ಬೆಳ್ತಂಗಡಿಯಲ್ಲಿ ನಿದ್ದೆ ಮಾತ್ರೆ ಸೇವಿಸಿದ ತಾಯಿ ಸಾವು: ಮಗ ಶಿಕ್ಷಕ- ಚಿತ್ರಕಲಾವಿದ ಜಯರಾಮ್ ಸ್ಥಿತಿ ಗಂಭೀರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳ್ತಂಗಡಿಯಲ್ಲಿ ನಿದ್ದೆ ಮಾತ್ರೆ ಸೇವಿಸಿದ ತಾಯಿ ಸಾವು: ಮಗ ಶಿಕ್ಷಕ- ಚಿತ್ರಕಲಾವಿದ ಜಯರಾಮ್ ಸ್ಥಿತಿ ಗಂಭೀರ

ಬೆಳ್ತಂಗಡಿಯಲ್ಲಿ ನಿದ್ದೆ ಮಾತ್ರೆ ಸೇವಿಸಿದ ತಾಯಿ ಸಾವು: ಮಗ ಶಿಕ್ಷಕ- ಚಿತ್ರಕಲಾವಿದ ಜಯರಾಮ್ ಸ್ಥಿತಿ ಗಂಭೀರ

ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಳ್ತಂಗಡಿಯ ತಾಯಿ ಮಗ ಪೈಕಿ ತಾಯಿ ಮೃತಪಟ್ಟಿದ್ದು, ಮಗನ ಸ್ಥಿತಿ ಗಂಭೀರವಾಗಿದೆ.

ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಳ್ತಂಗಡಿಯ ತಾಯಿ ಮಗ
ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಳ್ತಂಗಡಿಯ ತಾಯಿ ಮಗ (canva)

ಮಂಗಳೂರು: ನಿದ್ದೆ ಮಾತ್ರೆ ಸೇವಿಸಿ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞಿರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ (96) ಮೃತಪಟ್ಟಿದ್ದರೆ, ಅವರ ಪುತ್ರ ಚಿತ್ರಕಲಾಶಿಕ್ಷಕ, ರಾಜ್ಯಮಟ್ಟದ ಕಲಾವಿದ ಜಯರಾಮ್ ಕೆ. ಅವರ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ಕಲ್ಯಾಣಿ ಅವರ ಅಂತ್ಯಸಂಸ್ಕಾರ ಮುಂಡಾಜೆಯ ರುದ್ರ ಭೂಮಿಯಲ್ಲಿ ನಡೆಯಿತು.

ಗಂಭೀರಾವಸ್ಥೆಯಲ್ಲಿರುವ ಅವರ ಪುತ್ರ ಚಿತ್ರಕಲಾ ಶಿಕ್ಷಕ, ರಾಜ್ಯ ಮಟ್ಟದ ಕಲಾವಿದ ಜಯರಾಂ ಕೆ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದ್ದು ವಿಷಮ ಸ್ಥಿತಿ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಯಿತು.

ಸಾವಿಗೆ ಕಾರಣವೇನು?

ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ತಾಯಿ ಮಗ ಇಬ್ಬರೂ ಕಳೆದ ಮೇ.9 ರಂದು ರಾತ್ರಿ ಕೂಳೂರು ಮನೆಯಲ್ಲಿ ಅತಿಯಾಗಿ ನಿದ್ದೆ ಮಾತ್ರೆ ಸೇವಿಸಿದ್ದರು. ಮೇ. 10 ರಂದು ಬೆಳಗ್ಗೆ ಜಯರಾಂ ಅವರ ಮನೆಯ ಬಳಿಯಿಂದ ಯಾವುದೇ ಶಬ್ದ ಕೇಳದೆ ಇದ್ದುದರಿಂದ ನೆರೆ ಹೊರೆಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಜೊತೆಯಾಗಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಊರವರು ಹಾಗೂ ಅಣ್ಣನ ಮಕ್ಕಳ ಸಹಕಾರದೊಂದಿಗೆ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿದ್ದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತ ಕಲ್ಯಾಣಿ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದು ಈ ಪೈಕಿ ಶ್ರೀಧರ ನಾಯರ್ ಮತ್ತು ರಾಜನ್ ನಾಯರ್ ಅವರು ಈಗಾಗಲೇ ಮೃತಪಟ್ಟಿದ್ದಾರೆ. ಇದೀಗ ಮೃತರು ಹಿರಿಯ ಪುತ್ರ ಶಶಿಧರ ನಾಯರ್ ಹಾಗೂ ಕಿರಿಯ ಪುತ್ರ ಜಯರಾಂ ಕೆ ಅವರನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ವರದಿ: ಹರೀಶ ಮಾಂಬಾಡಿ

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in