ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು, ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆ ವಾತಾವರಣ: ವಾಡಿಕೆಗಿಂತ 8 ದಿನ ಮೊದಲೇ ಮಳೆ ಶುರು
ಕನ್ನಡ ಸುದ್ದಿ  /  ಕರ್ನಾಟಕ  /  ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು, ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆ ವಾತಾವರಣ: ವಾಡಿಕೆಗಿಂತ 8 ದಿನ ಮೊದಲೇ ಮಳೆ ಶುರು

ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು, ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆ ವಾತಾವರಣ: ವಾಡಿಕೆಗಿಂತ 8 ದಿನ ಮೊದಲೇ ಮಳೆ ಶುರು

ಈ ಬಾರಿಯ ಮುಂಗಾರು ಕೇರಳವನ್ನು ಪ್ರವೇಶಿಸಿದೆ. ಒಂದು ವಾರ ಮುಂಚೆಯೇ ಕೇರಳದ ಮೂಲಕ ಮುಂಗಾರು ಆಗಮಿಸಿದ್ದು, ಕರ್ನಾಟಕದಲ್ಲೂ ಶನಿವಾರದಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿದೆ.

ಮುಂಗಾರು ಮಳೆ ಕೇರಳವನ್ನು ಪ್ರವೇಶಿಸಿದ್ದು ಹಲವೆಡೆ ಶನಿವಾರ ಮಳೆಯಾಗಿದೆ.
ಮುಂಗಾರು ಮಳೆ ಕೇರಳವನ್ನು ಪ್ರವೇಶಿಸಿದ್ದು ಹಲವೆಡೆ ಶನಿವಾರ ಮಳೆಯಾಗಿದೆ. (The Hindu)

ಬೆಂಗಳೂರು: ಈ ಬಾರಿಯ ನೈಋತ್ಯ ಮುಂಗಾರು ಮಳೆ ಕೇರಳವನ್ನು ಮೇ ಕೊನೆಯ ವಾರದಲ್ಲಿ ಪ್ರವೇಶಿಸಬಹುದು ಎನ್ನುವ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಮೀರಿ ಮೇ 24ರ ಶನಿವಾರವೇ ಮುಂಗಾರಿನ ಪ್ರವೇಶವಾಗಿದೆ. ಕೇರಳದ ಹಲವು ಭಾಗಗಳಲ್ಲಿ ಶನಿವಾರವೇ ಮಳೆಯಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ಮೈಸೂರು,ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಸಹಿತ ಹಲವು ಭಾಗಗಳಲ್ಲಿ ಶನಿವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ, ಆಗಾಗ ಮಳೆ ಸುರಿಯುತ್ತಲೇ ಇದೆ. ಇದರಿಂದ ಈ ಬಾರಿ ಮುಂಗಾರು ಕೇರಳದ ಮೂಲಕ ಭಾರತವನ್ನು ಬೇಗನೇ ಪ್ರವೇಶಿಸಿದಂತಾಗಿದ್ದು, ಮಳೆಗಾಲ ಆರಂಭಗೊಂಡಂತಾಗಿದೆ. 2009ರಲ್ಲಿ ಮಾತ್ರ ಮೇ 23 ರಂದು ನೈಋತ್ಯ ಮುಂಗಾರು ಕೇರಳ ಪ್ರವೇಶಿಸಿದ್ದನ್ನು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಮೇ ಕೊನೆಗೆ ಇಲ್ಲವೇ ಜೂನ್‌ ಮೊದಲ ವಾರ ಪ್ರವೇಶಿಸಿದ ಉದಾಹರಣೆಗಳಿವೆ.

ಈಗಾಗಲೇ ಭಾರತೀಯ ಹವಾಮಾನ ಇಲಾಖೆಯು ಈ ಸಾಲಿನ ಮುಂಗಾರು ಮಳೆ ಕುರಿತು ಮಾಹಿತಿ ಬಿಡುಗಡೆ ಮಾಡಿತ್ತು. ಮೇ 27 ರಂದು ಕೇರಳದ ಮೂಲಕ ಪ್ರವೇಶಿಸಬಹುದು. ಜೂನ್‌ ಹೊತ್ತಿಗೆ ಪ್ರಬಲವಾಗಬಹುದು ಎನ್ನುವ ಮುನ್ಸೂಚನೆ ನೀಡಿತ್ತು. ಆದರೆ ಆನಂತರದ ಬೆಳವಣಿಗೆಗಳಲ್ಲಿ ಮುಂಗಾರು ಬೇಗನೇ ಪ್ರವೇಶಿಸಬಹುದು ಎನ್ನುವ ಮಾಹಿತಿ ನೀಡಲಾಗಿತ್ತು. ಈಗ ಬೇಗನೇ ಮುಂಗಾರು ಕೇರಳ ಪ್ರವೇಶಿಸಿದೆ. ಕಳೆದ ಒಂದೂವರೆ ದಶಕದಲ್ಲಿ ಹೆಚ್ಚಿನ ಬಾರಿ ಮುಂಗಾರು ಜೂನ್‌ನಲ್ಲಿಯೇ ಪ್ರವೇಶಿಸಿದರೆ, ಇನ್ನಷ್ಟು ವರ್ಷ ಮೇ ಕೊನೆಗೆ ಪ್ರವೇಶಿಸಿದೆ. ಈ ಬಾರಿ ಮೇ ತಿಂಗಳ ಕೊನೆ ವಾರದ ಆರಂಭಕ್ಕೂ ಮುನ್ನವೇ ಮಳೆ ಬಂದಿರುವುದು ವಿಶೇಷ.

ಕರ್ನಾಟಕದ ಕೊಡಗಿನಲ್ಲೂ ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ಮುಂಗಾರಿನ ವಾತಾವರಣ ಶುರುವಾಗಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮುಂಗಾರು ಹೆಚ್ಚಿನ ಪ್ರಮಾಣದಲ್ಲಿಯೇ ಆಗಿದೆ. ಇದರಿಂದ ಜಲಾಶಯಗಳಲ್ಲಿ ನೀರು ಭರ್ತಿಯಾಗಿ ಕೃಷಿ ಚಟುವಟಿಕೆ ಸಹಜವಾಗಿಯೇ ಇರಲಿದೆ. ಇದು ಭಾರತದ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡಲಿದೆ. ಕೃಷಿಯೇ ಭಾರತದ ಪ್ರಮುಖ ಗ್ರಾಮೀಣ ಉದ್ಯೋಗವಾಗಿರುವುದರಿಂದ ಹೆಚ್ಚಿನ ಭಾಗಗಳಲ್ಲಿ ಜನ ಇನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

ಕೇರಳದಲ್ಲಿ ಭಾರೀ ಮಳೆ

ಕೇರಳದಲ್ಲಿ ಶುಕ್ರವಾರ ರಾತ್ರಿಯಿಡೀ ಸುರಿದ ಮಳೆ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದ ನಂತರ, ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ (ಮೇ 24, 2025) ನೈಋತ್ಯ ಮಾನ್ಸೂನ್ ಜೂನ್ 1 ರ ವಾಡಿಕೆಗಿಂತ ಮೇ 24, 2025 ರಂದು ರಾಜ್ಯದಲ್ಲಿ ಪ್ರವೇಶಿಸಿದೆ ಎಂದು ಘೋಷಿಸಿದೆ.

2009 ರ ಮೇ 23, 2009 ರಂದು ಕೇರಳದಲ್ಲಿ ಪ್ರವೇಶಿಸಿದ ನಂತರ ಇದು ಕೇರಳದಲ್ಲಿ ಮುಂಗಾರು ಪ್ರಾರಂಭವಾಗುವ ಆರಂಭಿಕ ದಿನಾಂಕವಾಗಿದೆ ಎಂದು ಐಎಂಡಿ ಅಧಿಕೃತವಾಗಿ ತಿಳಿಸಿದೆ.

ಕೇರಳದ ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಅಲಪ್ಪುಳ, ತ್ರಿಶೂರ್, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಹವಾಮಾನ ಬ್ಯೂರೋ ಈ ಹಿಂದೆ ರೆಡ್ ಅಲರ್ಟ್ ಘೋಷಿಸಿತ್ತು.

ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ವಿವಿಧ ನಗರಗಳಿಗೆ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಹಲವಾರು ಸ್ಥಳಗಳಲ್ಲಿ ಮರಗಳು, ಕೊಂಬೆಗಳು ಉರುಳಿಬಿದ್ದು, ಸಂಚಾರದ ಮೇಲೆ ಪರಿಣಾಮ ಬೀರಿತು ಮತ್ತು ಓವರ್ಹೆಡ್ ವಿದ್ಯುತ್ ತಂತಿಗಳು ಮುರಿದು ಬಿದ್ದಿವೆ. ಮೇ 24 ರಂದು ಒಂಬತ್ತು ಜಿಲ್ಲೆಗಳಲ್ಲಿ, ಮೇ 25 ರಂದು ಏಳು, ಮೇ 26 ರಂದು ನಾಲ್ಕು ಮತ್ತು ಮೇ 27 ರಂದು ಆರು ಜಿಲ್ಲೆಗಳಲ್ಲಿ ಕಿತ್ತಳೆ ಎಚ್ಚರಿಕೆ ನೀಡಲಾಗಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.