ಮುಡಾಗೆ ಸೈಟ್ ಮರಳಿಸುವ ವಿಚಾರ; ಪ್ರಾಧಿಕಾರದ ಆಯುಕ್ತ ಹೇಳಿದ್ದೇನು? ತನಿಖೆ ಆಗ್ಲೇಬೇಕು ಎಂದ ಪ್ರತಾಪ್ ಸಿಂಹ-muda commissioner raghunandan on siddaramaiah wife parvati 14 sites return letter pratap singh lashed out at cm prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾಗೆ ಸೈಟ್ ಮರಳಿಸುವ ವಿಚಾರ; ಪ್ರಾಧಿಕಾರದ ಆಯುಕ್ತ ಹೇಳಿದ್ದೇನು? ತನಿಖೆ ಆಗ್ಲೇಬೇಕು ಎಂದ ಪ್ರತಾಪ್ ಸಿಂಹ

ಮುಡಾಗೆ ಸೈಟ್ ಮರಳಿಸುವ ವಿಚಾರ; ಪ್ರಾಧಿಕಾರದ ಆಯುಕ್ತ ಹೇಳಿದ್ದೇನು? ತನಿಖೆ ಆಗ್ಲೇಬೇಕು ಎಂದ ಪ್ರತಾಪ್ ಸಿಂಹ

Muda Land Scam: ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ನಿವೇಶನ ವಾಪಸ್ ನೀಡುವ ಪತ್ರವನ್ನು ಮುಡಾ ಆಯುಕ್ತರಿಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಲುಪಿಸಿದ್ದಾರೆ. ಈ ಬಗ್ಗೆ ಆಯುಕ್ತ ರಘುನಂದನ್ ಪ್ರತಿಕ್ರಿಯಿಸಿದ್ದಾರೆ.

ಮುಡಾಗೆ ಸೈಟ್ ಮರಳಿಸುವ ವಿಚಾರ; ಪ್ರಾಧಿಕಾರದ ಆಯುಕ್ತ ಹೇಳಿದ್ದೇನು? ಸಿಎಂ ವಿರುದ್ಧ ಪ್ರತಾಪ್ ಸಿಂಹ ಗುಡುಗಿದ್ದೇಕೆ?
ಮುಡಾಗೆ ಸೈಟ್ ಮರಳಿಸುವ ವಿಚಾರ; ಪ್ರಾಧಿಕಾರದ ಆಯುಕ್ತ ಹೇಳಿದ್ದೇನು? ಸಿಎಂ ವಿರುದ್ಧ ಪ್ರತಾಪ್ ಸಿಂಹ ಗುಡುಗಿದ್ದೇಕೆ?

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲಾದ ಬದಲಿ 14 ಸೈಟ್ ಹಿಂದಿರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಬರೆದಿರುವ ಪತ್ರವನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಮುಡಾ ಆಯುಕ್ತರಿಗೆ ತಲುಪಿಸಿದ್ದಾರೆ. ಇಂದು ಬೆಳಿಗ್ಗೆ ಮುಡಾ ಕಚೇರಿಗೆ ಭೇಟಿ ನೀಡಿದ್ದ ಯತೀಂದ್ರ ಅವರು 14 ಸೈಟ್​ಗಳನ್ನು ಮರಳಿಸುವ ಬಗ್ಗೆ ಬರೆದಿದ್ದ ಪತ್ರವನ್ನು ನೀಡಿದ್ದಾರೆ. ಈ ಕುರಿತು ಪ್ರಾಧಿಕಾರದ ಆಯುಕ್ತ ರಘುನಂದನ್ ಪ್ರತಿಕ್ರಿಯಿಸಿದ್ದು, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ರಘುನಂದನ್, ನಿವೇಶನ ಹಿಂತಿರುಗಿಸಿದರೆ ವಾಪಸ್ ತೆಗೆದುಕೊಳ್ಳಬಹುದಾ, ಇಲ್ಲವೇ ಎನ್ನುವ ಮಾಹಿತಿ ತಿಳಿದುಕೊಳ್ಳಲಾಗುವುದು. ಪಾರ್ವತಿ ಅವರು ಸ್ವಇಚ್ಚೆಯಿಂದ 14 ಸೈಟ್​ಗಳನ್ನು ವಾಪಸ್ ನೀಡುವ ಪತ್ರ ಇದಾಗಿದೆ. ಬೇರೆ ವಿಚಾರ ಏನಿಲ್ಲ. ಕಾನೂನು ಕಾರ್ಯವಿಧಾನ ಹೇಗಿದೆ ಎಂಬುದನ್ನು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಾನು ಆಯುಕ್ತನಾಗಿ ನೇಮಕಗೊಂಡೇ ಕೇವಲ 2 ತಿಂಗಳಾಗಿದೆ. ಹಿಂದೆಯೂ ಎಲ್ಲೂ ಆಯುಕ್ತನಾಗಿರಲಿಲ್ಲ. ಸಹಕಾರ ನೀಡುವಂತೆ ಲೋಕಾಯುಕ್ತರು ಕೇಳಿದ್ದಾರೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವೆ ಎಂದಿದ್ದಾರೆ.

ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ

ಸಿಎಂ ಪತ್ನಿ ಮುಡಾಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಎರಡೂವರೆ ತಿಂಗಳ ಹಿಂದೆಯೇ ನಾನು ಸಿದ್ದರಾಮಯ್ಯ ಅವರಿಗೆ ನಿಮಗೆ ಬಂದಿರುವ ಅಕ್ರಮ ಸೈಟ್ ವಾಪಸ್ ಕೊಟ್ಟು ಬಿಡಿ ಎಂದು ಹೇಳಿದ್ದೆ. ಇಷ್ಟು ವರ್ಷದ ರಾಜಕೀಯ ಜೀವನವನ್ನು 14 ಸೈಟ್ ನುಂಗಬಾರದು ಎಂದು ಅವತ್ತೇ ಹೇಳಿದ್ದೆ. ಮೊದಲೇ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಸಿಎಂ ಕುರ್ಚಿಯೂ ಅಲುಗಾಡುತ್ತಿರಲಿಲ್ಲ ಹೊಗಳು ಭಟ್ಟರು, ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡಿರುವ ಪರಿಣಾಮ ಸಿಎಂ ಗೆ ಈ ಸ್ಥಿತಿ ಬಂತು ಎಂದಿದ್ದಾರೆ.

ಅಧಿಕಾರದಲ್ಲಿ ಇದ್ದಾಗ ಕುಟುಂಬವನ್ನು ಹತ್ತಿರವಿಟ್ಟುಕೊಂಡರೆ, ಮಕ್ಕಳ ಬೆಳೆಸಲು ಮುಂದಾದರೆ ಅದೇ ಕುಟುಂಬ ನಿಮ್ಮ ಹೆಸರಿಗೆ ಕಳಂಕ ತರುತ್ತದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ಒಡವೆ ಕದ್ದ ಕಳ್ಳ, ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲಾ ಅಲ್ವಾ? ಸಿಎಂ ತಮ್ಮ ಸೈಟ್​ಗೆ 64 ಕೋಟಿ ರೂಪಾಯಿ ಕೇಳಿದ ದಿನವೇ ಸಿಎಂ ಮೇಲಿನ ಗೌರವ, ವಿಶ್ವಾಸವೆಲ್ಲ ನೆಲ ಕಚ್ಚಿತು. ಈಗ ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟರು ಅಷ್ಟೇ, ಕೊಡದಿದ್ದರೂ ಅಷ್ಟೇ. ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ ಪ್ರತಾಪ್ ಸಿಂಹ.

ವರುಣ ಚುನಾವಣೆ ಸಂದರ್ಭದಲ್ಲೇ ನನಗೆ ಈ ಸೈಟ್ ದಾಖಲಾತಿ ಬಂದಿತ್ತು. ಸಿಎಂ ಪತ್ನಿ ಹೆಸರಿದೆ, ವೈಯುಕ್ತಿಕ ದಾಳಿ ಬೇಡ ಅಂತಾ ಸುಮ್ಮನಾದೆ. ರಾಜಕಾರಣಿಗಳೇ ನಿಮ್ಮ ಹೆಂಡತಿ, ಮಕ್ಕಳನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ. ಈ ಹಿಂದೆ ಸಿಎಂ ಆಗಿದ್ದವರು ಜೈಲಿಗೆ ಹೋಗಿದ್ದು ಕೂಡ ಅವರ ಕುಟುಂಬದ, ಮಕ್ಕಳ ಕಾರಣಕ್ಕಾಗಿ ಎಂಬುದು ನೆನಪಿರಲಿ. ಈಗ ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ವರ್ಕ್ ಆಗೋದಿಲ್ಲ. ಪಾರ್ವತಮ್ಮ ಅವರಿಗೆ ತಮ್ಮ ಪತಿಯ ತಪ್ಪಸ್ಸಿನ ರೀತಿಯ ರಾಜಕಾರಣಕ್ಕಿಂತ, ಸೈಟ್ ಮುಖ್ಯವಾಗಿ ಇಷ್ಟು ದಿನ ಹಠ ಹಿಡಿದು ಕೂತಿದ್ದೆ ಬಹುದೊಡ್ಡ ತಪ್ಪು. ಸೈಟ್ ವಾಪಸ್ ಕೊಡುವುದಾಗಿದ್ದರೆ, ಹೈಕೋರ್ಟ್​ನಲ್ಲಿ ಫೈಟ್ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ನೀವು ಯಾಕೆ ಕರ್ನಾಟಕದಲ್ಲಿದ್ದೀರಾ?

ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ಜಟಾಪಟಿ ವಿಚಾರಕ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ರಾಜಕಾರಣಿಗಳಿಗಿಂತ ಅಧಿಕಾರಿಗಳೇ ಹೆಚ್ಚು ಭ್ರಷ್ಟರು. ಚಂದ್ರಶೇಖರ್ ಬಗ್ಗೆ ಕುಮಾರಸ್ವಾಮಿ ಅವರ ಬಳಿ ದಾಖಲೆ ಇರಬಹುದು. ಅದಕ್ಕೆ ಆರೋಪ ಮಾಡಿದ್ದಾರೆ. ಅಧಿಕಾರಿ ಚಂದ್ರಶೇಖರ್ ಸತ್ಯಸಂಧನಾಗಿದ್ದರೆ, ಕುಮಾರಸ್ವಾಮಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ. ಚಂದ್ರಶೇಖರ್ ಕರ್ನಾಟಕ ಕೇಡರ್ ಅಧಿಕಾರಿ ಅಲ್ಲ. ಹಿಮಾಚಲಪ್ರದೇಶದ ಕೇಡರ್ ಅಧಿಕಾರಿ. ನೀವು ಯಾಕೆ ಕರ್ನಾಟಕದಲ್ಲಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಚಂದ್ರಶೇಖರ್ ನೀವು ಈ ಕೂಡಲೇ ರಾಜ್ಯದಿಂದ ತೊಲಗಿ, ಗೆಟ್ ಲಾಸ್ಟ್. ಸಿಎಂ ಹಾಗೂ ಡಿಸಿಎಂ ಗೆ ಯಾವುದೇ ಅಧಿಕಾರಿ ಹಂದಿ ಎಂದು ಕರೆದಿದ್ದರೆ ಸುಮ್ಮನೆ ಇರುತ್ತಿದ್ದರಾ? ಚಂದ್ರಶೇಖರ್ ಮೊದಲು ಸಂಸ್ಪೆಡ್ ಆಗಬೇಕು. ಕನ್ನಡಿಗ ಕುಮಾರಸ್ವಾಮಿ ಮೇಲೆ ಏನೇನೋ ಮಾತಾಡಿದರೆ ಸುಮ್ಮನೆ ಬಿಡಲ್ಲ. ಮಿಸ್ಟರ್ ಚಂದ್ರಶೇಖರ್, ಭಾಷೆ ಮೇಲೆ ಹಿಡಿತ ಇರಲಿ. ಹಂದಿಗಳು ಬೇಕಿದ್ರೆ ಆಂಧ್ರಕ್ಕೆ ಹೋಗಿ, ಅಲ್ಲೇ ಜಾಸ್ತಿ ಹಂದಿಗಳು ಇರೋದು. ಚಂದ್ರಶೇಖರ್ ನಿಮ್ಮ ಉದ್ದಟತನ ನಮ್ಮ‌ ಬಳಿ ನಡೆಯೋಲ್ಲ‌, ಎಚ್ಚರಿಕೆ ಇರಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

mysore-dasara_Entry_Point