ಕನ್ನಡ ಸುದ್ದಿ  /  Karnataka  /  Minister Who Called To Kill Siddaramaiah Should Be Arrested Says Dk Shivakumar

DK Sivakumar: ಸಿದ್ದರಾಮಯ್ಯ ಅವರನ್ನ ಹೊಡೆದುಹಾಕಲು ಕರೆಕೊಟ್ಟ ಸಚಿವನ ಬಂಧನವಾಗಬೇಕು: ಡಿಕೆ ಶಿವಕುಮಾರ್ ಆಗ್ರಹ

ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಲು ಸಚಿವರು ಕರೆಕೊಟ್ಟಿದ್ದರು. ಇದೇ ಮಾತನ್ನು ಅವರ ವಿರುದ್ಧ ಮಾತನಾಡಿದ್ದರೆ ಸುಮ್ಮನೆ ಬಿಡುತ್ತಿದ್ದರಾ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಹನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಹನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಹನೂರು(ಚಾಮರಾಜನಗರ): ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು ಎಂದು ಅವರ ಹತ್ಯೆಗೆ ಕರೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ ಅವರ ವಿರುದ್ದ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಹನೂರಿನಲ್ಲಿ ಇಂದು (ಫೆ.21 ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ಹಾಗೂ ನಮ್ಮ ರಾಜ್ಯದ ಆಸ್ತಿ. ಅಧಿಕಾರದ ಮದದಲ್ಲಿರುವ ಮಂತ್ರಿಯೊಬ್ಬರು ಅದ್ಯಾವ ಇತಿಹಾಸ ಓದಿಕೊಂಡು ಬಂದಿದ್ದರೋ ಟಿಪ್ಪುವನ್ನು ಹೊಡೆದು ಹಾಕಲಾಗಿತ್ತು, ಅದೇ ರೀತಿ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂದು ಕರೆ ನೀಡಿದ್ದಾರೆ.

ಉನ್ನತ ಶಿಕ್ಷಣ ಸಚಿವರ ಬಾಯಲ್ಲಿ ಇಂತಹ ಮಾತು ಬಂದರೂ ಸರ್ಕಾರ, ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವರು, ಡಿಜಿ ಏನು ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಉತ್ತರಿಸಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೆ ಎಂದಿದ್ದಾರೆ.

ಇದು ಕ್ಷಮೆಯ ವಿಚಾರವಲ್ಲ

ಅಧಿವೇಶನದಲ್ಲಿ ಸಚಿವರು ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಇದು ಕ್ಷಮೆಯ ವಿಚಾರವಲ್ಲ. ಇದೊಂದು ಪ್ರಚೋದನಕಾರಿ ಹೇಳಿಕೆ. ಇಂತಹ ಹೇಳಿಕೆ ಯಾರೇ ನೀಡಿದ್ದರೂ ಅದು ತಪ್ಪು. ಈ ದೇಶದ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು, ಗೃಹಸಚಿವರು ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದ ಹೆಸರಿಗೆ ಕಪ್ಪುಚುಕ್ಕೆ ಬರುವ ರೀತಿಯಲ್ಲಿ ಆಡಳಿತ ನೀಡಿದ್ದಾರೆ.

ಇದೇ ಮಾತನ್ನು ಅವರ ವಿರುದ್ಧ ಮಾತನಾಡಿದ್ದರೆ ಸುಮ್ಮನೆ ಬಿಡುತ್ತಿದ್ದರಾ? ಪೇಸಿಎಂ ಎಂಬ ಪ್ಟೋಸ್ಟರ್ ಅಂಟಿಸಿದ್ದಕ್ಕೆ ನಮ್ಮ ವಿರುದ್ಧ ಕೇಸ್ ದಾಖಲಿಸಿದರು. ನಮ್ಮ ಕಾರ್ಯಕರ್ತರು ಹೋರಾಟ ಮಾಡಿದರೆ ಅವರನ್ನು ಬಂಧಿಸಿ ಕೇಸ್ ಹಾಕಿದರು. ಮಾಜಿ ಮುಖ್ಯಮಂತ್ರಿಯನ್ನು ಹೊಡೆದುಹಾಕಿ ಎಂದು ಹೇಳಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದರಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಹೀಗಾಗಿ ಅವರು ಸುಮ್ಮನೆ ಕೂತಿದ್ದಾರೆ. ಅವರೂ ಇದಕ್ಕೆ ಜವಾಬ್ದಾರರು. ಮುಂದೆ ಅವರು ನಿವೃತ್ತರಾಗಿರಲಿ, ಅಧಿಕಾರದಲ್ಲಿರಲಿ, ಬಿಡಲಿ ಅವರೂ ಇದರ ಪರಿಣಾಮ ಎದುರಿಸಲೇಬೇಕಾಗುತ್ತದೆ. ಆ ಸಚಿವ ಎಲ್ಲಿ ಹೇಳಿಕೆ ನೀಡಿದ್ದಾನೋ ಆ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ, ಆತನನ್ನು ಬಂಧಿಸುವ ಕೆಲಸ ಮಾಡಬೇಕು ಎಂದು ನಾನು ಹಾಗೂ ಪಕ್ಷ ಒತ್ತಾಯಿಸುತ್ತೇವೆ ಎಂದಿದ್ದಾರೆ.

ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ನಿಮಗೆ ಟಿಪ್ಪು ಬೇಕಾ ಅಥವಾ ಸಾವರ್ಕರ್ ಬೇಕಾ? ಟಿಪ್ಪು ಸುಲ್ತಾನ್ ಅನ್ನು ಎಲ್ಲಿಗೆ ಕಳುಹಿಸಬೇಕು? ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದು ಅಶ್ವತ್ಥ್‌ ನಾರಾಯಣ ಹೇಳಿದ್ದರು.

ರಾಜ್ಯದ ಉನ್ನತ ಶಿಕ್ಷಣ ಸಚಿವರ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನನ್ನು ಫಿನಿಶ್‌ ಮಾಡಿ ಅಂದರೆ ಏನರ್ಥ? ಜನರನ್ನು ರಕ್ಷಣೆ ಮಾಡಬೇಕಾದ ಸಚಿವರೊಬ್ಬರು ಹೇಳುವ ಮಾತೇನ್ರಿ ಇದು? ಅಶ್ವತ್ಥ್‌ ನಾರಾಯಣರು ಹೇಳಿದ್ದು ಸರಿಯೇ? ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಏನು ಹೇಳುತ್ತಾರೆ? ದಾಳಿ ಮಾಡುವುದು, ಕೊಲೆ ಮಾಡುವುದು, ಹತ್ಯೆ ಮಾಡುವುದು ಬಿಜೆಪಿಯ ಸಂಸ್ಕೃತಿ ಎಂದಿದ್ದರು.

IPL_Entry_Point