ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಕುತೂಹಲಕಾರಿ ಟ್ವಿಸ್ಟ್; ಅಪಘಾತವೆಸಗಿದ ಲಾರಿ ಚಾಲಕನ ಬಂಧನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಕುತೂಹಲಕಾರಿ ಟ್ವಿಸ್ಟ್ ಸಿಕ್ಕಿದೆ. ಅಪಘಾತವೆಸಗಿ ಲಾರಿ ಸಮೇತ ಪರಾರಿಯಾಗಿದ್ದ ಲಾರಿ ಚಾಲಕ ಕಿತ್ತೂರು ಪೊಲೀಸರ ಬಲೆಗೆ ಬಿದಿದ್ದಾನೆ.

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮೂರು ತಿಂಗಳ ಬಳಿಕ ಅಪಘಾತವೆಸಗಿದ ಲಾರಿ ಚಾಲಕನನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ಕಾರು ಅಪಘಾತಕ್ಕೆ ಕಾರಣವೇನು ಎಂಬುದು ಸರಿಯಾಗಿ ಗೊತ್ತಾಗಿರಲಿಲ್ಲ. ಆದರೆ ತನಿಖೆ ಬಳಿಕ ಲಾರಿ ಅಪಘಾತವೆಸಗಿ ಪರಾರಿಯಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ಲಾರಿ ಚಾಲಕನ ಬಂಧನವು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್ ನೀಡಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಕುತೂಹಲಕಾರಿ ಟ್ವಿಸ್ಟ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಿ ಮೂರು ತಿಂಗಳ ಬಳಿಕ ಅಪಘಾತವೆಸಗಿದ ಲಾರಿ ಚಾಲಕನ ಬಂಧನವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಜನವರಿ 14 ರಂದು ಮುಂಜಾನೆ 5 ಗಂಟೆಗೆ ಕಿತ್ತೂರು ಸಮೀಪ ಅಪಘಾತಕ್ಕೀಡಾಗಿತ್ತು. ವಿವಿಧ ಆಯಾಮಗಳಲ್ಲಿ ಕೇಸ್‌ನ ತನಿಖೆ ನಡೆಸಿದ ಪೊಲೀಸರು ಅಪಘಾತವೆಸಗಿದ ಲಾರಿ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಧುಕರ ಸೋಮವಂಶಿ ಎಂದು ಗುರುತಿಸಲಾಗಿದೆ. ಕಿತ್ತೂರು ಪೊಲೀಸರು ಆತನನ್ನು ಪುಣೆ ಸಮೀಪದ ಇಂದಾಪುರದಲ್ಲಿ ಬಂಧಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿ ಆರೋಪಿ ಚಾಲಕನಿಗಾಗಿ ಶೋಧ ನಡೆಸಿದ್ದರು. ಆರೋಪಿ ಮಧುಕರ ಸೋಮವಂಶಿಯ ಪೋನ್ ಕರೆ ವಿವರ ಆಧರಿಸಿ ಆತನ ಪತ್ತೆ ಹಚ್ಚಲಾಗಿದೆ. ಆರಂಭದಲ್ಲಿ ಆತ ಅಪಘಾತವೆಸಗಿ ಓಡಿಹೋಗಿರುವುದನ್ನು ಒಪ್ಪಿಕೊಂಡಿಲ್ಲ. ಬಳಿಕ ಎಲ್ಲ ವಿವರ ಖಚಿತವಾದ ಬಳಿಕ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಹೇಳಿದ್ದಿಷ್ಟು
ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ 3 ತಿಂಗಳ ಹಿಂದೆ ಈ ಅಪಘಾತ ನಡೆದಿತ್ತು ಈಗ ಆರೋಪಿ ಮಧುಕರ ಸೋಮವಂಶಿ ಬಂಧಿಸಿ ವಿಚಾರಣೆ ಮಾಡಿದ್ದು, ಕಾನೂನು ಪ್ರಕಾರ ಠಾಣೆಯಲ್ಲಿ ಜಾಮೀನು ನೀಡಿ ಕಳಿಸಿದ್ದೇವೆ. ಮೂರು ತಿಂಗಳು ತನಿಖೆ ನಡೆಸಿದ್ದೆವು. 69 ಲಾರಿ ಪರಿಶೀಲನೆ ನಡೆಸಲಾಗಿತ್ತು. ಅಪಘಾತ ಎಸಗಿದ ಲಾರಿಯ ಬಣ್ಣ ಕಾರಿಗೆ ಮೆತ್ತಿಕೊಂಡಿದ್ದ ಕಾರಣ ಅದನ್ನು ಎಫ್‌ಎಸ್‌ಎಲ್ ವರದಿಗಾಗಿ ಕಳುಹಿಸಲಾಗಿತ್ತು. ವರದಿ ಬಂದ ಬಳಿಕ ಲಾರಿ ವಿವರ ಪತ್ತೆ ಹಚ್ಚಿದ್ದು, ತೀವ್ರ ವಿಚಾರಣೆ ನಡೆಸಿದ ಬಳಿಕ ಲಾರಿ ಚಾಲಕ ತಪ್ಪೊಪ್ಪಿಕೊಂಡಿದ್ದಾನೆ. ಶೀಘ್ರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವುದಾಗಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ತಿಳಿಸಿದರು.
ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿರುವಾಗ ಕಿತ್ತೂರಿನ ಅಂಬಡಗಟ್ಟಿ ಬಳಿ ಈ ಅಪಘಾತ ನಡೆದಿತ್ತು. ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯ ಸಹ ಆಗಿತ್ತು. ಬಳಿಕ ಕಿತ್ತೂರು ಠಾಣೆಯಲ್ಲಿ ಸಚಿವೆಯ ಕಾರು ಚಾಲಕ ಶಿವಪ್ರಸಾದ್, ದೂರು ದಾಖಲಿಸಿದ್ದ. ಜನವರಿ 14ರಂದು ಬೆಳಗಿನ ಜಾವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ಡಿಕ್ಕಿ ಹೊಡೆದ ಲಾರಿ ಸಮೇತ ಚಾಲಕ ಪರಾರಿ ಆಗಿದ್ದ. ಈ ಅಪಘಾತಕ್ಕೆ ಮೊದಲು ವಿಧಾನ ಸಭೆ ಅಧಿವೇಶನದ ವೇಳೆ ಬಿಜೆಪಿ ಶಾಸಕ ಸಿಟಿ ರವಿ ಅವರು ಅವಾಚ್ಯ ಪದ ಬಳಕೆ ಮಾಡಿದ್ದರು ಎಂದು ಗಂಭೀರ ವಾಕ್ಸಮರದ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಗಮನಸೆಳೆದಿದ್ದರು. ಈ ಕೇಸ್‌ನಲ್ಲಿ ಸಿಟಿ ರವಿ ಅವರ ಬಂಧನವೂ ಆಗಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ಬಳಿಕ ಸಿಟಿ ರವಿ ಅವರು ಜಾಮೀನು ಪಡೆದು ಹೊರಬಂದಿದ್ದು, ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದರು.