ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಸ್ವಪಕ್ಷದ ವಿರುದ್ಧವೇ ಸಿಡಿಯುತ್ತಿದ್ದ ಮಾಜಿ ಸಚಿವ ಸೈಲೆಂಟ್
MP Renukacharya: ತಮ್ಮ ಪಕ್ಷದ ರಾಜ್ಯಧ್ಯಕ್ಷರನ್ನ ಬದಲಾಯಿಸಬೇಕು, ನಮ್ಮ ಪಕ್ಷದ ನಾಯಕರ ನಡವಳಿಕೆಯಿಂದಲೇ ರಾಜ್ಯದಲ್ಲಿ ಬಿಜೆಪಿ ಸೋಲುವಂತಾಯಿತು, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪರನ್ನ ಕಡೆಗಣಿಸಿದ್ದೆ ಪಕ್ಷಕ್ಕೆ ಮುಳುವಾಯಿತು ಎನ್ನುತ್ತಿದ್ದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಈಗ ತಣ್ಣಗಾಗಿದ್ದಾರೆ. ಇದಕ್ಕೆ ಕಾರಣ ಬಿವೈ ವಿಜಯೇಂದ್ರ..

ದಾವಣಗೆರೆ: ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಸೋತ ಬೇಸರದಲ್ಲಿ ಸ್ವಪಕ್ಷದ ವಿರುದ್ದ ಮಾಜಿ ಸಚಿವರು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದೇ ಹಾಕಿದ್ದು. ರಾಜಕೀಯ ಗುರು ಬಿಎಸ್ ಯಡಿಯೂರಪ್ಪ ಪರ ಬ್ಯಾಟ್ ಬೀಸುತ್ತ ಹೆಸರು ಹೇಳದೆ ನಿತ್ಯ ಒಬ್ಬೊಬ್ಬರ ಮೇಲೆ ಮುಗಿ ಬೀಳುತ್ತಿದ್ದರು. ಮುಖ್ಯವಾಗಿ ಇವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸಾಧ್ಯತೆ ಕೂಡ ಇತ್ತು. ಆದರೆ, ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದೆ ತಡ ಇವರ ಆಕ್ರೋಶ ತಣ್ಣಗಾಗಿದೆ. ಮಾಜಿ ಸಚಿವರು ಕೂಡ ಶಾಂತವಾಗಿದ್ದಾರೆ.
ತಮ್ಮ ಪಕ್ಷದ ರಾಜ್ಯಧ್ಯಕ್ಷರನ್ನ ಬದಲಾಯಿಸಬೇಕು, ನಮ್ಮ ಪಕ್ಷದ ನಾಯಕರ ನಡವಳಿಕೆಯಿಂದಲೇ ರಾಜ್ಯದಲ್ಲಿ ಬಿಜೆಪಿ ಸೋಲುವಂತಾಯಿತು, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪರನ್ನ ಕಡೆಗಣಿಸಿದ್ದೆ ಪಕ್ಷಕ್ಕೆ ಮುಳುವಾಯಿತು, 15 ದಿನಗಳ ಹಿಂದ ಹೀಗೆ ನಿತ್ಯ ತಮ್ಮ ಪಕ್ಷದ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡುತ್ತಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಈಗ ತಣ್ಣಗಾಗಿದ್ದಾರೆ.
ಈಗೇನಿದ್ದರೂ ಪಕ್ಷ ಸಂಘಟನೆ ಮಾಡುವುದು, ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವುದು ಸೇರಿದಂತೆ ರಾಜಕೀಯ ಚಟುವಟಿಕೆಗಳನ್ನ ಫುಲ್ ಬಿಜಿಯಾಗಿದ್ದಾರೆ. ಮಾತ್ರವಲ್ಲ ಬಿಜೆಪಿ ನಾಯಕರ ಮೇಲಿದ್ದ ಆಕ್ರೋಶ ಕೂಡ ಕಡಿಮೆಯಾಗಿದೆ. ಕಾರಣ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿಎಸ್ವೈ ಪುತ್ರ ಹಾಗೂ ಶಾಸಕ ಬಿ ವೈ ವಿಜಯೇಂದ್ರ ನೇಮಕ ಆಗಿರುವುದು.
ಹೌದು, ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲನ್ನ ಅನುಭವಿಸಿರುವ ರೇಣುಕಾಚಾರ್ಯ ಪಕ್ಷದ ವಿರುದ್ದವೇ ತಿರುಗಿಬಿದ್ದಿದ್ದರು. ಅದರಲ್ಲೂ ಯಡಿಯೂರಪ್ಪ ಜೊತೆ ಬಿಜೆಪಿ ವರಿಷ್ಠರು ಹಾಗೂ ರಾಜ್ಯ ನಾಯಕರು ನಡೆದುಕೊಳ್ಳುವ ರೀತಿ ರೇಣುಕಾಚಾರ್ಯಗೆ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಮುಖ್ಯವಾಗಿ ಯಡಿಯೂರಪ್ಪರ ದತ್ತು ಪುತ್ರನಂತಿರುವ ರೇಣುಕಾಚಾರ್ಯಗೆ ಬಿಎಸ್ ವೈ ಅವರೇ ಆಧಾರ. ಹೀಗಾಗಿ , ಅವರಿಗೇ ಈ ರೀತಿ ಆದರೆ, ಮುಂದೆ ನಮ್ಮ ಭವಿಷ್ಯವೇನು ಎಂಬ ಚಿಂತೆಯಲ್ಲಿ ಪಕ್ಷದ ನಾಯಕರ ವಿರುದ್ದ ಗುಟುರು ಹಾಕುತ್ತಿದ್ದರು. ತಮ್ಮನ್ನ ಯಾವುದಕ್ಕೂ ಕರೆಯುವುದಿಲ್ಲ, ನಮ್ಮ ಅಭಿಪ್ರಾಯವನ್ನೇ ಕೇಳುವುದಿಲ್ಲ, ಪಕ್ಷದಲ್ಲಿ ಒಂದು ಗುಂಪಿನವರ ಮಾತೇ ನಡೆಯುತ್ತಿದೆ ಎಂದು ಪಕ್ಷದ ವಿರುದ್ಧ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದರು.
ಬದಲಾದ ಬೆಳವಣಿಗೆಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ರೇಣುಕಾಚಾರ್ಯಗೆ ಮತ್ತೆ ಜೀವಕಳೆ ಬಂದಂತಾಗಿದೆ. ಕಾಂಗ್ರೆಸ್ ಸೇರುವ ಬಯಕೆಯಲ್ಲಿದ್ದ ರೇಣುಕಾಚಾರ್ಯಗೆ ಈಗ ಮತ್ತೆ ಬಿಜೆಪಿಯೇ ನೆಚ್ಚಿನ ಮನೆಯಾಗಿದೆ. ಹೀಗಾಗಿ, ಇದೀಗ ಮತ್ತೆ ರೇಣುಕಾಚಾರ್ಯ ತಮ್ಮ ಹಳೇ ಗತ್ತನ್ನ ಮುಂದುವರಿಸಿದ್ದಾರೆ. ಗುರುವಾರ ತನ್ನ ಕ್ಷೇತ್ರ ಸವಳಂಗಕ್ಕೆ ವಿಜಯೇಂದ್ರ ಆಗಮಿಸಿದ್ದು, ಅವರಿಗೆ ಅದ್ಧೂರಿಯಾದ ಸ್ವಾಗತವನ್ನ ಕೋರಲಾಯಿತು. ಜೆಸಿಬಿಗಳಿಂದ ಬೃಹತ್ ಹಾರಗಳನ್ನ ಹಾಕಿ ಪುಷ್ಪವೃಷ್ಟಿಗೈಯ್ಯುವ ಮೂಲಕ ಸಂಭ್ರಮಾಚರಣೆಯನ್ನು ಮಾಡಲಾಗಿದೆ. ಇದೇ ಖುಷಿಯಲ್ಲಿರುವ ರೇಣುಕಾಚಾರ್ಯ ಈ ಬಾರಿಯ ಲೋಕಸಭೆ ಚುನಾವಣೆಯನ್ನ 28 ಕ್ಷೇತ್ರದಲ್ಲಿ ಗೆಲ್ಲಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ಕಾರ್ಯಕರ್ತರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದವನ್ನ ಹೇಳಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಎಲ್ಲರನ್ನ ಕಂಗೆಡಿಸಿದ್ದು, ಕಬ್ಬು ಬೆಳೆಗಾರರ ಕೂಗನ್ನ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿಯೂ ಸರ್ಕಾರ ನಿರ್ಲಕ್ಷ್ಯ ಭಾವನೆ ತೋರಿದೆ. ಇದೆಲ್ಲ ವಿಷಯಗಳನ್ನ ಇಟ್ಟುಕೊಂಡು ಬೆಳಗಾವಿ ಅಧಿವೇಶನದಲ್ಲಿ ಎಲ್ಲ ವಿಚಾರಗಳನ್ನ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಸೊಕ್ಕು ಮುರಿಯುವ ಕೆಲಸವನ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಕಂಡ ಕಂಡದಲ್ಲಿ ಪಕ್ಷದ ವಿರುದ್ದ ಗುಟುರು ಹಾಕುತ್ತಿದ್ದ ರೇಣುಕಾಚಾರ್ಯ ಸದ್ಯಕ್ಕೆ ಶಾಂತವಾಗಿದ್ದಾರೆ. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು, ಟಾನಿಕ್ ನೀಡಿದಂತಾಗಿದ್ದು, ಲೋಕಸಭೆ ಚುನಾವಣೆ ಗೆಲ್ಲುವ ಜೋಶ್ ಕೂಡ ಹೆಚ್ಚಾಗಿದೆ.
ವರದಿ: ಅದಿತಿ, ದಾವಣಗೆರೆ
