Karnataka Dams: ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ಜಲಾಶಯಗಳಿಗೂ ಭಾರೀ ಒಳಹರಿವು: ತಮಿಳುನಾಡು ತಲುಪಿದ 6 ಟಿಎಂಸಿ ನೀರು
Rain Updates ಕರ್ನಾಟಕದಲ್ಲಿ ಭಾರೀ ಮಳೆಯಿಂದ ಕಾವೇರಿ ಕಣಿವೆಯ ಎರಡು ಜಲಾಶಯ ಬಹುತೇಕ ತುಂಬಿದ್ದರೆ ಇನ್ನೆರಡು ತುಂಬಬೇಕಿದೆ. ಕೃಷ್ಣಾ ನದಿ ಪಾತ್ರದ ಆಲಮಟ್ಟಿ, ಮಲೆನಾಡು ಮಳೆಯಿಂದ ತುಂಗಭದ್ರಾ ಜಲಾಶಯಕ್ಕೂ ನೀರು ಹರಿದಿದೆ. ಕಾವೇರಿ ಕೊಳ್ಳದಿಂದ ತಮಿಳುನಾಡಿಗೂ ನೀರು ಹರಿದು ಹೋಗಿದೆ. ಈ ಕುರಿತು ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕಬಿನಿ ಹಾಗೂ ಹಾರಂಗಿ ಜಲಾಶಯಗಳು ಬಹುತೇಕ ತುಂಬಿದ್ದರೆ, ಕೃಷ್ಣರಾಜಸಾಗರ ಹಾಗೂ ಹೇಮಾವತಿ ಜಲಾಶಯ ಇನ್ನೂ ತುಂಬುವ ಹಂತದಲ್ಲಿವೆ. ಈ ನಡುವೆ ತಮಿಳುನಾಡಿಗೂ ಸದ್ದಿಲ್ಲದೇ ಒಂದು ವಾರದಲ್ಲಿ 5 ರಿಂದ 6 ಟಿಎಂಸಿ ನೀರು ತಲುಪಿದೆ.
ಕೃಷ್ಣರಾಜಸಾಗರ ಜಲಾಶಯ ಈವರೆಗೂ ತುಂಬದೇ ಇರುವುದರಿಂದ ಇನ್ನೂ ಹೊರ ಹರಿವು ಶುರುವಾಗಿಲ್ಲ. ಆದರೆ ಕಬಿನಿ, ಹಾರಂಗಿ ತುಂಬುವ ಹಂತದಲ್ಲಿರುವುದರಿಂದ ನಾಲ್ಕೈದು ದಿನದಿಂದಲೇ ಹೊರ ಹರಿವು ಹೆಚ್ಚಿಸಲಾಗಿದೆ. ಹಾರಂಗಿಯಿಂದ ಬಿಟ್ಟ ನೀರು ಕೃಷ್ಣರಾಜಸಾಗರಕ್ಕೆ ಬಂದರೆ, ಕಬಿನಿ ನೀರು ತಮಿಳುನಾಡು ಭಾಗವನ್ನು ತಲುಪಲಿದೆ.
ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲೂ ಮಳೆಯಾಗುತ್ತಿರುವುದರಿಂದ ಆಲಮಟ್ಟಿ, ತುಂಗಭದ್ರಾ ಜಲಾಶಯಗಳಲ್ಲೂ ನೀರಿನ ಪ್ರಮಾಣ ಗಣನೀಯ ಏರಿಕೆಯಾಗಿದೆ. ಆಲಮಟ್ಟಿಯಿಂದಲೂ ಹೊರ ಹರಿವಿನ ಪ್ರಮಾಣವನ್ನು ಏರಿಸಲಾಗಿದೆ.
ತಲುಪದ ಗುರಿ
ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ತಮಿಳುನಾಡಿಗೆ ವರ್ಷಕ್ಕೆ ಒಟ್ಟು192 ಟಿಎಂಸಿ ನೀರು ಹರಿ ಬಿಡಬೇಕು. ಅದೂ ಮಳೆಗಾಲದ ಜೂನ್, ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳಿನ ಕೋಟಾವೇ 110 ಟಿಎಂಸಿ. ಜೂನ್‌ನಲ್ಲಿ 10, ಜುಲೈನಲ್ಲಿ 34 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ಆದರೆ ಕಾವೇರಿ ಕಣಿವೆಯಲ್ಲಿ ಈ ಬಾರಿ ಜುಲೈ ಮುಗಿಯುವ ಹಂತಕ್ಕೆ ಬಂದಿದ್ದರೂ ಮಳೆ ಕಡಿಮೆಯಾಗಿ ಜಲಾಶಯಗಳು ಪೂರ್ತಿ ತುಂಬಿಲ್ಲ. ಇದರಿಂದ ತಮಿಳುನಾಡಿಗೆ ನೀರು ಹರಿಸಲು ಆಗಿಲ್ಲ. ಈವರೆಗೂ 5 ರಿಂದ 6 ಟಿಎಂಸಿ ನೀರು ಮಾತ್ರ ತಮಿಳುನಾಡಿಮ ಬಿಳಿಗುಂಡ್ಲು ಜಲಾಶಯಕ್ಕೆ ಹರಿದ ಮಾಹಿತಿಯಿದೆ ಎನ್ನುವುದು ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರ ವಿವರಣೆ.
ಒಪ್ಪಂದ ಜಾರಿಯಾದ ನಂತರ 2006, 2007, 2009 ಹಾಗೂ 2013 ಹಾಗೂ 2018ರಲ್ಲಿ ಮಾತ್ರ ಗುರಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಅದನ್ನು ಬಿಟ್ಟರೆ ಬೇರೆ ವರ್ಷಗಳಲ್ಲಿ ಸಣ್ಣ ಪುಟ್ಟ ಕೊರತೆಯಾಗಿದೆ. ಈ ವರ್ಷವೂ ಅದೇ ಸ್ಥಿತಿಯಿದೆ. ಆಗಸ್ಟ್, ಸೆಪ್ಟಂಬರ್‌ನಲ್ಲಿ ಇನ್ನಷ್ಟು ಮಳೆಯಾದರೆ ಮಾತ್ರ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸಬಹುದು ಎನ್ನುತ್ತಾರೆ ಅಧಿಕಾರಿಗಳು.
ಹೆಚ್ಚಿದ ಕೆಆರ್‌ಎಸ್ ನೀರು
ಕೊಡಗು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಹಲವು ಕಡೆ ಭಾರೀ ಮಳೆ ಸುರಿಯುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಮತ್ತಷ್ಟು ಹೆಚ್ಚಿದೆ. ಬುಧವಾರ ಬೆಳಿಗ್ಗೆ ಹೊತ್ತಿಗೆ 51508 ಕ್ಯೂಸೆಕ್ ಇತ್ತು. ಜಲಾಶಯದ ಮಟ್ಟ 104.80 ಅಡಿ ತಲುಪಿದೆ. ಜಲಾಶಯ ತುಂಬಲು ಇನ್ನು 20 ಅಡಿ ನೀರು ಬೇಕು. 4 ಗಂಟೆಯಲ್ಲಿ ಜಲಾಶಯಕ್ಕೆ 4 ಟಿಎಂಸಿ ನೀರು ಹರಿದು ಬಂದಿದೆ .ಸದ್ಯ ಡ್ಯಾಂನಲ್ಲಿ 26.811 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯ ಹೊರಹರಿವಿನ ಪ್ರಮಾಣ 2853 ಕ್ಯೂಸೆಕ್‌ನಷ್ಟಿದೆ.
ಈಗ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಮುಂದುವರಿದರೆ ಆಗಸ್ಟ್ ಮೊದಲ ವಾರದ ಒಳಗೆ ಜಲಾಶಯ ತುಂಬುವ ನಿರೀಕ್ಷೆಯಿದೆ. ಕೊಡಗಿನಲ್ಲೂ ಮಳೆ ಅಧಿಕವಾಗಿರುವುದು ಒಳಹರಿವನ್ನು ಹೆಚ್ಚಿಸಬಹುದು ಎನ್ನುತ್ತಾರೆ ಕೆಆರ್‌ಎಸ್ ಅಧಿಕಾರಿಗಳು.
ಕಬಿನಿ ತುಂಬಲು ಎರಡು ಅಡಿ ಬಾಕಿ
ಕೇರಳದಲ್ಲೂ ಮಳೆಯಾಗುತ್ತಿರುವುದು ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಉತ್ತಮ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬುಧವಾರ ಬೆಳಿಗ್ಗೆ ಜಲಾಶಯಕ್ಕೆ 26873 ಕ್ಯೂಸೆಕ್ ನೀರು ಒಳ ಬರುತ್ತಿದೆ. ಜಲಾಶಯದ ನೀರಿನ ಮಟ್ಟ 2281.86 ಅಡಿಯಷ್ಟಿದ್ದು, 18.15 ಟಿಎಂಸಿ ನೀರು ಲಭ್ಯವಿದೆ. ಇನ್ನು ಒಂದು ಟಿಎಂಸಿ ನೀರು ಬಂದರೂ ಜಲಾಶಯ ತುಂಬಲಿದೆ. ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಜಲಾಶಯದ ಹೊರ ಹರಿವನ್ನೂ ಹೆಚ್ಚಿಸಲಾಗಿದೆ. 17396 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು. ಸಂಜೆ ನಂತರ ಹೆಚ್ಚಿಸುವ ಸಾಧ್ಯತೆಯಿದೆ. ಈಗಾಗಲೇ ಕಪಿಲಾ ನದಿ ಹೊರ ಹರಿವು ಹೆಚ್ಚಿರುವುದರಿಂದ ನಂಜನಗೂಡು, ಸುತ್ತೂರು, ತಿ.ನರಸೀಪುರ ಬಳಿ ಏರಿಕೆಯಾಗಿರುವುದು ಕಂಡು ಬಂದಿದೆ. ಹೊರ ಹರಿವು 40 ಸಾವಿರ ದಾಟಿದರೆ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ.
ಹಾರಂಗಿಗೂ ನೀರು
ಕೊಡಗಿನ ಪುಟ್ಟ ಜಲಾಶಯ ಹಾರಂಗಿಗೂ ನೀರು ಬಂದಿದೆ. ಹಾಸನ ಹಾಗೂ ಕೊಡಗಿನ ಮಳೆಯಿಂದಾಗಿ ಬುಧವಾರ ಬೆಳಿಗ್ಗೆ ಜಲಾಶಯಕ್ಕೆ 12861 ಕ್ಯೂಸೆಕ್ ನೀರು ಹರಿಯುತ್ತಿದೆ. ಜಲಾಶಯದ ಮಟ್ಟ 2853.13 ಅಡಿ ತಲುಪಿದ್ದು 10.195 ಟಿಎಂಸಿ ಸಂಗ್ರಹವಾಗಿದೆ. ಸದ್ಯ ಜಲಾಶಯದಿಂದ 12625 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಆಲಮಟ್ಟಿ ತುಂಬಲು ಮೂರು ಮೀಟರ್ ಬೇಕು
ಮಹಾರಾಷ್ಟ್ರದ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೂ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಬುಧವಾರ ಬೆಳಿಗ್ಗೆ ಜಲಾಶಯಕ್ಕೆ 1,38,473 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 516.84 ಮೀಟರ್ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್. ಸದ್ಯ ಜಲಾಶಯದಲ್ಲಿ 82.509 ಟಿಎಂಸಿ ನೀರು ಸಂಗ್ರಹವಾಗಿದೆ. ಈಗಾಗಲೇ ಜಲಾಶಯಕ್ಕೆ ನೀರು ಹೆಚ್ಚಿದ್ದರಿಂದ ಹೊರ ಹರಿವು ಕೂಡ ಅಧಿಕವಾಗಿದೆ. ಈವರೆಗೂ 30 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಹಂತ ಹಂತವಾಗಿ 42,500 ಕ್ಯೂಸೆಕ್‌ಗೆ ಏರಿಸಲಾಗುತ್ತಿದೆ.
ತುಂಗಭದ್ರಾಗೆ ಲಕ್ಷ ದಾಟಿದ ಒಳ ಹರಿವು
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೂ108019 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದ ನೀರಿನ ಮಟ್ಟ 1611.27ಕ್ಕೆ ಏರಿಕೆ ಕಂಡಿದೆ. ಜಲಾಶಯದ ಗರಿಷ್ಠ ಮಟ್ಟ1633 ಅಡಿ. 105.788 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 40.136 ಟಿಎಂಸಿ ನೀರು ಸಂಗ್ರಹವಾಗಿದೆ. ಮಲೆನಾಡು ಭಾಗದಲ್ಲಿ ಮಳೆಯಾಗಿ ತುಂಗಾ ಜಲಾಶಯದಿಂದ ಭಾರೀ ನೀರು ಹರಿದು ಬರುತ್ತಿರುವುದರಿಂದ ತುಂಗಭದ್ರಾ ನದಿ ನೀರಿನ ಪ್ರಮಾಣ ಹೆಚ್ಚಿದೆ.