ಕನ್ನಡ ಸುದ್ದಿ  /  Karnataka  /  Mla Tanveer Sait Quits From Politics; Supporters Threaten Suicide In Mysuru

MLA Tanveer Sait: ತನ್ವೀರ್‌ ಸೇಠ್‌ ರಾಜಕೀಯ ನಿವೃತ್ತಿ ಘೋಷಣೆ, ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ, ಚಾಕು ಇರಿತದ ಬಳಿಕ ಸೇಠ್‌ಗೆ ಅನಾರೋಗ್ಯ

ತನ್ವೀರ್‌ ಸೇಠ್‌ ಅವರಲ್ಲಿ ರಾಜಕೀಯ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಬೆಂಬಲಿಗರು ಪರಿಪರಿಯಾಗಿ ವಿನಂತಿಸುತ್ತಿದ್ದು, ಬೆಂಬಲಿಗನೋರ್ವ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

MLA Tanveer Sait: ತನ್ವೀರ್‌ ಸೇಠ್‌ ರಾಜಕೀಯ ನಿವೃತ್ತಿ, ಬೆಂಬಲಿಗರಿಂದ ಆತ್ಮಹತ್ಯೆಗೆ ಯತ್ನ
MLA Tanveer Sait: ತನ್ವೀರ್‌ ಸೇಠ್‌ ರಾಜಕೀಯ ನಿವೃತ್ತಿ, ಬೆಂಬಲಿಗರಿಂದ ಆತ್ಮಹತ್ಯೆಗೆ ಯತ್ನ

ಮೈಸೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರಾದ ತನ್ವೀರ್‌ ಸೇಠ್‌ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದು, ಕಾಂಗ್ರೆಸ್‌ ಪಕ್ಷ ಮತ್ತು ಬೆಂಬಲಿಗರಿಗೆ ಆಘಾತವಾಗಿದೆ. ರಾಜಕೀಯ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಬೆಂಬಲಿಗರು ಪರಿಪರಿಯಾಗಿ ವಿನಂತಿಸುತ್ತಿದ್ದು, ಬೆಂಬಲಿಗನೋರ್ವ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಹಾಲಿ ಶಾಸಕ ತನ್ವೀರ್‌ ಸೇಠ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದಿದ್ದಾರೆ.

ಮೈಸೂರಿನ ತನ್ವೀರ್‌ ಸೇಠ್‌ ನಿವಾಸದ ಮುಂಭಾಗದಲ್ಲಿ ಅವರ ಬೆಂಬಲಿಗರು ಸೇರಿದ್ದಾರೆ. ಈಗಲೂ ನೀವು ಎಂಎಲ್‌ಎ, ಮುಂದೆಯೂ ನೀವು ಎಂಎಲ್‌ಎ, ದಯವಿಟ್ಟು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಅವರ ಬೆಂಬಲಿಗರು ಕೇಳಿಕೊಳ್ಳುತ್ತಿದ್ದಾರೆ. ಕೆಲವರು ತನ್ವೀರ್‌ ಸೇಠ್‌ ಕಾಲಿಗೆ ಬಿದ್ದು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ವಿನಂತಿಸಿದ್ದಾರೆ. ಒಬ್ಬನಂತೂ ಮೈಗೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಯತ್ನವನ್ನೂ ಮಾಡಿದ್ದಾನೆ.

ರಾಜಕೀಯ ನಿವೃತ್ತಿಗೆ ನನ್ನ ಅನಾರೋಗ್ಯ ಕಾರಣ ಎಂದು ತನ್ವೀರ್‌ ಸೇಠ್‌ ಪತ್ರದಲ್ಲಿ ಬರೆದಿದ್ದಾರೆ. ನನ್ನ ಮೇಲೆ ಈ ಹಿಂದೆ ನಡೆದ ಹಲ್ಲೆಯ ಬಳಿಕ ಆಗಾಗ ಅನಾರೋಗ್ಯ ಕಾಡುತ್ತಿದೆ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

ತನ್ವೀರ್‌ ಸೇಠ್‌ ಮೇಲೆ ಈ ಹಿಂದೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಮೈಸೂರಿನ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತನ್ವೀರ್ ಸೇಠ್ ಅವರ ಕತ್ತಿನ ಹಿಂಭಾಗಕ್ಕೆ ಚಾಕು ಚುಚ್ಚಲಾಗಿತ್ತು.

ಈ ಚೂರಿ ಇರಿತದ ಬಳಿಕ ಪದೇಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ತನ್ವೀರ್‌ ಸೇಠ್‌ ಹೇಳಿದ್ದಾರೆ. ಅಂದಹಾಗೆ, ಇವರು ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿಯೇ ನಿವೃತ್ತಿ ಘೋಷಣೆ ಮಾಡಿ ಪತ್ರ ಬರೆದಿದ್ದಾರೆ. ಆದರೆ, ಈ ವಿಷಯ ಈಗ ಬೆಳಕಿಗೆ ಬಂದಿದ್ದು, ಅವರ ಬೆಂಬಲಿಗರಿಗೆ ಆಘಾತವಾಗಿದೆ.

ಆದರೆ, ನಾನು ರಾಜಕೀಯದ ನಿವೃತ್ತಿ ಪಡೆಯುತ್ತಿರುವುದು ಮಾತ್ರ. ಕಾಂಗ್ರೆಸ್‌ ಬಿಡುವುದಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿಯೇ ಇರುತ್ತೇನೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಇವರ ಮೇಲೆ ಹಲ್ಲೆ ನಡೆದ ಬಳಿಕವೂ ತನ್ನ ನರಸಿಂಹರಾಜ ಕ್ಷೇತ್ರದಲ್ಲಿ ಯಾವುದೇ ಗಲಭೆಯಾಗದಂತೆ ನೋಡಿಕೊಂಡಿದ್ದಾರೆ. ಇವರ ಕ್ಷೇತ್ರದಲ್ಲಿ ಅಲ್ಪಾ ಸಂಖ್ಯಾತರ ಮತಗಳು ಹೆಚ್ಚಿದ್ದು, ಹಲವು ಚುನಾವಣೆಗಳಲ್ಲಿ ಗೆಲುವಿನ ಮಾಲೆ ಧರಿಸಿದ್ದಾರೆ. 2002ರ ಚುನಾವಚಣೆ ಬಳಿಕ ಸತತವಾಗಿ ಗೆಲುವು ಪಡೆದಿದ್ದಾರೆ.

ಅಲ್ಪಾ ಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರೊಬ್ಬರು ರಾಜಕೀಯದಿಂದ ಹಿಂದೆ ಸರಿಯುತ್ತಿರುವುದರಿಂದ ಇವರ ಸ್ಥಾನಕ್ಕೆ ಮುಂದೆ ಯಾರು ಎಂಬ ಪ್ರಶ್ನೆಯೂ ಮೂಡಿದೆ. ಕಳೆದ ಡಿಸೆಂಬರ್‌ನಲ್ಲಿಯೇ ಇವರು ಪತ್ರ ಬರೆದಿರುವುದರಿಂದ ಇವರ ಉತ್ತರಾಧಿಕಾರಿ ಯಾರು ಎನ್ನುವುದನ್ನು ಕಾಂಗ್ರೆಸ್‌ ಈಗಾಗಲೇ ನಿಶ್ಚಿಯಿಸಿರಬಹುದು ಎನ್ನಲಾಗಿದೆ.