ಕನ್ನಡ ಸುದ್ದಿ  /  Karnataka  /  Modi Vs Gandhi Karnataka Election 2023 Modi Wave Vs Gandhi Wave Which One Can Convince The Voters Of Karnataka

Modi vs Gandhi: ಕರ್ನಾಟಕ ಚುನಾವಣೆ 2023; ಮೋದಿ ಹವಾ vs ಗಾಂಧಿ ಹವಾ- ಯಾವುದಿರಬಹುದು ಮತದಾರರ ಮನತಣಿಸುವ ಹವಾ...

Modi vs Gandhi: ಕರ್ನಾಟಕ ಚುನಾವಣೆ ಮೇ 10ಕ್ಕೆ ನಿಗದಿಯಾಗಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇದೆ. 2014ರಲ್ಲಿ ಶುರುವಾದ ಮೋದಿ ಹವಾ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಂಚ ಪ್ರಭಾವ ಬೀರಿತ್ತು. ಆದರೆ, ಈ ಸಲವೂ ಅದು ಮುಂದುವರಿಯುವುದೇ? ರಾಹುಲ್‌ ಗಾಂಧಿ ಅವರ ಭಾರತ್‌ ಐಕ್ಯತಾ ಯಾತ್ರೆಯ ಫಲ ಏನಿರಬಹುದು? ಒಂದು ಒಳನೋಟ ಇಲ್ಲಿದೆ.

ರಾಹುಲ್‌ ಗಾಂಧಿ ವರ್ಸಸ್‌ ನರೇಂದ್ರ ಮೋದಿ
ರಾಹುಲ್‌ ಗಾಂಧಿ ವರ್ಸಸ್‌ ನರೇಂದ್ರ ಮೋದಿ

ಕರ್ನಾಟಕ ವಿಧಾನ ಸಭೆಗೆ ಮತ್ತೊಂದಾವೃತ್ತಿ ಚುನಾವಣೆ ಎದುರಾಗಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ಇದೆ. ಬಿಜೆಪಿ ಪಾಲಿಗೆ ಕರ್ನಾಟಕ ಇನ್ನೂ ಗುಜರಾತ್‌ ಮಾದರಿಯಲ್ಲಿ ಗಟ್ಟಿ ನೆಲೆಯಾಗಿ ಮಾರ್ಪಾಡಾಗಿಲ್ಲ. ಇಲ್ಲಿನ ರಾಜಕೀಯ ಲೆಕ್ಕಾಚಾರಗಳೇ ಬೇರೆ. ಗುಜರಾತಿನಂತೆ ಕರ್ನಾಟಕವು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೇ ಪಕ್ಷದ ಆಡುಂಬೊಲವಲ್ಲ. ಇಲ್ಲಿ ಮೂರನೇ ಪಕ್ಷಕ್ಕೂ ಅಂದರೆ ಜೆಡಿಎಸ್‌ಗೂ ರಾಜಕೀಯದ ಆಟ ಆಡಲು ಅವಕಾಶ ನೀಡಿದ್ದಾರೆ ಕನ್ನಡಿಗರು. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ, ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್‌ ಇಲ್ಲಿ ಪ್ರಭಾವಿ.

ರಾಜ್ಯ ರಾಜಕೀಯ ಚಟುವಟಿಕೆಗಳನ್ನು ಗಮನಿಸುವುದಾದರೆ, ಕಳೆದ ಒಂದು ವರ್ಷದ ಅವಧಿ ಚುನಾವಣಾ ವರ್ಷವಾಗಿಯೇ ಪರಿಗಣಿಸಲ್ಪಟ್ಟಿತ್ತು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ಗಳ ರಾಜಕೀಯ ಚಟುವಟಿಕೆಗಳೂ ಅದೇ ರೀತಿ ಇದ್ದವು. ಈ ಪೈಕಿ ಮೂರೂ ಪಕ್ಷಗಳ ಯಾತ್ರಾ ಪರ್ವ ಗಮನಾರ್ಹ.

ಕಾಂಗ್ರೆಸ್‌ ಪಕ್ಷದ ಭಾರತ್‌ ಜೋಡೋ ಯಾತ್ರೆ ಅಥವಾ ಭಾರತ್‌ ಐಕ್ಯತಾ ಯಾತ್ರೆ ಕರ್ನಾಟಕದಲ್ಲಿ ಭಾರಿ ಸದ್ದುಮಾಡಿತ್ತು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಶುರುವಾದ ಯಾತ್ರೆ ಕಾಶ್ಮೀರದ ತನಕ ಸಾಗುವ ದಾರಿ ಮಧ್ಯೆ ಕರ್ನಾಟಕದಲ್ಲಿ 24 ದಿನ 500 ಕಿ.ಮೀ. ದೂರ ಕ್ರಮಿಸಿತ್ತು. ಕಾಂಗ್ರೆಸ್‌ ಪಕ್ಷದ ಮಟ್ಟಿಗೆ ಆಯಕಟ್ಟಿನ ಜಿಲ್ಲೆಗಳು ಎನಿಸಿದ ಭಾಗಗಳಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಸಂಚರಿಸಿತ್ತು.

ದೇಶದ ಬಹುತೇಕ ರಾಜ್ಯಗಳಲ್ಲಿ ರಾಜಕೀಯ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ ಈಗ ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸುವ ಭರವಸೆಯಲ್ಲಿದೆ. ಇದಕ್ಕೆ ರಾಹುಲ್‌ ಗಾಂಧಿಯವರ ಭಾರತ್‌ ಐಕ್ಯತಾ ಯಾತ್ರೆ ಬಲ ತುಂಬಿದೆ ಎಂಬ ವಿಶ್ವಾಸದಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು.

ಕಾಂಗ್ರೆಸ್‌ ನಾಯಕರು ಫೋಕಸ್‌ ಮಾಡಿದ ಅಂಶಗಳಿವು

  1. 40% ಸರ್ಕಾರ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕಮಿಷನ್‌ ಸರ್ಕಾರ ಎಂದು ಟೀಕಿಸಿರುವ ಕಾಂಗ್ರೆಸ್‌ ನಾಯಕರು, ಭ್ರಷ್ಟಾಚಾರವನ್ನು ಹೈಲೈಟ್‌ ಮಾಡಲು ಪ್ರಯತ್ನಿಸಿದ್ದಾರೆ.
  2. ಲಂಚಗುಳಿತನ, ಭ್ರಷ್ಟಾಚಾರ - ಮಾಡಾಳ್‌ ಪ್ರಕರಣ ಸೇರಿ ಇನ್ನಿತರೆ ವಿಚಾರಗಳನ್ನು ಗಮನಿಸಿದ್ದಾರೆ.
  3. ಲೈಂಗಿಕ ಹಗರಣ ಸೇರಿ, ಕಳಪೆ ಕಾಮಗಾರಿಗಳ ವಿಚಾರ, ವರ್ಗಾವಣೆಯಲ್ಲಿ ಆಗಿರುವ ಲೋಪಗಳನ್ನು ಎತ್ತಿ ತೋರಿಸುತ್ತಿದ್ದಾರೆ.
  4. ಪಕ್ಷಾಂತರಿಗಳಿಗೆ ಪಾಠ ಕಲಿಸಿ- ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿ ಸೇರಿದವರಿಗೆ ಪಾಠ ಕಲಿಸಬೇಕು ಎಂದೂ ಮತದಾರರಲ್ಲಿ ಕೇಳಿದ್ದೂ ಆಗಿದೆ.
  5. ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ವಿತರಿಸಿದ್ದು, ವಿದ್ಯುತ್‌ ಉಚಿತ, ಯುವನಿಧಿ ಇತ್ಯಾದಿ ಘೋಷಿಸಿದೆ.

ಜೆಡಿಎಸ್‌ನ ಪಂಚರತ್ನ ರಥಯಾತ್ರೆ

ಹೆಚ್ಚಿನ ಸೀಟು ಕಾಂಗ್ರೆಸ್‌ ಪಕ್ಷಕ್ಕಾದರೂ ಬರಲಿ, ಬಿಜೆಪಿಗಾದರೂ ಬರಲಿ, ಕನಿಷ್ಠ 40 ಸೀಟು ಗೆದ್ದರೆ ಮುಖ್ಯಮಂತ್ರಿ ಆಗಬಹುದು ಎಂಬ ಕನಸು ಕಾಣುತ್ತಿದ್ದಾರೆ ಕುಮಾರಸ್ವಾಮಿ. ಅತಂತ್ರ ಫಲಿತಾಂಶವನ್ನು ಮೊದಲೇ ಊಹಿಸಿಕೊಂಡಿರುವ ಕುಮಾರಸ್ವಾಮಿ, ಈ ಸಲ ಮುಖ್ಯಮಂತ್ರಿ ನಾನೇ ಎಂದೂ ಹೇಳಿಕೊಂಡ ಉದಾಹರಣೆಗಳಿವೆ.

ಹಳೇಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಕಡೆಗೆ ಹೆಚ್ಚಿನ ಗಮನಕೊಟ್ಟಿರುವ ಜೆಡಿಎಸ್‌ ನಾಯಕರು, ಪಂಚರತ್ನ ರಥ ಯಾತ್ರೆಯನ್ನು ಆಯೋಜಿಸಿ ಜನಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಜೆಡಿಎಸ್‌ ನಾಯಕರು ಫೋಕಸ್‌ ಮಾಡಿದ ಪಾಯಿಂಟ್ಸ್‌ ಇವು

  1. ಎರಡು ರಾಜಕೀಯ ಪಕ್ಷಗಳ ನಡುವೆ, ಕರ್ನಾಟಕದ ಹಿತ ಕಾಪಾಡಬೇಕಾದರೆ ಪ್ರಾದೇಶಿಕ ಪಕ್ಷವೇ ಆಗಬೇಕು. ನವೆಂಬರ್‌ ಒಂದರಂದು ಕನ್ನಡ ಬಾವುಟ ಮನೆ ಮನೆಯಲ್ಲಿ ಹಾರಾಡಿಸಬೇಕು ಎಂದು ಕನ್ನಡ ಅಸ್ಮಿತೆ ಜಾಗೃತಿಗೊಳಿಸುವ ಕೆಲಸ ಮಾಡಿದ್ದು.
  2. ಪಂಚರತ್ನ ಯೋಜನೆಗಳನ್ನು 1. ಶಿಕ್ಷಣವೇ ಆಧುನಿಕ ಶಕ್ತಿ, 2. ಆರೋಗ್ಯವೇ ಸಂಪತ್ತು, 3. ರೈತ ಚೈತನ್ಯ, 4. ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ, 5. ವಸತಿಯ ಆಸರೆ ಘೋಷಣೆ ಮಾಡಿದೆ. ಇದರ ಪ್ರಚಾರಕ್ಕೆ ಎರಡು ಹಂತಗಳ ಪಂಚರತ್ನ ರಥಯಾತ್ರೆ.
  3. ಕಮಿಷನ್‌ ಸರ್ಕಾರ ಎಂದು ಬೊಮ್ಮಾಯಿ ಸರ್ಕಾರ ಟಾರ್ಗೆಟ್‌ ಮಾಡಿ ಪ್ರಚಾರ.
  4. ಕಾರ್ಯಕರ್ತರ ಜತೆಗೆ ನೇರ ಸಂಪರ್ಕಕ್ಕೆ ಕುಮಾರಸ್ವಾಮಿ ಅವರಿಂದ ಫೋನ್‌‌ ಇನ್‌ ಕಾರ್ಯಕ್ರಮ, ಪಂಚರತ್ನ ಯಾತ್ರೆಯ ಕೊನೆಯಲ್ಲಿ ದೇವೇಗೌಡರ ಉಪಸ್ಥಿತಿ.

ಬಿಜೆಪಿ ಜನಸಂಕಲ್ಪ, ವಿಜಯ ಸಂಕಲ್ಪ ಯಾತ್ರೆ

ಆಡಳಿತಾರೂಢ ಬಿಜೆಪಿ, ಅಧಿಕಾರ ಉಳಿಸಿಕೊಳ್ಳಬೇಕು ಎಂದು ಮೊದಲ ಸುತ್ತಿನಲ್ಲಿ ಜನಸಂಕಲ್ಪ ಯಾತ್ರೆ ನಡೆಸಿತು. ಅದಾಗಿ ಪ್ರಗತಿ ರಥಗಳನ್ನು ನಾಡಿನ ಎಲ್ಲ ಕ್ಷೇತ್ರಗಳಿಗೂ ಕಳುಹಿಸಿತು. ಬಳಿಕ ವಿಜಯ ಸಂಕಲ್ಪ ಯಾತ್ರೆ ನಡೆಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್‌ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದಿಯಾಗಿ ಪ್ರಮುಖರೆಲ್ಲ ಕರ್ನಾಟಕಕ್ಕೆ ಪದೇಪದೆ ಬಂದು ಹೋಗಿದ್ದಾರೆ. ಚುನಾವಣೆ ಘೋಷಣೆ ಆಗಿರುವ ಕಾರಣ ಇನ್ನು ಪ್ರಚಾರಕ್ಕೆ ವೇಗ, ತೀವ್ರತೆ ಸಿಗಲಿದೆ.

ಬಿಜೆಪಿ ಫೋಕಸ್‌ ಮಾಡಿದ ಅಂಶಗಳು

  1. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಾಡಿದ ಕಮಿಷನ್‌ ಆರೋಪಗಳನ್ನು ಜಾಣತನದಿಂದ ನಿರಾಕರಿಸುತ್ತ ಬಂದ ಬಸವರಾಜ ಬೊಮ್ಮಾಯಿ ಸರ್ಕಾರ, ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಯೋಜನೆಗಳನ್ನು ಪ್ರಕಟಿಸುತ್ತ ಸಕ್ರಿಯವಾಗಿ ಮುನ್ನಡೆದಿತ್ತು.
  2. ಮಾಡಾಳ್‌ ಪ್ರಕರಣದಲ್ಲಿ ಇರಿಸುಮುರಿಸು ಎದುರಿಸಿದರೂ, ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು. ಇನ್ನೊಂದೆಡೆ, ಬಿಜೆಪಿಯ ಆಂತರಿಕ ವಲಯದಲ್ಲಿ ಮಾಡಾಳ್‌ ಹೊರಗಿನಿಂದ ಅಂದರೆ ಕಾಂಗ್ರೆಸ್‌ನಿಂದ ಬಂದವರು ಎಂಬ ಮಾತು ತಳಮಟ್ಟದಲ್ಲಿ ಗಮನಸೆಳದಿತ್ತು.
  3. ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿತ್ತಾದರೂ, ಚುನಾವಣೆ ಘೋಷಣೆಗೆ ಮುನ್ನ ಅದನ್ನೂ ಮುಖ್ಯಮಂತ್ರಿ ಬೊಮ್ಮಾಯಿ ತಣಿಸಿದರು. ಮೀಸಲಾತಿ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮ ಸಂಚಲನ ಮೂಡಿಸಿದ್ದು, ಶಿವಮೊಗ್ಗದಲ್ಲಿ, ಬಿಎಸ್‌ವೈ ಮನೆ ಮೇಲೆ ಕಲ್ಲುತೂರಾಟ ಮತ್ತು ಪ್ರತಿಭಟನೆಗೆ ಕಾರಣವಾಗಿದೆ. ಮೀಸಲಾತಿಗೆ ಸರ್ಕಾರ ತೆಗೆದುಕೊಂಡ ಕ್ರಮವನ್ನು ಮಾಸ್ಟರ್‌ ಸ್ಟ್ರೋಕ್‌ ಎಂದು ಬಣ್ಣಿಸಲಾಗುತ್ತಿದ್ದು, ಅದರ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಇದ್ದೇ ಇದೆ.
  4. ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಮುಂತಾದವುಗಳನ್ನು ಮುಂದಿಟ್ಟುಕೊಂಡು ಮತದಾರರಿಗೆ ಅವುಗಳನ್ನು ಮನದಟ್ಟು ಮಾಡುವ ಕ್ರಮಕ್ಕೆ ಬಿಜೆಪಿ ಮುಂದಾಗಿದೆ.
  5. ಕಾಂಗ್ರೆಸ್‌, ಜೆಡಿಎಸ್‌ಗಳು ಈಗಾಗಲೇ ಒಂದು ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿವೆ. ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಆ ಕಸರತ್ತಿನ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಹೋಗುವ ನಾಯಕರು, ಶಾಸಕರು ಅನೇಕರು ಇರಬಹುದು ಎಂದು ಹೇಳಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮಾಡದೇ ಇದ್ದ ಕ್ರಮವೂ ಈಗ ಚರ್ಚೆಗೆ ಒಳಗಾಗಿದೆ.

ಮೋದಿ ವರ್ಸಸ್‌ ಗಾಂಧಿ

ರಾಜ್ಯದಲ್ಲಿ 2019ರ ಲೋಕಸಭೆ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಲೇವಡಿ ಮಾಡುತ್ತ ʻಎಲ್ಲ ಕಳ್ಳರಿಗೂ ಮೋದಿ ಸರ್‌ನೇಮ್‌ ಯಾಕೆ ಬಂತು?ʼ ಎಂದು ಹೇಳಿದ್ದರು. ಅದೇ ಕಾರಣಕ್ಕೆ ಈಗ ಕರ್ನಾಟಕ ಚುನಾವಣೆಗೆ ಮೊದಲು ಅವರು ಸಂಸದ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರು ಮತ್ತೆ ಕೋಲಾರದಲ್ಲಿ ಏ.5ರಂದು ಮತ್ತೆ ಪ್ರಚಾರ ಭಾಷಣ ಮಾಡಲಿದ್ದಾರೆ. ರಾಹುಲ್‌ ಗಾಂಧಿಗೂ ಕರ್ನಾಟಕ ಚುನಾವಣೆ ಬಹಳ ಮುಖ್ಯವಾದ್ದು. ಇವರ ಮಾತುಗಳು ಫಲಿತಾಂಶದ ಮೇಲೆ ಅಂದರೆ ಜನಾದೇಶದ ಮೇಲೆ ಏನು ಪರಿಣಾಮ ಬೀರಬಹುದು ಎಂಬ ಕುತೂಹಲವಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಈಗಾಗಲೇ ಈವರ್ಷ ಐದಾರು ಬಾರಿ ಬಂದು ಹೋಗಿದ್ದಾರೆ. ಅವರಿಗೆ ಕರ್ನಾಟಕ ಚುನಾವಣೆ ಬಹಳ ಮು‍ಖ್ಯವಾದುದು. ಕಾಂಗ್ರೆಸ್‌ ಪಕ್ಷದ ವಂಶಾಡಳಿತ, ಗಾಂಧಿ-ನೆಹರು ಕುಟುಂಬ ಕೇಂದ್ರಿತವಾಗಿ ಪಕ್ಷದ ಕಾರ್ಯಾಚರಣೆಗಳನ್ನು ಸದಾ ಟೀಕಿಸುತ್ತಿರುವವರು ಪ್ರಧಾನಿ ನರೇಂದ್ರ ಮೋದಿ. ಅವರ ಮಾತುಗಳಿಂದ ಮತದಾರರು ಎಷ್ಟು ಪ್ರಭಾವಿತರಾಗುವರು. ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದೇ ಎಂಬುದು ಈಗಿರುವ ಕುತೂಹಲ.

IPL_Entry_Point