ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್​ನ್ಯೂಸ್; ಈ ದಿನದಂದು ಎರಡು ತಿಂಗಳ ಹಣ ಒಟ್ಟಿಗೆ ಖಾತೆಗೆ ಜಮೆ
ಕನ್ನಡ ಸುದ್ದಿ  /  ಕರ್ನಾಟಕ  /  ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್​ನ್ಯೂಸ್; ಈ ದಿನದಂದು ಎರಡು ತಿಂಗಳ ಹಣ ಒಟ್ಟಿಗೆ ಖಾತೆಗೆ ಜಮೆ

ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್​ನ್ಯೂಸ್; ಈ ದಿನದಂದು ಎರಡು ತಿಂಗಳ ಹಣ ಒಟ್ಟಿಗೆ ಖಾತೆಗೆ ಜಮೆ

Gruha Lakshmi Scheme: ನವರಾತ್ರಿ ಪ್ರಯುಕ್ತ ಗೃಹ ಲಕ್ಷ್ಮೀ ಯೋಜನೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಸುಮಾರು 5 ಸಾವಿರ ಕೋಟಿ ಹಣ ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದ್ದಾರೆ.

ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್​ನ್ಯೂಸ್
ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್​ನ್ಯೂಸ್

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರ 5 ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯ ಹಣವು ಕಳೆದ ಎರಡು ತಿಂಗಳಿಂದ ಜಮೆಯಾಗಿಲ್ಲ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ಈ ಯೋಜನೆಯ ಜುಲೈ-ಆಗಸ್ಟ್ ತಿಂಗಳ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದೇ ತಿಂಗಳ 7 ಮತ್ತು 9ನೇ ತಾರೀಕಿನಂದು ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದ್ದಾರೆ.

ನವರಾತ್ರಿ ಪ್ರಯುಕ್ತ ಗೃಹ ಲಕ್ಷ್ಮೀ ಯೋಜನೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಸುಮಾರು 5 ಸಾವಿರ ಕೋಟಿ ಹಣ ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ. ಈವರೆಗೆ ಒಟ್ಟು 13 ತಿಂಗಳು ಹಣ ನೀಡಲಾಗಿದೆ ಎಂದರು. ಸಚಿವರ ಭೂ ಹಗರಣ ಬಯಲಿಗೆ ಎಳೆಯುವ ಪಿ ರಾಜೀವ್ ಹೇಳಿಕೆಗೆ ನೀಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್​, ಆಧಾರ ರಹಿತ ಹೇಳಿಕೆಗೆ ಉತ್ತರಿಸುವ ಜರೂರತ್ ಇಲ್ಲ. ಯಾವಾಗ ಆಧಾರ ಸಹಿತ ಮಾತನಾಡುತ್ತಾರೋ ಅಂದು ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ನಿಮ್ಮನ್ನು ಹೆದಸುತ್ತಿದ್ದಾರಾ ಎಂಬ ಪ್ರಶ್ನೆ ಉತ್ತರಿಸಿದ ಅವರು, ಯಾರಿಗೂ ಹೆದರೋದು ಬಗ್ಗೋದು ಜಗ್ಗೋದು ಇಲ್ಲ ಎಂದರು. ಜಿಟಿ ದೇವೇಗೌಡ ಅವರು ಸಿದ್ದರಾಮಯ್ಯ ಪರ ಮಾತನಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಇದಕ್ಕಿಂತ ಸಾಕ್ಷಿ ಬೇರೊಂದಿಲ್ಲ. ಸೋಮಶೇಖರ್ ಅವರು ನಮ್ಮ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಅವರೂ ಸಹ ಬಿಜೆಪಿಯ ಶಾಸಕರು. ನಾವು ಯಾವ ರೀತಿ ಸರ್ಕಾರ ನಡೆಸುತ್ತಿದ್ದೇವೆ, ಕೆಲಸ ಮಾಡುತ್ತಿದ್ದೇವೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು.

ಬಿಜೆಪಿಯದ್ದು ಕಾಪಿ ರೈಟ್ ಕೆಲಸ

ಗೃಹ ಲಕ್ಷ್ಮೀ ಯೋಜನೆಯ ಟೀಕೆ ಮಾಡುವ ಬಿಜೆಪಿಗರು ಹರಿಯಾಣದಲ್ಲಿ 2100 ಕೊಡುವ ಘೋಷಣೆ ವಿಚಾರಕ್ಕೆ ಉತ್ತರಿಸಿದ ಅವರು, ಮೊದಲಿನಿಂದಲೂ ಬಿಜೆಪಿಯವರ ಚಟ ಇದೆ. ಕಾಂಗ್ರೆಸ್​ನಿಂದ ಆಗುವ ಕಾರ್ಯಕ್ರಮಗಳನ್ನು ಟೀಕೆ ಟಿಪ್ಪಣಿ ಮಾಡುತ್ತಾರೆ. ಆಮೇಲೆ ಅದೇ ಯೋಜನೆಗಳನ್ನು ಅನುಷ್ಠಾನ ಮಾಡುತ್ತಾರೆ. ತದನಂತರ ನಮ್ಮದೇ ಕಾಪಿ ರೈಟ್ ಮಾಡಿದವರಂತೆ ಮಾಡುತ್ತಾರೆ. ಕಾಫಿ ರೈಟ್ ಹಾಕುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್​, ಅದನ್ನು ಜನರೇ ಹಾಕಬೇಕು ಎಂದರು.

ಹೈಕಮಾಂಡ್ ತೀರ್ಮಾನವೇ ಅಂತಿಮ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಚಿವ ಸತೀಶ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರೆಲ್ಲೇನೂ ವಿಶೇಷ ಇಲ್ಲ. ನಾನೂ ಮೊನ್ನೆ ಹೋಗಿದ್ದೆ. ಅಧ್ಯಕ್ಷರು ನಮ್ಮ‌ ಸರ್ವೋಚ್ಚ ನಾಯಕರು ಅವರನ್ನ ಭೇಟಿ ಆಗುತ್ತೇವೆ. ಕೆಲಸವಿದ್ದಾಗ ಅವರನ್ನು ಭೇಟಿ ಆಗುವುದು ಒಂದು ಸಹಜ ಪ್ರಕ್ರಿಯೇ ಎಂದರು. ಕರ್ನಾಟಕ ಮಾಡಲ್ ಗುಜರಾತ್ ಮಾಡೆಲ್​ನ ಹಿಂದಿಕ್ಕಿ ಮುಂದೆ ಹೋಗುತ್ತಿದೆ. ಅದಕ್ಕೆ ಹೆಮ್ಮೆ ಇದೆ ಎಂದರು.

ಸತೀಶ್ ಜಾರಕಿಹೊಳಿ ಹೆಸರು ಸಿಎಂ ರೇಸ್​ನಲ್ಲಿದ್ದಾರೆ ಎಂಬ ವಿಚಾರ ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೇ ರೇಸ್​ನಲ್ಲಿದ್ದರೂ ಸಹ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದರ ನಿರ್ದೇಶನ ಹಾಗೂ136 ಜನ ಎಂಎಲ್‌ಎಗಳ ಇಚ್ಛೆಯ ಮೇರೆಗೆ ಸಿಎಂ ಆಗೋದು ಎಂದರು. ಡಿಸಿಸಿ ಬ್ಯಾಂಡಕ್ ಚುನಾವಣೆಗೆ ಇನ್ನೂ ಒಂದು ವರ್ಷ ಟೈಂ ಇದೆ‌ ಎಲ್ಲರೂ ತಯಾರಿ ಮಾಡುತ್ತಿದ್ದಾರೆ. ನಾವೂ ಮಾಡುತ್ತೇವೆ ಎಂದು ಹೇಳಿದ್ದಾರೆ.

Whats_app_banner