿಕ್ಕಿಯಾಗಿತ್ತು. ಈ ವೇಳೆ ಲಕ್ಷ್ಮಿ ಹಾಗೂ ಅವರ ಸಹೋದರ ಗಾಯಗೊಂಡಿದ್ದರು. ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
