ಮಳೆಗಾಲ ಎದುರಿಸಲು ಕಾವೇರಿ ತೀರದ ಮಂಡ್ಯ ಜಿಲ್ಲೆಯಲ್ಲಿ ಸಿದ್ದತೆ; ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಲು ಜಿಲ್ಲಾಡಳಿತದ ಸೂಚನೆ
ಇನ್ನೇನು ಮುಂದಿನ ವಾರ ಮಳೆಗಾಲ ಆರಂಭವಾಗಲಿದೆ. ಇದಕ್ಕಾಗಿ ಕಾವೇರಿ ನದಿ ತೀರದ ಮಂಡ್ಯ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಅಣಿಯಾಗುತ್ತಿದೆ. ಏನೇನು ಸಿದ್ದತೆಗಳು ಆಗಿವೆ ಇಲ್ಲದೆ ಮಾಹಿತಿ.

ಮಂಡ್ಯ: ಕಾವೇರಿ ನದಿ ತೀರದ ಮಂಡ್ಯ ಜಿಲ್ಲೆಯಲ್ಲಿ ಮಳೆಗಾಲ ಎದುರಿಸಲು ಸಿದ್ದತೆಗಳು ನಡೆದಿವೆ. ಕಳೆದ ವರ್ಷ ಭಾರೀ ಮಳೆಯಿಂದ ಸಾಕಷ್ಟು ಅನಾಹುತಗಳು ಆಗಿದ್ದವು. ಇದರಿಂದ ಮಂಡ್ಯ ಜಿಲ್ಲಾಡಳಿತ ಈಗಿನಿಂದಲೇ ತಯಾರಿ ಆರಂಭಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಮುಂದಿನ ವಾರವೇ ಮುಂಗಾರು ಹಂಗಾಮು ಪ್ರಾರಂಭವಾಗಲಿದೆ, ಹವಾಮಾನ ಇಲಾಖೆಯ ವರದಿಯ ಪ್ರಕಾರ ಈ ಬಾರಿ ವಾಡಿಕೆಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿದ್ದು, ಅಧಿಕಾರಿಗಳು ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಿ ಅಧಿಕಾರಿಗಳು ಮಳೆ ಹಾನಿಯಾದ ನಂತರ ಕ್ರಮ ಕೈಗೊಳ್ಳುವುದಲ್ಲ. ಮೊದಲೇ ಕ್ರಮ ಕೈಗೊಂಡರೆ ಬಹಳಷ್ಟು ಹಾನಿ ತಡೆಗಟ್ಟಬಹುದು. ಆದರಿಂದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸಬೇಕು.
ಇದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀಡಿದ ಕಟ್ಟುನಿಟ್ಟಿನ ಸೂಚನೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಮುಂಬರುವ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಆಗಬಹುದಾದ ಹಾನಿ ಕುರಿತು ಮುನ್ನೆಚ್ಚರಿಕಾ ಕ್ರಮ ಹಾಗೂ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ 67 ಗ್ರಾಮಗಳನ್ನು ನೆರೆಗೆ ಸಿಲುಕಬಹುದಾದ ಗ್ರಮಗಳು ಎಂದು ಈಗಾಗಲೇ ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ. ತಹಶೀಲ್ದಾರ್ ಗಳು ಗ್ರಾಮ ಪಂಚಾಯಿತಿಗಳೊಂದಿಗೆ ಸಭೆ ನಡೆಸಿ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ .ಅವಶ್ಯಕವಾದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕಿದ್ದು, ಕಾಳಜಿ ಕೇಂದ್ರಗಳಲ್ಲಿ ಬೇಕಿರುವ ಮೂಲಭೂತ ವ್ಯವಸ್ಥೆಗಳು ಕಾಳಜಿ ಕೇಂದ್ರಗಳಲ್ಲಿ ಒದಗಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.
24*7 ನಿರ್ವಹಿಸುವ ಕಂಟ್ರೋಲ್ ರೂಂ ಅಗ್ನಿಶಾಮಕ, ಚೆಸ್ಕಾಂ, ಅರಣ್ಯ, ತಹಶೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳು 24*7 ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ಸ್ಥಾಪಿಸಬೇಕು ಹಾಗೂ ಸಾರ್ವಜನಿಕರು ಸಂಪರ್ಕಿಸಬೇಕಿರುವ ದೂರವಾಣಿ ಸಂಖ್ಯೆಯ ಮಾಹಿತಿ ನೀಡಬೇಕು ಎಂದರು.
ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಿ ಅಗ್ನಿ ಶಾಮಕ ಇಲಾಖೆಗಳು ಅತಿವೃಷ್ಢಿ ಸಂದರ್ಭದಲ್ಲಿ ಬೇಕಿರುವ ಬೋಟ್, ಲೈಫ್ ಜೆಕಾಟ್ ಸೇರಿದಂತೆ ಇನ್ನಿತರೆ ಪರಿಕರಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಿ. ಸ್ಥಳೀಯವಾಗಿ ನುರಿತ ಈಜುಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ ಎಂದು ಡಿಸಿ ಸೂಚನೆ ನೀಡಿದರು.
ಅರಣ್ಯ ಇಲಾಖೆಯಿಂದ ದುರ್ಬ ಮರ ಹಾಗೂ ಮರದ ಕೊಂಬೆಗಳು ನಿಯಮಾನುಸಾರ ತೆರವುಗೊಳಿಸಿ. ವಿದ್ಯುತ್ ತಂತಿಗಳು ಮರಗಳ ಮೇಲಿದ್ದರೆ ಯಾವುದೇ ತೊಂದರೆಯಾಗದಂತೆ ಚೆಸ್ಕಂ ಇಲಾಖೆಯ ಸಮನ್ವಯದೊಂದಿಗೆ ತೆರವುಗೊಳಿಸಿ ಎಂದರು.
ಆರೋಗ್ಯ ಇಲಾಖೆ ಆರೋಗ್ಯ ಸಮಿತಿಯನ್ನು ಚುರುಕುಗೊಳಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಇದರೊಂದಿಗೆ ಮಳೆಗಾಲದಲ್ಲಿ ವಿಷಪೂರಿತ ಹಾವುಗಳ ಕಡಿತದ ಪ್ರಕರಣಗಳು ಉಂಟಾಗುವ ಸಾಧ್ಯತೆ ಇದೆ. ಹವು ಕಡಿತಕ್ಕೆ ಔಷಧಿಗಳ ದಾಸ್ತಾನುಗಳು ಆಸ್ಪತ್ರೆಗಳಲ್ಲಿ ಸಮರ್ಪಕವಾಗಿರಲಿ ಎಂದು ಸೂಚಿಸಿದರು.
ಅತಿವೃಷ್ಢಿಯಿಂದ ಬೆಳೆ ಹಾನಿಯಾದಲ್ಲಿ ತಕ್ಷಣ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅವರು ತಕ್ಷಣ ಜಿಲ್ಲಾಡಳಿತಕ್ಕೆ ವರದಿ ಮಾಡಿ. ತಾಲ್ಲೂಕು ಆಡಳಿತ ಮನೆ ಹಾನಿಯಾದ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ ಪರಿಹಾರ ಪಾವತಿ ಮಾಡಿ. ಎಸ್.ಡಿ.ಆರ್.ಎಫ್ ಅನುದಾನದಡಿ ಈಗಾಗಲೇ ತಹಶೀಲ್ದಾರ್ ಬಳಿ ಎಲ್ಲಾ ತಾಲ್ಲೂಕುಗಳು ಸೇರಿ ಒಟ್ಟು 2 ಕೋಟಿ ರೂ ಅನುದಾನ ಇರುತ್ತದೆ. ಹೆಚ್ಚುವರಿ ಬೇಕಿದ್ದಲ್ಲಿ ಸಹ ಬಿಡುಗಡೆ ಮಾಡಲಾಗುವುದು ಎಂದರು.
ಕಾರ್ಯಾಗಾರ ಆಯೋಜಿಸಿ ಅತಿವೃಷ್ಠಿ ಸಂದರ್ಭದಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಗ್ನಿಶಾಮಕ ಇಲಾಖೆ ಅವರು ಕಾರ್ಯಾಗಾರ ಆಯೋಜಿಸಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ತುರ್ತು ಸಂದರ್ಭದಲ್ಲಿ ಕೆಲಸ ನಿರ್ವಹಿಸಲು ಇಲಾಖೆಗಳ ಸಮನ್ವಯ ಅತಿ ಮುಖ್ಯ, ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರು ಮಾತನಾಡಿ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಚರಂಡಿ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಹೂಳು ತೆಗೆಯಬೇಕು ಮಳೆ ನೀರು ಅಡೆತಡೆ ಇಲ್ಲದೆ ಹರಿದರೆ ಬಹಳಷ್ಟು ತೊಂದರೆಗಳನ್ನು ತಡೆಗಟ್ಟಬಹುದು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಘುರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮೋಹನ್ , ಕೆ.ಎಸ್.ಆರ್.ಟಿ.ಸಿ ಜಿಲ್ಲಾ ನಿಯಂತ್ರಕ ನಾಗರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.