ಮುಡಾ ಪ್ರಕರಣ: ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ವಿಚಾರಣೆ; ಪೊಲೀಸರಿಂದ ಭದ್ರತೆ
ಬುಧವಾರ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಲಿರುವ ಸಿದ್ದರಾಮಯ್ಯ ಅವರು ಬೆಳಗ್ಗೆ 9:30ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿ ಮುಡಾ ಪ್ರಕರಣದ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿ ಬಳಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ನವೆಂಬರ್ 6 ಬುಧವಾರ) ಮೈಸೂರು ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಲಿದ್ದಾರೆ. ಹಳೆಯ ಪ್ರವಾಸದ ಪಟ್ಟಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಚನ್ನಪಟ್ಟಣದ ಪ್ರವಾಸದ ವಿವರ ಮಾತ್ರ ಇತ್ತು. ಇದೀಗ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೊದಲು ಮೈಸೂರಿಗೆ ಆಗಮಿಸಿ ವಿಚಾರಣೆಯಲ್ಲಿ ಭಾಗಿಯಾಗಿ ನಂತರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ನಾಳೆ ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಲಿರುವ ಸಿದ್ದರಾಮಯ್ಯ ಅವರು ಬೆಳಗ್ಗೆ 7:30ಕ್ಕೆ ಬೆಂಗಳೂರಿನಿಂದ ಹೊರಟು 9:30ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ನಂತರ ಮೈಸೂರು ಲೋಕಾಯುಕ್ತ ಕಚೇರಿಗೆ ತೆರಳಿ ಮುಡಾ ಪ್ರಕರಣದ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ವಿಚಾರಣೆಗಾಗಿ ಎರಡೂವರೆ ತಾಸು ಮೀಸಲಿಡಲಾಗಿದೆ. ಮೈಸೂರು ಲೋಕಾಯುಕ್ತ ಎಸ್‌ಪಿ ಟಿ ಜೆ ಉದೇಶ್ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ವಿಚಾರಣೆ ನಡೆಯಲಿದೆ. ಮುಖ್ಯಮಂತ್ರಿಗಳಿಗೆ ಕೇಳಲು ಲೋಕಾಯುಕ್ತ ಪೊಲೀಸರು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ವಿಚಾರಣೆ ಮುಗಿದ ಬಳಿಕ ಮಧ್ಯಾಹ್ನ 12ಕ್ಕೆ ಮೈಸೂರಿನಿಂದ ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಆಗಮಿಸಲಿದ್ದಾರೆ.
ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಗೆ ಪೊಲೀಸ್ ಕಮಿಷನರ್ ಸೀಮಾಲಾಟ್ಕರ್ ಭೇಟಿ ನೀಡಿದ್ದಾರೆ. ಕಚೇರಿ ಬಳಿ ಭದ್ರತೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಕಮಿಷನರ್ ಸೀಮಾಲಾಟ್ಕರ್‌ಗೆ ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಸೇರಿದಂತೆ ಎಸಿಪಿಗಳು ಸಾಥ್ ನೀಡಿದ್ದಾರೆ. ದೇವರಾಜ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ನಾಳಿನ ಬಂದೋಬಸ್ತ್‌ಗಾಗಿ ಪೊಲೀಸ್ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಪೊಲೀಸರಿಂದ ಬಂದೋಬಸ್ತ್
ನಾಳೆ ಸಿಎಂ ವಿಚಾರಣೆ ಇರುವ ಕಾರಣದಿಂದ, ಮಂಗಳವಾರ ಕಚೇರಿಯ ಅವಧಿ ಮುಗಿದರೂ ಲೋಕಾಯುಕ್ತ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಲೋಕಾಯುಕ್ತ ಕಚೇರಿ ಬಳಿ ಪೊಲೀಸರು ಹೆಚ್ಚಿನ ಬಂದೋಬಸ್ತ್ ಮಾಡುತ್ತಿದ್ದಾರೆ. ಲೋಕಾಯುಕ್ತ ಕಚೇರಿ ಸಂಪರ್ಕಿಸುವ ರಸ್ತೆಗಳ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಆಗಮಿಸಿದ ವೇಳೆ ಲೋಕಾಯುಕ್ತ ಕಚೇರಿ ಬಳಿಯ ನಾಲ್ಕು ರಸ್ತೆಗಳನ್ನು ಪೊಲೀಸರು ಬಂದ್ ಮಾಡಲಿದ್ದಾರೆ.