ಮುಡಾದಲ್ಲಿ ಬಹುಕೋಟಿ ಹಗರಣ ಆರೋಪ ಪ್ರಕರಣ; ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾದಲ್ಲಿ ಬಹುಕೋಟಿ ಹಗರಣ ಆರೋಪ ಪ್ರಕರಣ; ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರಣೆ

ಮುಡಾದಲ್ಲಿ ಬಹುಕೋಟಿ ಹಗರಣ ಆರೋಪ ಪ್ರಕರಣ; ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿಚಾರಣೆ

ಮುಡಾ ಬಹುಕೋಟಿ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಚಾರಣೆಗಾಗಿ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಾರೆ. ಮುಡಾ ಪ್ರಕರಣ ಸಂಬಂಧ ನವೆಂಬರ್ 6ರ ಗುರುವಾರದ ಅಪ್ಡೇಟ್ ಇಲ್ಲಿದೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ವಿಚಾರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನವೆಂಬರ್ 6, ಗುರುವಾರ) ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಾರೆ. 50-50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎ1 ಆರೋಪಿಯಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಅನ್ವಯ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಒಟ್ಟು 4 ಆರೋಪಿಗಳನ್ನು ಹೆಸರಿಸಲಾಗಿದೆ. ಎ1 ಆರೋಪಿ ಸಿಎಂ ಸಿದ್ದರಾಮಯ್ಯ, ಎ2 ಆರೋಪಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಎ3 ಆರೋಪಿ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎ4 ಆರೋಪಿಯಾಗಿ ಭೂ ಮಾಲೀಕ ದೇವರಾಜು ಅವರನ್ನು ಹೆಸರಿಸಲಾಗಿತ್ತು. ವಿಚಾರಣೆಗಾಗಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮೈಸೂರಿಗೆ ಆಗಮಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಟಿಜೆ ಉದೇಶ್ ಅವರು ಈ ವರೆಗೆ ಸಿದ್ದರಾಮಯ್ಯ ಪತ್ನಿ ಸೇರಿದಂತೆ ಪ್ರಕರಣದ ಇತರ ಆರೋಪಿಗಳ ವಿಚಾರಣೆಯನ್ನು ಮುಗಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ವಿಚಾರಣೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಕಚೇರಿ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಲೋಕಾಯುಕ್ತ ಕಚೇರಿ ಸುತ್ತಮುತ್ತ ಹಾಗೂ ಕಚೇರಿ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಭದ್ರತೆಗಾಗಿ ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳನ್ನು ಬಳಸಲಾಗಿದೆ. ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಖುದ್ದು ಭದ್ರತೆ ಜವಾಬ್ದಾರಿಯನ್ನು ವಹಿಸಿದ್ದಾರೆ.

ಬಿಜೆಪಿಯಿಂದ ಗೋ ಬ್ಯಾಕ್ ಚಳವಳಿ

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸುತ್ತಿದ್ದರೆ ಮತ್ತೊಂದೆಡೆ ಬಿಜೆಪಿಯವರು ಗೋ ಬ್ಯಾಕ್ ಸಿಎಂ ಚಳುವಳಿ ನಡೆಸಿದ್ದಾರೆ. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ನಾಯಕರ ಪ್ರತಿಭಟನೆಗೆ ಪೊಲೀಸರು ತಡೆಯೊಡ್ಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ದ ಬಿಜೆಪಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

Whats_app_banner