ಮುರುಡೇಶ್ವರ: ಸಮುದ್ರದ ಸೆಳೆತಕ್ಕೆ ಸಿಲುಕಿದ ಮುಳಬಾಗಿಲು ಶಾಲೆಯ ನಾಲ್ವರು ವಿದ್ಯಾರ್ಥಿನಿಯರು , ಒಬ್ಬಳ ಶವ ಪತ್ತೆ, ಮೂವರು ನಾಪತ್ತೆ
Murdeshwar Beach Tragedy: ಕೋಲಾರ ಜಿಲ್ಲೆ ಮುಳಬಾಗಿಲು ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಮುರುಡೇಶ್ವರ ಸಮುದ್ರದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ನಾಲ್ವರ ಪೈಕಿ ಒಬ್ಬಳ ಮೃತದೇಹ ಪತ್ತೆಯಾಗಿದ್ದು, ಮೂವರಿಗಾಗಿ ಶೋಧ ನಡೆದಿದೆ.
Murdeshwar Beach Tragedy: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ನಾಲ್ವರು ಬಾಲಕಿಯರು ಮುರುಡೇಶ್ವರದಲ್ಲಿ ಸಮುದ್ರ ಪಾಲಾಗಿರುವ ಘಟನೆ ನಡೆದಿದೆ. ಈ ನಾಲ್ವರ ಪೈಕಿ ಒಬ್ಬಳ ಮೃತದೇಹ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಶೋಧ ನಡೆದಿದೆ. 9ನೇ ತರಗತಿ ಓದುತ್ತಿದ್ದ ಮುಳಬಾಗಿಲು ತಾಲ್ಲೂಕಿನ ಪೂಜಾರಹಳ್ಳಿ ಗೋಪಾಲಪ್ಪ ಎಂಬುವವರ ಪುತ್ರಿ ಶ್ರಾವಂತಿ ಮೃತಪಟ್ಟಿದ್ದು, ಇದೀಗ ಮೃತದೇಹವನ್ನು ಹೊರತೆಗೆಯಲಾಗಿದೆ. ಮುಳಬಾಗಲು ತಾಲೂಕು ಎನ್.ಗಡ್ಡೂರು ನಿವಾಸಿ ಜೈರಾಮಪ್ಪ ಪುತ್ರಿ ದೀಕ್ಷ, ಹಬ್ಬಣಿ ಗ್ರಾಮದ ಚನ್ನರೆಡ್ಡಪ್ಪ ಪುತ್ರಿ ಲಾವಣ್ಯ, ದೊಡ್ಡಗಟ್ಟಹಳ್ಳಿಯ ಮುನಿರಾಜು ಪುತ್ರಿ ವಂದನ ಕಾಣೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆದಿದೆ.
ಮುರುಡೇಶ್ವರ ಸಮುದ್ರದ ಸೆಳೆತಕ್ಕೆ ಸಿಲುಕಿದ ವಿದ್ಯಾರ್ಥಿನಿಯರು;. ಹೇಗಾಯಿತು ದುರಂತ
ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ಈ ದುರ್ಘಟನೆ ನಡೆದಿದೆ. ಇಂದು (ಡಿಸೆಂಬರ್ 10) ಸಂಜೆ ಕಡಲ ತೀರದಲ್ಲಿ ಆಟವಾಡುತ್ತಿದ್ದ 54 ವಿದ್ಯಾರ್ಥಿಗಳ ಪೈಕಿ ನಾಲ್ಕು ಬಾಲಕಿಯರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಒಬ್ಬಳು ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಇನ್ನುಳಿದ ಮೂವರು ವಿದ್ಯಾರ್ಥಿಗಳಿಗೆ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಋಎ.
ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು, 6 ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಏಕಾಕಿಯಾಗಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಏಳು ಜನ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಈ ಪೈಕಿ ಮೂರು ಜನ ವಿದ್ಯಾರ್ಥಿನಿಯರಾದ ಯಶೋಧ, ವೀಕ್ಷಣಾ, ಲಿಪಿಕಾ ಎನ್ನುವರನ್ನು ರಕ್ಷಣೆ ಮಾಡಲಾಗಿದೆ. 9ನೇ ತರಗತಿ ಓದುತ್ತಿದ್ದ ಮುಳಬಾಗಲು ತಾಲ್ಲೂಕಿನ ಪೂಜಾರಹಳ್ಳಿ ಗೋಪಾಲಪ್ಪ ಎಂಬುವವರ ಪುತ್ರಿ ಶ್ರಾವಂತಿ ಮೃತಪಟ್ಟಿದ್ದು, ಇದೀಗ ಮೃತದೇಹವನ್ನು ಹೊರತೆಗೆಯಲಾಗಿದೆ. ಮುಳಬಾಗಲು ತಾಲ್ಲೂಕಿನ ಎನ್.ಗಡ್ಡೂರು ನಿವಾಸಿ ಜೈರಾಮಪ್ಪ ಪುತ್ರಿ ದೀಕ್ಷ, ಹಬ್ಬಣಿ ಗ್ರಾಮದ ಚನ್ನರೆಡ್ಡಪ್ಪ ಪುತ್ರಿ ಲಾವಣ್ಯ, ದೊಡ್ಡಗಟ್ಟಹಳ್ಳಿಯ ಮುನಿರಾಜು ಪುತ್ರಿ ವಂದನ ಕಾಣೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮುರುಡೇಶ್ವರದಲ್ಲಿ ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಆದರೂ ಸಹ ಅಗತ್ಯ ಸಲಕರಣೆ ಇಲ್ಲದ ಕಾರಣ ಲೈಫ್ ಗಾರ್ಡ್ಸ್ಗಳು ಸಮುದ್ರಕ್ಕೆ ಇಳಿದಿರಲಿಲ್ಲ. ಹೀಗಾಗಿ ತಾಲೂಕು ಆಡಳಿತವು ಪ್ರವಾಸಿಗರನ್ನು ಕಡಲಿಗೆ ಇಳಿಯದಂತೆ ನಿರ್ಬಂಧಿಸಿತ್ತು. ಒಂದು ತಿಂಗಳ ಹಿಂದೆ ಈ ನಿರ್ಬಂಧವನ್ನು ತಾಲೂಕು ಆಡಳಿತ ತೆರವುಗೊಳಿಸಿತ್ತು. ಅದರ ಬೆನ್ನಿಗೆ ಈ ದುರಂತ ಸಂಭವಿಸಿದ್ದು, ಎಲ್ಲರಲ್ಲೂ ಕಳವಳ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ಸಂತಾಪ; ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ಮುರುಡೇಶ್ವರ ಬಳಿಯ ಸಮುದ್ರದಲ್ಲಿ ನೀರುಪಾಲಾದ ಸುದ್ದಿ ತಿಳಿದು ಆಘಾತವಾಯಿತು. ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮಕ್ಕಳ ದುಃಖತಪ್ತ ಪೋಷಕರಿಗೆ ನನ್ನ ಸಂತಾಪಗಳು. ಈ ದುರ್ಘಟನೆಯಲ್ಲಿ ಮಡಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮೃತ ದೇಹಗಳನ್ನು ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ. ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು. ಅಪಾಯಕಾರಿ ಸ್ಥಳಗಳಿಗೆ ಭೇಟಿನೀಡುವಾಗ ಮಕ್ಕಳ ಮೇಲೆ ನಿಗಾ ಇಡಬೇಕು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಸಂಕಟವನ್ನು ನಾನು ಅರ್ಥೈಸಿಕೊಳ್ಳಬಲ್ಲೆ, ಇಂತಹ ಅವಘಡಗಳು ಮತ್ತೆಂದೂ ಸಂಭವಿಸದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.