ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ; ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಿದ್ದ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ; ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಿದ್ದ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮ

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ; ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಿದ್ದ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮ

ಮೆಜೆಸ್ಟಿಕ್‌ ಹಾಗೂ ಮಂತ್ರಿ ಮಾಲ್‌ಗೆ ಹತ್ತಿರವಿರುವ ಜಕ್ಕರಾಯನಕೆರೆ ಮೈದಾನದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. (ಆ ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಿದ್ದ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮ
ಬೆಂಗಳೂರು: ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಿದ್ದ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದ ಶ್ರೀರಾಂಪುದ ಜಕ್ಕರಾಯನಕೆರೆ ಮೈದಾನದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಡೀ ಬೆಂಗಳೂರಿನಲ್ಲಿ ಕ್ರಿಮಿನಲ್‌ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಲಾಗುತ್ತದೆ. ಬುಧವಾರ (ಜ.29) ಬೆಳಗ್ಗೆ 10.55ಕ್ಕೆ ಸಂಭವಿಸಿದ ಬೆಂಕಿ ದುರಂತದಲ್ಲಿ 130 ದ್ವಿಚಕ್ರ ವಾಹನಗಳು, 10 ಕಾರು ಮತ್ತು 10 ಆಟೋರಿಕ್ಷಾಗಳು ಸುಟ್ಟು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೈದಾನದ ಪಕ್ಕದಲ್ಲಿಯೇ ಜೆಡಿಎಸ್ ಕಚೇರಿ ಇದೆ. ಮೈದಾನವು ಮೆಜೆಸ್ಟಿಕ್‌ ಹಾಗೂ ಮಂತ್ರಿ ಮಾಲ್‌ಗೂ ಹತ್ತಿರವಿದೆ. ಬೆಂಕಿ ವೇಗವಾಗಿ ಹರಡಿದೆ. ಯಶವಂತಪುರ, ರಾಜಾಜಿನಗರ ಮತ್ತು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗಳ ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ಬೆಂಕಿಯನ್ನು ನಂದಿಸಲು ಶ್ರಮಿಸಿವೆ. ಶ್ರೀರಾಂಪುರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಪಕ್ಕದಲ್ಲೇ ಇದ್ದ ಒಣಹುಲ್ಲಿನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಊಹಿಸಲಾಗಿದೆ. ಯಾರೋ ಬೀಡಿ ಅಥವಾ ಸಿಗರೇಟ್‌ ಹತ್ತಿಸಿಕೊಂಡು ಬೆಂಕಿ ಕಡ್ಡಿ ಎಸೆದಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಊಹಿಸಿದ್ದಾರೆ.

ಈ ಮೈದಾನದಲ್ಲಿ 2016ರ ನಂತರ ಜಪ್ತಿ ಮಾಡಲಾದ 10 ಸಾವಿರಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿತ್ತು. ಬೆಂಗಳೂರಿನ ಎಲ್ಲ ಪೊಲೀಸ್‌ ಠಾಣೆಗಳೂ ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು ಈ ಪಾರ್ಕಿಂಗ್‌ ಸ್ಥಳಕ್ಕೆ ಕಳುಹಿಸುತ್ತವೆ. ಶತಮಾನದ ಹಿಂದೆ ಜಕ್ಕರಾಯನಕೆರೆ ಮೈದಾನವು ಕೆರೆ ಆಗಿತ್ತು. ಆದರೆ ಇದೀಗ ಕೆರೆ ಮಾಯವಾಗಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಸರ್ಕಾರದ ವಶದಲ್ಲಿರುವ ಭೂಮಿಯಲ್ಲಿ ಒಣಹುಲ್ಲಿನ ರಾಶಿಯೇ ಬಿದ್ದಿದೆ. ಒಟ್ಟಾರೆ ಮೈದಾನದ ನಿರ್ವಹಣೆ ಮಾಡುತ್ತಿಲ್ಲ ಎಂದು ಹೇಳಬಹುದು.

ಈ ಸ್ಥಳದಲ್ಲಿ ಕೆಲವು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ದಿನದ 24 ಗಂಟೆಯೂ ನಿಯೋಜಿಸಲಾಗಿರುತ್ತದೆ. ಬೆಂಕಿ ಹೊತ್ತಿಕೊಂಡು ಹೊಗೆಯಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಉದಾಸೀನ ಮಾಡಿದ್ದಲ್ಲಿ ಎಲ್ಲ 10 ಸಾವಿರ ವಾಹನಗಳೂ ಬೆಂಕಿಗೆ ಆಹುತಿಯಾಗುವ ಸಂಭವವಿತ್ತು. ಜತೆಗೆ ಅನೇಕ ವಾಹನಗಳ ಟ್ಯಾಂಕರ್‌ನಲ್ಲಿ ಇಂಧನವಿದ್ದು ಬೆಂಕಿ ವೇಗವಾಗಿ ಹರಡುವ ಸಾಧ್ಯತೆಗಳೂ ಇದ್ದವು ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

1981ರಲ್ಲಿ 92 ಮಂದಿ ಸಾವನ್ನಪ್ಪಿದ್ದರು

1981ರಲ್ಲಿ ಇದೇ ಮೈದಾನದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿತ್ತು. 1981ರ ಫೆಬ್ರುವರಿ 9ರಂದು ಇಲ್ಲಿ ನಡೆಯುತ್ತಿದ್ದ ವೀನಸ್‌ ಸರ್ಕಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ 92 ಮಂದಿ ಅಸು ನೀಗಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ 20 ಶಾಲಾ ಮಕ್ಕಳೂ ಸೇರಿದ್ದರು.

ಬಸ್‌ ಹತ್ತುವಾಗ ಬಸ್‌ ಚಕ್ರಕ್ಕೆ ಸಿಲುಕಿ ಯುವತಿ ದುರ್ಮರಣ

ಬಿಎಂಟಿಸಿ ಬಸ್ ಹತ್ತಲು ಪ್ರಯತ್ನ ಮಾಡುತ್ತಿರುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಯುವತಿ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಆಂಧ್ರಪ್ರದೇಶದ ಅನಂತಪುರ ನಿವಾಸಿ ಮೋನಿಕಾ(20) ಮೃತಪಟ್ಟ ಯುವತಿ. ನಗರದ ಕತ್ರಿಗುಪ್ಪೆಯಲ್ಲಿ ವಾಸಿಸುತ್ತಿದ್ದ ಮೋನಿಕಾ, ಬೊಮ್ಮನಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ದೇವೇಗೌಡ ಪೆಟ್ರೋಲ್‌ ಬಂಕ್ ಹತ್ತಿರದ ಚಿನ್ನಮ್ಮ ಜಂಕ್ಷನ್ ಸಮೀಪ ಮೋನಿಕಾ ಅವರು ಬಿಎಂಟಿಸಿ ಬಸ್ ಹತ್ತುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಅವರ ಮೇಲ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವರದಿ: ಎಚ್. ಮಾರುತಿ, ಬೆಂಗಳೂರು

Whats_app_banner