ಕನ್ನಡ ಸುದ್ದಿ  /  Karnataka  /  Misrepresentation Of Lingayat Community By Bjp Congress And Jds Says Aam Aadmi Party

Aam Aadmi Party: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಲಿಂಗಾಯತ ಸಮುದಾಯ ಕಡಗಣನೆ: ಆಮ್‌ ಆದ್ಮಿ ಪಾರ್ಟಿ

ರಾಜ್ಯದ ಬಹುದೊಡ್ಡ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಸಮುದಾಯವನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ತೀವ್ರವಾಗಿ ಕಡೆಗಣಿಸಿ, ಚುನಾವಣೆ ಸಮಯದಲ್ಲಿ ಓಲೈಕೆಯ ನಾಟಕವಾಡುತ್ತಿರುವುದು ಖಂಡನೀಯ ಎಂದು ಎಎಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷರಾದ ರವಿಚಂದ್ರ ನೆರಬೆಂಚಿ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷರಾದ ರವಿಚಂದ್ರ ನೆರಬೆಂಚಿ.

ಬೆಂಗಳೂರು: ಲಿಂಗಾಯತರ ಮತಗಳು ಬೇಕಾಗಿಲ್ಲ ಎಂಬರ್ಥದಲ್ಲಿ ಸಿಟಿ ರವಿ ಹೇಳಿಕೆ ನೀಡಿದ್ದಾರೆಂಬ ಆರೋಪ, ಇದೇ ವಿಚಾರವಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಕೇಸರಿ ನಾಯಕರ ವಿರುದ್ಧ ವಾಕ್ಸರ್, ಕಾಂಗ್ರೆಸ್ ಸುಳ್ಳಿನ ಕಾರ್ಖಾನೆಯ ಸೃಷ್ಟಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಕಿತ್ತಾಟದ ನಡುವೆ ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯದ ಕಡಗಣನೆ ಮಾಡಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.

ರಾಜ್ಯದ ಬಹುದೊಡ್ಡ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಸಮುದಾಯವನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ತೀವ್ರವಾಗಿ ಕಡೆಗಣಿಸಿ, ಚುನಾವಣೆ ಸಮಯದಲ್ಲಿ ಓಲೈಕೆಯ ನಾಟಕವಾಡುತ್ತಿರುವುದು ಖಂಡನೀಯ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷರಾದ ರವಿಚಂದ್ರ ನೆರಬೆಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಲಿಂಗಾಯತ ಮಠಗಳು ಹಾಗೂ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಇವುಗಳು ಇಲ್ಲದಿದ್ದರೆ ರಾಜ್ಯವು ಶಿಕ್ಷಣದಲ್ಲಿ ಹಿಂದುಳಿದು ಬಿಹಾರ ಹಾಗೂ ಉತ್ತರ ಪ್ರದೇಶದಂತೆ ಆಗುತ್ತಿತ್ತು.

ಆದರೆ ಇಂದು ರಾಜಕೀಯ ಕಾರಣಗಳಿಗಾಗಿ ಲಿಂಗಾಯತ ಸಮುದಾಯವನ್ನು ಅವಹೇಳನ ಮಾಡುವಂತಹ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಬಿಜೆಪಿಯು ಬಿ.ಎಸ್‌ ಯಡಿಯೂರಪ್ಪನವರನ್ನು ಕೇವಲವಾಗಿ ನಡೆಸಿಕೊಂಡಿದ್ದು, ದಿಢೀರ್‌ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆಳಿಸಿತು. ನಂತರ ಲಿಂಗಾಯತ ಸಮುದಾಯದ ಓಲೈಕೆಗಾಗಿ ಬಿಜೆಪಿಯ ಕೇಂದ್ರ ಸಮಿತಿಯಲ್ಲಿ ಸ್ಥಾನ ನೀಡಲಾಯಿತು. ವೀರೇಂದ್ರ ಪಾಟೀಲ್‌ರವರನ್ನು ಸರಿಯಾಗಿ ನಡೆಸಿಕೊಳ್ಳದ ಕಾರಣಕ್ಕೆ ಕಾಂಗ್ರೆಸ್‌ ಪಕ್ಷ ಅನುಭವಿಸಿದ ಸೋಲುಗಳನ್ನೇ ಬಿಜೆಪಿ ಕೂಡ ಅನುಭವಿಸಲಿದೆ ಎಂದು ರವಿಚಂದ್ರ ನೆರಬೆಂಚಿ ಹೇಳಿದ್ದಾರೆ.

ಅವಕಾಶ ದೊರೆಯುವ ವಿಶ್ವಾಸವಿದೆ

ಆಮ್‌ ಆದ್ಮಿ ಪಾರ್ಟಿಯ ನೀತಿಗಳು ಹಾಗೂ ಬಸವಣ್ಣನವರು ತತ್ತ್ವಗಳು ಒಂದೇ ಆಗಿವೆ. ಸಮಾನತೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕೆಂದು ಬಸವಣ್ಣನವರು 12ನೇ ಶತಮಾನದಲ್ಲೇ ಪ್ರತಿಪಾದಿಸಿದ್ದರು. ಆಮ್‌ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ. ಬಸವಣ್ಣನವರ ನಾಡಿನಲ್ಲೂ ಅದೇ ಮಾದರಿಯ ಆಡಳಿತ ನೀಡಲು ಈ ಚುನಾವಣೆಯಲ್ಲಿ ಅವಕಾಶ ದೊರೆಯುವ ವಿಶ್ವಾಸವಿದೆ. ರಾಜ್ಯದ ಅನೇಕ ಲಿಂಗಾಯತ ಯುವಕರು ಹಾಗೂ ಮುಖಂಡರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದಿದ್ದಾರೆ.

ಇಡೀ ಸಮುದಾಯಕ್ಕೆ ಮಾಡಿರುವ ಅವಮಾನ

ಸಿಎಂ ಬೊಮ್ಮಾಯಿಯವರು 2ಎ ಮೀಸಲಾತಿ ನೀಡುವುದಾಗಿ ತಾಯಿಯ ಮೇಲೆ ಆಣೆ ಮಾಡಿ ಹೇಳಿ, ನಂತರ ಕಡೆಗಣಿಸಿರುವುದು ಇಡೀ ಸಮುದಾಯಕ್ಕೆ ಮಾಡಿರುವ ಅವಮಾನ, ಶಿಕ್ಷಣ ಹಾಗೂ ನೌಕರಿಯಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರವಿಚಂದ್ರ ನೆರಬೆಂಚಿ ತಿಳಿಸಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಸ್ವಾಮಿ ಮಾತನಾಡಿ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಉಚಿತವಾಗಿ ಸಿಗಬೇಕೆಂದು ಬಸವಣ್ಣ ಹೇಳಿದ್ದಾರೆ. ಆಮ್‌ ಆದ್ಮಿ ಪಾರ್ಟಿಯು ಬಸವಣ್ಣನವರ ತತ್ವಗಳ ಮಾರ್ಗದಲ್ಲಿ ಸಾಗುತ್ತಿದ್ದರೆ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬಸವಣ್ಣನವರ ಹೆಸರನ್ನು ಕೇವಲ ತೋರಿಕೆಗಾಗಿ ಬಳಸಿಕೊಳ್ಳುತ್ತಿವೆ. ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರಿ, ಜಾತಿ-ಧರ್ಮ ರಾಜಕೀಯದಲ್ಲಿ ತೊಡಗಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಡಾ. ಬಿ ಎಲ್ ವಿಶ್ವನಾಥ್ ಉಪಸ್ಥಿತರಿದ್ದರು.

ಮುಂದಿನ ವಾರದೊಳಗೆ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಿಸಲಾಗುತ್ತದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

IPL_Entry_Point

ವಿಭಾಗ