ಮುಡಾ ಹಗರಣಕ್ಕೆ ಸಂಬಂಧಿಸಿ ಮೈಸೂರು, ಬೆಂಗಳೂರು, ಮಂಡ್ಯ ಸೇರಿ ವಿವಿಧೆಡೆ ಇಡಿ ಅಧಿಕಾರಿಗಳ ದಾಳಿ; ಕಡತ ಪರಿಶೀಲನೆ, ಸಾಕ್ಷ್ಯ ಸಂಗ್ರಹ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮಕ್ಕೆ ಸಂಬಂಧಿಸಿಮೈಸೂರು, ಬೆಂಗಳೂರು, ಮಂಡ್ಯ ಸೇರಿ ವಿವಿಧೆಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಮತ್ತೆ ದಾಳಿ ನಡೆಸಿದರು. ವಿವಿಧೆಡೆ ಕಡತ ಶೋಧ, ಪರಿಶೀಲನೆ ಮತ್ತು ಸಾಕ್ಷ್ಯ ಸಂಗ್ರಹ ಕೆಲಸ ಮಾಡಿದ್ದಾರೆ.
ಮೈಸೂರು/ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದ ಅಧಿಕಾರಿಗಳ ತಂಡ ಬೆಂಗಳೂರು, ಮಂಡ್ಯ, ಮೈಸೂರುಗಳಲ್ಲಿ ಇಂದು (ಅಕ್ಟೋಬರ್ 28) ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಕಡತ ಪರಿಶೀಲನೆ, ಸಾಕ್ಷ್ಯ ಸಂಗ್ರಹದ ಕಾರ್ಯಾಚರಣೆ ನಡೆಸಿತು. ದಾಳಿ ಮುಂದುವರಿದಿದ್ದು, ಕಡತ ಪರಿಶೀಲನೆ ಪ್ರಗತಿಯಲ್ಲಿದೆ. ಮೈಸೂರಿನಲ್ಲಿ ಬಿಲ್ಡರ್ ಮಂಜುನಾಥ್ ಮನೆ, ಕಚೇರಿ ಮೇಲೆ ಕೂಡ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಏತನ್ಮಧ್ಯೆ, ಹಗರಣವನ್ನು ಬಯಲಿಗೆಳೆದ ಮೈಸೂರು ಮೂಲದ ಆರ್‌ಟಿಐ ಕಾರ್ಯಕರ್ತ ಎನ್ ಗಂಗರಾಜು ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದ್ದು, ಬೆಂಗಳೂರಿನಲ್ಲಿರುವ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಅವರ ಬಳಿ ಇರುವ ಎಲ್ಲಾ ದಾಖಲೆಗಳನ್ನು ತರುವಂತೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಲ್ಡರ್ ಮಂಜುನಾಥ್ ವಿರುದ್ಧ ಇಡಿಗೆ ಮತ್ತೊಂದು ದೂರು
ಬಿಲ್ಡರ್ ಮಂಜುನಾಥ್ ಸಹಾಯಕ ಹಣ ಎಣಿಸುತ್ತಿರುವ ವಿಡಿಯೋ ಸಹಿತವಾಗಿ ಜಾರಿ ನಿರ್ದೇಶನಾಲಯಕ್ಕೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಇದು ಬಿಲ್ಡರ್ ಮಂಜುನಾಥ್ ವಿರುದ್ಧದ ಮತ್ತೊಂದು ದೂರಾಗಿದ್ದು, ಸೆಟಲ್ ಮೆಂಟ್ ಡೀಡ್ ಹೆಸರಿನಲ್ಲಿ ಹಣ ಪಡೆದ ಆರೋಪ ಹೊರಿಸಿದ್ದಾರೆ. ಮೈಸೂರಿನ ಶಿವಣ್ಣ ಎಂಬುವವರಿಂದ 25 ಲಕ್ಷ ರೂಪಾಯಿ ನಗದು ಪಡೆದು ಹಣ ಎಣಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಮುಡಾ ಹಗರಣಕ್ಕೆ ಸಾಕ್ಷಿಯಾಗಿರುವ ವೈರಲ್ ವೀಡಿಯೋವನ್ನು ಸ್ನೇಹಮಯಿ ಕೃಷ್ಣ ಇಡಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಮೈಸೂರು ಲೋಕಾಯುಕ್ತ ಕಚೇರಿಗೆ ಇಂದು (ಅಕ್ಟೋಬರ್ 28) ಆಗಮಿಸಿದ ಸ್ನೇಹಮಯಿ ಕೃಷ್ಣ ತಾವು ನೀಡಿದ ದೂರಿನಲ್ಲಿ, 50: 50 ಅನುಪಾತದಡಿಯಲ್ಲಿ 928 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿರುವುದಾಗಿ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ 14 ನಿವೇಶನಗಳನ್ನು ಉದಾಹರಣೆಗೆ ಇಟ್ಟುಕೊಂಡು ಉಳಿದ ಎಲ್ಲಾ ಕೇಸ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ಧಾರೆ.
ಮುಡಾದ ಆಯುಕ್ತರಾಗಿದ್ದ ಡಿಬಿ ನಟೇಶ್ ಮತ್ತು ದಿನೇಶ್ ಕುಮಾರ್ ಅವರ ಅವಧಿಯಲ್ಲಿ 928 ನಿವೇಶನಗಳ ಹಂಚಿಕೆಯಲ್ಲಿ ಹೆಚ್ಚು ಅಕ್ರಮ ನಡೆದಿದೆ. ಅಕ್ರಮ ನಿವೇಶನ ಪಡೆದುಕೊಂಡವರ ಜೊತೆಗೆ ಈ ಇಬ್ಬರು ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
928 ನಿವೇಶನಗಳಲ್ಲಿ ಬಿಲ್ಡರ್ ಮಂಜುನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪನವರ ಸಹೋದರನ ಮಗ ನವೀನ್ ಬೋಸ್ ಅವರಿಗೂ ಸೆಟಲ್ಮೆಂಟ್ ಡೀಡ್ ಮಾಡಿಕೊಟ್ಟಿದ್ದಾರೆ. ಅವರ ಮೇಲೂ ಕಾನೂನು ರೀತ್ಯಾ ಕ್ರಮ ಆಗಬೇಕು ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದರು.
ಇದಕ್ಕೂ ಮೊದಲು ನಡೆದಿತ್ತು ಇಡಿ ದಾಳಿ
ಇದೇ ಕೇಸ್‌ಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ತಂಡಗಳು ಮೈಸೂರು ಮುಡಾ ಕಚೇರಿ ಮತ್ತು ಇತರೆ ಸ್ಥಳಗಳಲ್ಲಿ ಈ ತಿಂಗಳ ಆರಂಭದಲ್ಲಿ ಮತ್ತು ಮಧ್ಯಭಾಗದಲ್ಲಿ ದಾಳಿ ನಡೆಸಿದ್ದವು. ಕಡತಗಳ ಶೋಧ ಮತ್ತು ಸಾಕ್ಷ್ಯ ಸಂಗ್ರಹ ಮಾಡಿದ್ದವು. ಮುಡಾದ ಕೆಲವು ಕೆಳಹಂತದ ಅಧಿಕಾರಿಗಳನ್ನು ಅದರ ಬೆಂಗಳೂರು ವಲಯ ಕಚೇರಿಯಲ್ಲಿ ಪ್ರಶ್ನಿಸಲಾಗಿತ್ತು. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ವ್ಯಕ್ತವಾಗಿದೆ. ಮುಡಾ ಸ್ವಾಧೀನಪಡಿಸಿಕೊಂಡ ಭೂಮಿಗಿಂತ ಗಮನಾರ್ಹವಾಗಿ ಹೆಚ್ಚಿನ ಆಸ್ತಿ ಮೌಲ್ಯದ 14 ಸೈಟ್‌ಗಳನ್ನು ಮೈಸೂರಿನ ಪ್ರಮುಖ ಭಾಗದಲ್ಲಿ ಮಂಜೂರು ಮಾಡಲಾಗಿದ್ದು, ಇದು ಈಗ ವಿವಾದದ ಕೇಂದ್ರ ಬಿಂದು. ಇತ್ತೀಚೆಗೆ ಸಿದ್ದರಾಮಯ್ಯ ಅವರ ಪತ್ನಿ ಈ 14 ಸೈಟ್‌ಗಳನ್ನು ವಾಪಸ್ ಮುಡಾಕ್ಕೆ ಒಪ್ಪಿಸುತ್ತಿರುವುದಾಗಿ ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವಿಚಾರಣೆಯನ್ನೂ ಎದುರಿಸಿದ್ದರು.