ಮುಡಾ ನಿವೇಶನ ಹಗರಣ; ಮೂಲ ಜಮೀನು ಯಾರದ್ದು? ಸಿಎಂ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ ನೀಡಿದ್ದು ಯಾರು?-muda scam who owns the original land who gifted cm siddaramaiahs wife when was the land acquired mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ನಿವೇಶನ ಹಗರಣ; ಮೂಲ ಜಮೀನು ಯಾರದ್ದು? ಸಿಎಂ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ ನೀಡಿದ್ದು ಯಾರು?

ಮುಡಾ ನಿವೇಶನ ಹಗರಣ; ಮೂಲ ಜಮೀನು ಯಾರದ್ದು? ಸಿಎಂ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ ನೀಡಿದ್ದು ಯಾರು?

Muda Scam: ಮುಡಾ ನಿವೇಶನ ಹಗರಣ; ಮೂಲ ಜಮೀನು ಯಾರದ್ದು? ಸಿಎಂ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ ನೀಡಿದ್ದು ಯಾರು? ಜಮೀನು ವಶಪಡಿಸಿಕೊಂಡಿದ್ದು ಯಾವಾಗ? ಪರಿಹಾರ ಸಿಕ್ಕಿದ್ದು ಹೇಗೆ? ಇಲ್ಲಿದೆ ಟೈಮ್‌ ಲೈನ್ (ವರದಿ-ಎಚ್.ಮಾರುತಿ)

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ.

ಆಗಸ್ಟ್​ 17ರ ಶನಿವಾರದ ಮಹತ್ವದ ಬೆಳವಣಿಗೆಯೊಂದರಲ್ಲಿ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಈ ನಿರ್ಧಾರ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಹಾಗಾದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿವೇಶನಗಳನ್ನು ಮಂಜೂರಾತಿ ಮಾಡಿರುವ ಈ ಪ್ರಕರಣದ ವಿವರಗಳೇನು? ಯಾವ ಜಮೀನನ್ನು ಮುಡಾ ವಶಪಡಿಸಿಕೊಂಡಿತ್ತು ಹಾಗೂ ಯಾವಾಗ ಪರ್ಯಾಯವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಯೋಣ ಬನ್ನಿ.

ಅ) 2001ರಲ್ಲಿ ಲೇಔಟ್‌ ರಚಿಸಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದರೂ ಸಿದ್ದರಾಮಯ್ಯ ಅವರ ಭಾವಮೈದುನ 2004ರಲ್ಲಿ ಜಮೀನು ಖರೀದಿಸಿಲು ಹೇಗೆ ಸಾಧ್ಯ?

ಆ) 2005ರಲ್ಲಿ ಕೃಷಿ ಜಮೀನು ಕೃಷಿಯೇತರ ಬಳಕೆಗಾಗಿ ಪರಿವರ್ತನೆ ಮಾಡಿದ್ದು ಹೇಗೆ?

ಇ) 2001ರಲ್ಲೇ ಲೇಔಟ್‌ ರಚಿಸಲಾಗಿದ್ದರೂ ಮುಖ್ಯಮಂತ್ರಿಗಳ ಪತ್ನಿಗೆ 2010ರಲ್ಲಿ ಕೊಡುಗೆಯಾಗಿ ನೀಡಲು ಹೇಗೆ ಸಾಧ್ಯ?

ರಾಜ್ಯಪಾಲರ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮುಡಾ ಹಗರಣದ ಟೈಮ್‌ ಲೈನ್‌ ನೋಡೋಣ ಬನ್ನಿ.

ಮುಡಾ ಹಗರಣದ ಟೈ‌ಮ್​ ಲೈನ್‌

ಮೈಸೂರಿನ ದೇವನೂರು ಬಡಾವಣೆಯ 3ನೇ ಹಂತದ ಬಡಾವಣೆ ನಿರ್ಮಾಣಕ್ಕೆ ನಿಂಗ ಬಿನ್‌ ಜವರ ಅವರ 3.16 ಎಕರೆ ಜಮೀನು ವಶಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ. ನಂತರ 3.16 ಎಕರೆ ಜಮೀನು ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಬಳಿಕ ನಿಂಗ ಅವರ ಜಮೀನನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಅಧಿಸೂಚನೆಯಿಂದ ಕೈ ಬಿಡಲಾಗುತ್ತದೆ.

ಡಿನೋಟಿಫೈ ಮಾಡಲಾದ ಈ ಜಮೀನನ್ನು ದೇವನೂರು ಬಡಾವಣೆಯ 3ನೇ ಹಂತದ ಬಡಾವಣೆ ರಚಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಅವರ ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಈ 3.16 ಎಕರೆ ಜಮೀನನ್ನು ಖರೀದಿಸುತ್ತಾರೆ. ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ ಜಮೀನನ್ನು ಕೃಷಿಯೇತರ ಉದ್ಧೇಶಕ್ಕಾಗಿ ಬದಲಾಯಿಸಲಾಗುತ್ತದೆ.

ನಂತರ ಮಲ್ಲಿಕಾರ್ಜುನ ಸ್ವಾಮಿ ಈ ಜಮೀನನ್ನು ತಮ್ಮ ಸಹೋದರಿ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಉಡುಗೊರೆಯಾಗಿ ನೀಡುತ್ತಾರೆ. ಮುಡಾ, ತಮ್ಮ ಜಮೀನನ್ನು ಬಳಸಿಕೊಂಡಿದ್ದು, ಪರಿಹಾರ ನೀಡಬೇಕೆಂದು ಪಾರ್ವತಿ ಮನವಿ ಸಲ್ಲಿಸುತ್ತಾರೆ. ಡಿನೋಟಿಫೈ ಮಾಡಿರುವ ಭೂಮಿಯನ್ನು ತಪ್ಪಾಗಿ ಬಳಸಿಕೊಳ್ಳಲಾಗಿದ್ದು, ಪಾರ್ವತಿ ಅವರಿಗೆ ಪರ್ಯಾಯ ನಿವೇಶನಗಳನ್ನು ನೀಡಲು ಮುಡಾ ತೀರ್ಮಾನಿಸುತ್ತದೆ.

ಮುಡಾ ಶೇ 50:50ರ ಅನುಪಾತದಲ್ಲಿ ಪರ್ಯಾಯ ನಿವೇಶನಗಳನ್ನು ಹಂಚಲು ನಿರ್ಧಾರ ಮಾಡುತ್ತದೆ. ಹಾಗಾಗಿ, ಪಾರ್ವತಿ ಅವರು ಅಭಿವೃದ್ಧಿಪಡಿಸಲಾದ ಲೇಔಟ್​ನಲ್ಲಿ ತಮ್ಮ ಭೂಮಿಯ ಶೇ.50ರಷ್ಟು ಭೂಮಿಯನ್ನು ಪರಿಹಾರವಾಗಿ ಪಡೆಯಲಿದ್ದಾರೆ. ಪಾರ್ವತಿ ಅವರು ಮತ್ತೆ ಪರ್ಯಾಯ ನಿವೇಶನಗಳನ್ನು ನೀಡಲು ಮುಡಾಗೆ ಮನವಿ ಸಲ್ಲಿಸುತ್ತಾರೆ. ಪಾರ್ವತಿ ಅವರಿಗೆ ವಿಜಯನಗರದ 3ನೇ ಹಂತದಲ್ಲಿ 14 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ.

ನಂತರ ಸರ್ಕಾರ ಶೇ 50:50ರ ಅನುಪಾತವನ್ನು ರದ್ದುಗೊಳಿಸುತ್ತದೆ. ಸಿದ್ದರಾಮಯ್ಯ ಅವರು ತಮ್ಮ ಭೂಮಿಗೆ 62 ಕೋಟಿ ರೂಪಾಯಿ ಪರಿಹಾರ ಕೇಳುತ್ತಾರೆ. ಈ ಅಕ್ರಮಗಳನ್ನು ಪತ್ತೆ ಹಚ್ಚಲು ಸರ್ಕಾರ ಏಕ ಸದಸ್ಯ ಆಯೋಗವನ್ನು ರಚಿಸುತ್ತದೆ. ಸಭಾಪತಿ ಯುಟಿ ಖಾದರ್‌ ಅವರು ಮುಡಾ ಹಗರಣ ಕುರಿತು ಚರ್ಚಿಸಲು ಅನುಮತಿ ನೀಡುತ್ತಾರೆ. ಟಿಜೆ ಅಬ್ರಹಾಂ ಅವರು ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿದಾಗ ರಾಜ್ಯಪಾಲರು ಮರು ದಿನವೇ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ನೀಡುತ್ತಾರೆ.

ಮುಖ್ಯಮಂತ್ರಿಗಳಿಗೆ ನೀಡಿರುವ ನೋಟಿಸ್​​ ಹಿಂಪಡೆಯುವಂತೆ ಮಂತ್ರಿ ಪರಿಷತ್‌ ಆಗ್ರಹಪಡಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯುತ್ತಾರೆ. ಬಿಜೆಪಿ-ಜೆಡಿಎಸ್‌ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತದೆ. ಅಂತಿಮವಾಗಿ ಶನಿವಾರ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುತ್ತಾರೆ.