ಆರಂಭವಾದ ಮಳೆಗಾಲ; ಅಪಾಯದ ಸ್ಥಿತಿಯಲಿರುವ ಮರ ಕುರಿತು ಪ್ರತಿದಿನ 20 ಕರೆ; ಮೇ ತಿಂಗಳು 500 ಮರ, ಸಾವಿರ ಕೊಂಬೆ ಕತ್ತರಿಸಿದ ಬಿಬಿಎಂಪಿ
ಮಳೆಗಾಲ ಆರಂಭವಾಗಿದ್ದು, ಅಪಾಯದ ಸ್ಥಿತಿಯಲಿರುವ ಮರ ಕುರಿತು ಪ್ರತಿದಿನ 20 ಕರೆ ಬರುತ್ತಿದೆ. ಮೇನಲ್ಲಿ 500 ಮರ,1,000 ಕೊಂಬೆ ಕತ್ತರಿಸಿರುವುದಾಗಿ ಬಿಬಿಎಂಪಿ ತಿಳಿಸಿದೆ. ನಿಮ್ಮ ಕಣ್ಣಿಗೆ ಬಿದ್ದಲ್ಲಿ ನೀವೂ ಕರೆ ಮಾಡಿ ತಿಳಿಸಬಹುದು. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಈ ತಿಂಗಳಲ್ಲಿ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಬೀಳುವ ಮರಗಳು ಮತ್ತು ಕೊಂಬೆಗಳನ್ನು ಕತ್ತರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 24/7 ಟೋಲ್ ಫ್ರೀ ಹೆಲ್ಪ್ ಲೈನ್ ನಂಬರ್ ಸ್ಥಾಪಿಸಲಾಗಿದ್ದು 1533 ನಂಬರ್‌ಗೆ ಪ್ರತಿದಿನ 20-25 ಕರೆಗಳು ಬರುತ್ತಿವೆ. ಈ ತಿಂಗಳಲ್ಲಿ ಬೀಳುವ ಹಂತದಲ್ಲಿದ್ದ 500 ಮರಗಳು ಮತ್ತು 1,000 ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಬಿ ಎಲ್ ಜಿ ಸ್ವಾಮಿ ಹೇಳಿದ್ದಾರೆ. ಒಮ್ಮೊಮ್ಮೆ ಮರಗಳನ್ನು ಕತ್ತರಿಸಲು ಮಳೆಯೂ ಅಡ್ಡಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರ ಕರೆಗಳ ಆಧಾರದಲ್ಲಿ ಏಪ್ರಿಲ್ ನಲ್ಲಿ ಅಪಾಯದಲ್ಲಿದ್ದು 80 ಹಳೆಯ ಮರಗಳು ಮತ್ತು 175 ಕೊಂಬೆಗಳನ್ನು ಕತ್ತರಿಸಲಾಗಿದೆ ಬಹುತೇಕ ಕರೆಗಳು ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯದಿಂದ ಬಂದಿವೆ. ರಸ್ತೆ ಅಥವಾ ಪೈಪ್ ಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿರುವದರಿಂದ 5-6 ವರ್ಷಗಳ ಮರಗಳೂ ಅಪಾಯ ಎದುರಿಸುತ್ತಿವೆ ಎಂದು ಪಾಲಿಕೆ ಹೇಳುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿರುವ ಮರಗಳು ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ. ಕತ್ತರಿಸಿದ ಮರ ಕೊಂಬೆಗಳನ್ನು mstcecommerce.com. ನಲ್ಲಿ ಆನ್ ಲೈನ್ ನಲ್ಲಿ ಹರಾಜು ಹಾಕಲಾಗುತ್ತಿದೆ. ಮಳೆಗಾಲದಲ್ಲಿ ಇಡೀ ಮರ ಬೀಳುವುದರಿಂದ ಈ ಕಾಲದಲ್ಲಿ ಹರಾಜು ಪ್ರಕಿಯೆ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ 15 ದಿನಗಳಿಗೊಮ್ಮೆ ಹರಾಜು ಹಾಕುತ್ತಿದ್ದೇವೆ. ಮಳೆಗಾಲ ಹೊರತುಪಡಿಸಿದರೆ 30-50 ಟನ್ ಸಂಗ್ರಹವಾಗುವವರೆಗೆ ಕಾದಿದ್ದು ಹರಾಜು ಹಾಕಲಾಗುತ್ತದೆ. ಹರಾಜು ಹಾಕಲಾದ ಮರಗಳನ್ನು ಸಂಸ್ಕರಿಸಿ ಕೈಗಾರಿಕೆಗಳಲ್ಲಿ ಹೊಗೆ ರಹಿತ ಇಂಧನವನ್ನಾಗಿ ಬಳಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಗಳಲ್ಲಿರುವ ಮರಗಳನ್ನು ತೋಟಗಾರಿಕಾ ಇಲಾಖೆ ನಿರ್ವಹಣೆ ಮಾಡುತ್ತದೆ. ಇತ್ತೀಚೆಗೆ ಲಾಲ್ ಭಾಗ್ ನಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಮರ ಉರುಳಿ ಬಿದ್ದಿದ್ದು ಹರಾಜು ಹಾಕಲಾಗಿತ್ತು. ಇದರ ಕೆಲವು ಭಾಗಗಳನ್ನು ಲಾಲ್ ಬಾಗ್ ನಲ್ಲಿಯೇ ಇರುವ ಓಪನ್ ಏರ್ ವುಡ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಮಹೋಗನಿ, ತೇಗ ಮಾವು, ನೀಲಗಿರಿಯ ಮರದ ದಿಮ್ಮಿಗಳು ಗುಣಮಟ್ಟ ಹೊಂದಿದ್ದರೆ ಕೆತ್ತನೆಗೆ ಬಳಸಲಾಗುತ್ತದೆ. ಈ ಸಂಗ್ರಹಾಲಯದಲ್ಲಿ ಕೊಂಬೆಗಳಲ್ಲಿ ಕೆತ್ತಲಾದ ಬುದ್ಧ, ಮೊಸಳೆ, ರೇಷ್ಮೆ ಹುಳದ ಜೀವನಚಕ್ರ, ನಗರದ ಸೌಂದರ್ಯವನ್ನು ಕೆತ್ತಲಾಗಿದೆ. ಕೆಲವು ವರ್ಷಗಳ ಹಿಂದೆ ಲಾಲ್ ಬಾಗ್ ನಲ್ಲಿ ಎರಡು ಬೃಹತ್ ಮರಗಳು ಉರುಳಿ ಬಿದ್ದಿದ್ದು, 49 ದಿಮ್ಮಿಗಳು ಲಭ್ಯವಾಗಿದ್ದವು. ಈ ಹಿನ್ನೆಲೆಯಲ್ಲಿ ಇಲ್ಲಿಯೇ ರಾಷ್ಟ್ರೀಯ ಕೆತ್ತನೆ ಕಾರ್ಯಾಗಾರ ನಡೆಸಿದ್ದು ದೇಶದ ವಿವಿಧ ಭಾಗಗಳ ಕಲಾವಿದರು ಭಾಗವಹಿಸಿದ್ದರು. ವಿಜ್ಞಾನಿಗಳ ನೆರವಿನಿಂದ ಈ ದಿಮ್ಮಿಗಳು ಸೀಳು ಬಿಡದಂತೆ ಮತ್ತು ಕೀಟಗಳು ಹಾಳು ಮಾಡದಂತೆ ರಕ್ಷಿಸಲಾಗಿದೆ ಎಂದು ಲಾಲ್ ಬಾಗ್ ನ ಜಂಟಿ ನಿರ್ದೇಶಕ ಜಗದೀಶ್ ಹೇಳುತ್ತಾರೆ.
ಕಬ್ಬನ್ ಪಾರ್ಕ್ ನಲ್ಲಿಯೂ ಮರದ ದಿಮ್ಮಿಗಳನ್ನು ಗುಣಮಟ್ಟದ ಆಧಾರದ ಮೇಲೆ ಹರಾಜು ಹಾಕಲಾಗುತ್ತದೆ. ಅರಣ್ಯ ಇಲಾಖೆಯಿಂದ ದರದ ಮಾಹಿತಿ ಪಡೆದುಕೊಂಡು ಪ್ರತಿ ಟನ್ ಲೆಕ್ಕದಲ್ಲಿ ಹರಾಜು ಹಾಕಲಾಗುತ್ತದೆ. ಸಣ್ಣ ಸಣ್ಣ ದಿಮ್ಮಿಗಳನ್ನು ಉರುವಲಾಗಿ, ಗಟ್ಟಿ ಮರವನ್ನು ಕಾರ್ಟನ್ ಬಾಕ್ಸ್ ಪ್ಯಾಕೇಜ್ ಮಾಡಲು ಪೂರೈಕೆಯಾಗುತ್ತದೆ. ಹಾಳಾಗಿರುವ, ಮುರಿದು ಬೀಳುವ ಮತ್ತು ಗಾಳಿಗೆ ಬೀಳುವ ಹಂತದಲ್ಲಿರುವ ಮರ ಅಥವಾ ಕೊಂಬೆಗಳು ಕಂಡು ಬಂದಲ್ಲಿ ಸಾರ್ವವಜನಿಕರು ಕೂಡಲೇ ಮಾಹಿತಿ ನೀಡುವಂತೆ ಬಿಬಿಎಂಪಿ ತಿಳಿಸಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)