ಹೆತ್ತಮ್ಮನ ಆಸೆಯಂತೆ 100 ಅಡಿಯಷ್ಟು ಮನೆಯನ್ನೇ ಲಿಫ್ಟ್ ಮಾಡಿಸಲು ಮುಂದಾದ ಮಕ್ಕಳು; ಮಕ್ಕಳ ಕಾಳಜಿಗೆ ಹರಿದು ಬಂತು ಮೆಚ್ಚುಗೆಯ ಮಹಾಪೂರ
ಬೆಂಗಳೂರಿನಲ್ಲಿ ಕಟ್ಟಿದ ಮನೆಯನ್ನು ಕೆಡವದೇ ತಂತ್ರಜ್ಞಾನ ಬಳಸಿ 100 ಅಡಿ ಮೇಲಕ್ಕೆ ಎತ್ತುವ ಪ್ರಯತ್ನ ನಡೆದಿದೆ. ಇದರ ಹಿಂದೆ ಇರುವುದು ಅಮ್ಮನ ಪ್ರೀತಿಯ ಬೇಡಿಕೆ ಹಾಗೂ ಮಕ್ಕಳ ಈಡೇರಿಕೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಅಪ್ಪ, ಅಮ್ಮ ಕಟ್ಟಿದ್ದ ಹಳೆಯ ಕಾಲದ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿಮಾಣ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ದಶಕಗಳ ಹಿಂದೆ ಪೋಷಕರು ಬೆವರು ಸುರಿಸಿ ಕಟ್ಟಿದ ಮನೆ, ಅವರು ಬಾಳಿ ಬದುಕಿದ ಮನೆ ಎಂಬ ಸೆಂಟಿಮೆಂಟ್ ಗಳಿಗೆ ಆಧುನಿಕ ಕಾಲದಲ್ಲಿ ಅವಕಾಶವೇ ಇಲ್ಲ. ಎಲ್ಲರೂ ಕೈತುಂಬ ಸಂಬಳ ಎಣಿಸಿಕೊಳ್ಳುವ ಮಕ್ಕಳಿಗೆ ತಮ್ಮ ಅನುಕೂಲ ಮತ್ತು ಐಷಾರಾಮಿ ಮನೆ ಇರಬೇಕು ಎಂದು ಆಸೆ ಪಟ್ಟು ಹಳೆಯ ಕಾಲದ ಮನೆಯನ್ನು ಕೆಡವುದು ಸಹಜವಾಗಿದೆ. ಇದು ತಪ್ಪು ಎಂದು ಹೇಳಲೂ ಆಗುವುದಿಲ್ಲ. ಆದರೆ ಅಪರೂಪ ಎಂಬಂತೆ ಕೈತುಂಬಾ ಹಣವಿದ್ದರೂ ಮನೆಯನ್ನು ಕೆಡವದೆ ಅಮ್ಮನ ಕೋರಿಕೆಯಂತೆ ಹಳೆಯ ಮನೆಯನ್ನೇ ನೂರು ಅಡಿಗಳಷ್ಟು ಲಿಫ್ಟ್ ಮಾಡಿ ಮನೆಯನ್ನು ಉಳಿಸಿಕೊಳ್ಳಲು ಮಕ್ಕಲು ಮುಂದಾಗಿದ್ದಾರೆ.
ಬೆಂಗಳೂರಿನ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಇಎಂಎಲ್ ಲೇಔಟ್ ನಲ್ಲಿರುವ ಯಲ್ಲಪ್ಪ ಅವರ ಮನೆ ಮಳೆಗಾಲ ಬಂತೆಂದರೆ ಜಲಾವೃತವಾಗುತ್ತಿತ್ತು. ಮನೆಯೊಳಗೆ ಹರಿದು ಎರಡರಿಂದ ಮೂರು ಅಡಿಗಳಷ್ಟು ಕೊಳಚೆ ನೀರು ನಿಲ್ಲುತ್ತಿತ್ತು. ಆದ್ದರಿಂದ ಮಕ್ಕಳು ಈ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು. ಆದರೆ ತಾಯಿ ಯಲ್ಲಮ್ಮ, ನಾನು ನಿಮ್ಮ ಅಪ್ಪ ಹೊಟ್ಟೆಬಟ್ಟೆ ಕಟ್ಟಿ ಕಷ್ಟಪಟ್ಟು ಈ ಮನೆಯನ್ನು ನಿರ್ಮಾಣ ಮಾಡಿದ್ದೇವೆ. ಕಡವಿಹಾಕಬೇಡಿ ಎಂದು ನೋವು ತೊಡಿಕೊಂಡಿದ್ದಾರೆ. ಅಮ್ಮನ ಮಾತಿಗೆ ಬೆಲೆ ಕೊಟ್ಟ ಮಕ್ಕಳು ಮನೆಯನ್ನು ನೀರಿನಿಂದ ರಕ್ಷಿಸಿಕೊಳ್ಳಲು ಮನೆಯನ್ನು ಕೆಡವುದಕ್ಕೆ ಬದಲಾಗಿ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.
ಮನೆ ಶಿಫ್ಟ್ ಮಾಡಲಿರುವ ಬಿಹಾರ ಮೂಲದ ಕಂಪನಿ
ಮಳೆಗಾಲದಿಂದ ಮನೆಯನ್ನು ರಕ್ಷಿಸಿಕೊಳ್ಳಲು ಕನಿಷ್ಠ 100 ಅಡಿಗಳಷ್ಟು ಸ್ಥಳಾಂತರ ಮಾಡಬೇಕಿದೆ. ಈ ಕೆಲಸವನ್ನು ಬಿಹಾರ ಮೂಲದ ಶ್ರೀರಾಮ್ ಹೌಸ್ ಲಿಫ್ಟಿಂಗ್ ಅಂಡ್ ಶಿಫ್ಟಿಂಗ್ ಕಂಪನಿಗೆ ವಹಿಸಿದ್ದಾರೆ. ಆರಂಭದಲ್ಲಿ ಕಂಪನಿ ಇಂಜಿನಿಯರ್ ಗಳು ಆಗಮಿಸಿ ಪರಿಶೀಲಿಸಿ ಮನೆಯನ್ನು ನೂರು ಅಡಿಗಳಷ್ಟು ಹಿಂದಕ್ಕೆ ಸ್ಥಳಾಂತರ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ಶ್ರೀರಾಮ್ ಕಂಪನಿ ಈಗಾಗಲೇ ಬೇರೆ ಬೇರೆ ನಗರಗಳಲ್ಲಿ ಮನೆಗಳನ್ನು ಸ್ಥಳಾಂತರಿಸಿದ್ದು ಸಾಕಷ್ಟು ಪರಿಣಿತಿ ಹೊಂದಿದೆ. ಈ ಕಂಪನಿ ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಎರಡು ಅಂತಸ್ತಿನ ಮನೆಯನ್ನು ಲಿಫ್ಟ್ ಮಾಡಲು ಮುಂದಾಗಿದೆ.
ಮನೆ ಶಿಫ್ಟಿಂಗ್ ಹೇಗಿರುತ್ತದೆ?
ಇಡೀ ಮನೆಯನ್ನು ಸ್ಥಳಾಂತರಿಸಲು 200 ಕಬ್ಬಿಣದ ಜಾಕ್ ಮತ್ತು 100 ಕಬ್ಬಿಣದ ರೋಲರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ದಶಕಗಳ ಹಿಂದೆ ಕೇವಲ ರೂ. 13 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯ ಶಿಫ್ಟಿಂಗ್ ವೆಚ್ಚ 10 ಲಕ್ಷ ರೂಪಾಯಿ! ಇದೇ ಮನೆಯನ್ನು ಈಗ ಕಟ್ಟಲು ಏನಿಲ್ಲ ಎಂದರೂ ಅಂದಾಜು 70-80 ಲಕ್ಷ ರುಪಾಯಿ ಬೇಕೇಬೇಕು. ಸದ್ಯಕ್ಕೆ ಮನೆಯನ್ನು 15 ಅಡಿ ಹಿಂದಕ್ಕೆ ಲಿಫ್ಟ್ ಮಾಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ 85 ಅಡಿಗಳಷ್ಟು ಹಿಂದಕ್ಕೆ ಲಿಫ್ಟ್ ಮಾಡಲಾಗುತ್ತದೆ ಎಂದು ಶ್ರೀರಾಮ್ ಕಂಪನಿಯ ಇಂಜಿನಿಯರ್ ಗಳು ಹೇಳಿದ್ದಾರೆ.
ಮನೆಯನ್ನು ಕಷ್ಟಪಟ್ಟು ಕಟ್ಟಿಸಿದ್ದ ಶಾಂತಮ್ಮ ಪ್ರತಿಕ್ರಿಯಿಸಿದ್ದು, ಬೀದಿ ಬೀದಿಯಲ್ಲಿ ಸೊಪ್ಪು ಮಾರಾಟ ಮಾಡಿ ನಾನು ನನ್ನ ಪತಿ ಈ ಮನೆಯನ್ನು ಕಟ್ಟಿಸಿದ್ದೇವೆ. ಆದರೆ ಮಳೆಗಾಲದಲ್ಲಿ ನೀರಿನಿಂದ ತುಂಬಿಕೊಳ್ಳುತ್ತಿತ್ತು.ಹಾಗಾಗಿ ಮಕ್ಕಳು ಕೆಡವಿ ಹೊಸ ಮನೆ ಕಟ್ಟುವುದಕ್ಕೆ ಮುಂದಾಗಿದ್ದರು. ಮನೆಯೊಂದಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಉಳಿಸಿಕೊಳ್ಳುವಂತೆ ಕೋರಿದ್ದೆ. ನನ್ನ ಆಸೆಯಂತೆ ಮನೆಯನ್ನು ಉಳಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ವರದಿ: ಎಚ್. ಮಾರುತಿ,ಬೆಂಗಳೂರು
