ಮುರುಡೇಶ್ವರ ಬೀಚ್‌ ದುರಂತ; ಸಮುದ್ರ ಪಾಲಾದ ಎಲ್ಲ ವಿದ್ಯಾರ್ಥಿಗಳ ಶವ ಪತ್ತೆ, ವಿಷಾದದಲ್ಲಿ ಅಂತ್ಯವಾಯಿತು ಮುಳಬಾಗಿಲು ಶಾಲಾ ಪ್ರವಾಸ
ಕನ್ನಡ ಸುದ್ದಿ  /  ಕರ್ನಾಟಕ  /  ಮುರುಡೇಶ್ವರ ಬೀಚ್‌ ದುರಂತ; ಸಮುದ್ರ ಪಾಲಾದ ಎಲ್ಲ ವಿದ್ಯಾರ್ಥಿಗಳ ಶವ ಪತ್ತೆ, ವಿಷಾದದಲ್ಲಿ ಅಂತ್ಯವಾಯಿತು ಮುಳಬಾಗಿಲು ಶಾಲಾ ಪ್ರವಾಸ

ಮುರುಡೇಶ್ವರ ಬೀಚ್‌ ದುರಂತ; ಸಮುದ್ರ ಪಾಲಾದ ಎಲ್ಲ ವಿದ್ಯಾರ್ಥಿಗಳ ಶವ ಪತ್ತೆ, ವಿಷಾದದಲ್ಲಿ ಅಂತ್ಯವಾಯಿತು ಮುಳಬಾಗಿಲು ಶಾಲಾ ಪ್ರವಾಸ

ಮುರುಡೇಶ್ವರ ಬೀಚ್‌ ದುರಂತ; ಕೋಲಾರ ಜಿಲ್ಲೆ ಮುಳಬಾಗಿಲು ಶಾಲಾ ಮಕ್ಕಳ ಪ್ರವಾಸ ವಿಷಾದದೊಂದಿಗೆ ಕೊನೆಗೊಂಡಿದೆ. ನಿನ್ನೆ (ಡಿಸೆಂಬರ್ 10) ಮುರುಡೇಶ್ವರ ಬೀಚ್‌ನಲ್ಲಿ ನಾಲ್ವರು ಬಾಲಕಿಯರು ಸಮುದ್ರ ಪಾಲಾಗಿದ್ದರು. ಈ ಪೈಕಿ ಒಬ್ಬಳ ಮೃತದೇಹ ಕೂಡಲೇ ಪತ್ತೆಯಾಗಿದ್ದು, ಉಳಿದ ಮೂವರ ಮೃತದೇಹಗಳು ಇಂದು ಪತ್ತೆಯಾಗಿವೆ.

ಮುರುಡೇಶ್ವರ ಬೀಚ್‌ ದುರಂತ; ಸಮುದ್ರ ಪಾಲಾದ ಎಲ್ಲ ವಿದ್ಯಾರ್ಥಿಗಳ ಶವ ಪತ್ತೆ, ವಿಷಾದದಲ್ಲಿ ಮುಳಬಾಗಿಲು ಶಾಲಾ ಮಕ್ಕಳ ಪ್ರವಾಸ ಅಂತ್ಯವಾಯಿತು. (ಸಾಂಕೇತಿಕವಾಗಿ ಮೆಟಾ ಎಐ ರಚಿತ ಫೋಟೋ ಬಳಸಲಾಗಿದೆ)
ಮುರುಡೇಶ್ವರ ಬೀಚ್‌ ದುರಂತ; ಸಮುದ್ರ ಪಾಲಾದ ಎಲ್ಲ ವಿದ್ಯಾರ್ಥಿಗಳ ಶವ ಪತ್ತೆ, ವಿಷಾದದಲ್ಲಿ ಮುಳಬಾಗಿಲು ಶಾಲಾ ಮಕ್ಕಳ ಪ್ರವಾಸ ಅಂತ್ಯವಾಯಿತು. (ಸಾಂಕೇತಿಕವಾಗಿ ಮೆಟಾ ಎಐ ರಚಿತ ಫೋಟೋ ಬಳಸಲಾಗಿದೆ)

ಕಾರವಾರ: ಭಟ್ಕಳ ತಾಲೂಕು ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳಾದ ದೀಕ್ಷಾ ಜೆ(15), ಲಾವಣ್ಯ (15) ಹಾಗು ವಂದನಾ (15) ಮೃತದೇಹ ಬುಧವಾರ (ಡಿಸೆಂಬರ್ 11) ಮುರುಡೇಶ್ವರದ ಸಮುದ್ರದಲ್ಲಿ ಪತ್ತೆಯಾಗಿದೆ.

ಕರಾವಳಿ ಕಾವಲು ಪೊಲೀಸ್ ಪಡೆ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಬುಧವಾರ ಮುಂಜಾನೆಯಿಂದ ಮೃತದೇಹದ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬೆಳಿಗ್ಗೆ 11.30ಕ್ಕೆ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ಶಾರದ.ಎನ್.ಎಸ್ ರೆಸಿಡೆನ್ಸಿ ಹಿಂಬದಿ ಕಲ್ಲುಬಂಡೆ ಸಮೀಪ ಪತ್ತೆಯಾದರೆ, ಇನ್ನೋರ್ವ ವಿದ್ಯಾರ್ಥಿನಿ ಮೃತದೇಹ ಪಕ್ಕದ ಗುಡ್ಡದ ಕೆಳಗಡೆ ಪತ್ತೆಯಾಗಿದೆ. ಕರಾವಳಿ ಪೊಲೀಸ್ ಕಾವಲು ಪಡೆ ಸಿಪಿಐ ಕುಸುಮಧರಾ ಅವರ ನೇತೃತ್ವದಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು. ಮಂಗಳವಾರ ಸಂಜೆ ಶ್ರಾವಂತಿ ಗೋಪಾಲಪ್ಪ (15) ಸಾವನಪ್ಪಿದ್ದಳು. ಆಕೆಯ ಮೃತದೇಹ ಕೂಡಲೇ ಪತ್ತೆಯಾಗಿತ್ತು. ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಉಪವಿಭಾಗಾಧಿಕಾರಿ ಡಾ.ನಯನಾ ಸ್ಥಳದಲ್ಲಿಯೇ ಇದ್ದು ಮೃತದೇಹ ಪತ್ತೆ ಕಾರ್ಯಚರಣೆ ಗಮನಿಸಿದರು.

ಏನಿದು ದುರಂತ

ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ 46 ವಿದ್ಯಾರ್ಥಿಗಳು, 6 ಶಿಕ್ಷಕರು ಕೋಲಾರದ ಮುಳಬಾಗಿಲಿನಿಂದ ಶೈಕ್ಷಣಿಕ ಪ್ರವಾಸ ಹೋಗಿದ್ದರು. ಅದು ಈಗ ದುರಂತದಲ್ಲಿ ಮುಕ್ತಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಮುರುಡೇಶ್ವರ ಕಡಲ ತೀರದಲ್ಲಿ ಮಂಗಳವಾರ (ಡಿಸೆಂಬರ್ 10) ಸಂಜೆ ಆಟವಾಡುತ್ತಿದ್ದ ನಾಲ್ವರು ಶಾಲಾ ಬಾಲಕಿಯರು ನೀರುಪಾಲಾಗಿದ್ದಾರೆ. ಒಬ್ಬಳ ಮೃತದೇಹ ಕೂಡಲೇ ಪತ್ತೆ ಹಚ್ಚಲಾಗಿದೆ. ಆದರೆ, ಉಳಿದವ ಮೂರು ಕಣ್ಮರೆಯಾಗಿದ್ದರು. ಅವರ ಶೋಧ ನಿನ್ನೆ ತಡವಾದ ಕಾರಣ ನಡೆಸಲಾಗಿರಲಿಲ್ಲ. ಬುಧವಾರ ಸ್ಥಳೀಯರ ಜತೆಗೆ ಶೋಧ ಕಾರ್ಯ ನಡೆಸಿದಾಗ ಮೂವರ ಶವ ಪತ್ತೆಯಾಗಿದೆ.

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಮಕ್ಕಳ ಪೈಕಿ ಏಳು ಬಾಲಕಿಯರು ಸಮುದ್ರ ನೀರಿಗೆ ಇಳಿದಿದ್ದರು. ದೊಡ್ಡ ಗಾತ್ರದ ಅಲೆ ಅಪ್ಪಳಿಸಿದಾಗ ಅದರ ರಭಸಕ್ಕೆ ಬಾಲಕಿಯರು ಬಿದ್ದುಬಿಟ್ಟಿದ್ದಾರೆ. ಮೇಲೇಳುವುದು ಅವರಿಂದ ಸಾಧ್ಯವಾಗದ ಕಾರಣ ಅಲೆಗಳೊಂದಿಗೆ ಕೊಚ್ಚಿಕೊಂಡು ಹೋಗಿದ್ದಾರೆ. ಕೂಡಲೇ ಅಲ್ಲಿದ್ದವರು ಎಚ್ಚೆತ್ತುಕೊಂಡು ಮೂವರು ಬಾಲಕಿಯರನ್ನು ರಕ್ಷಿಸಿದ್ದಾರೆ. ಯಶೋಧ, ವೀಕ್ಷಣಾ, ಲಿಪಿಕಾ ಎನ್ನುವರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ನಾಲ್ವರು ಬಾಲಕಿಯರನ್ನು ಅಲೆಗಳು ಕೊಚ್ಚಿಕೊಂಡು ಹೋಗಿದ್ದವು. ಈ ಪೈಕಿ, ಶ್ರಾವಂತಿ ಗೋಪಾಲಪ್ಪ ಮೃತದೇಹ ನಿನ್ನೆಯೇ ಪತ್ತೆಯಾಗಿತ್ತು. ಉಳಿದ ಮೂವರು ಕಣ್ಮರೆಯಾಗಿದ್ದರು. ಅವರ ಶವಗಳು ಇಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ಮುರುಡೇಶ್ವರ ಬಳಿಯ ಸಮುದ್ರದಲ್ಲಿ ನೀರುಪಾಲಾದ ಸುದ್ದಿ ತಿಳಿದು ಆಘಾತವಾಯಿತು. ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮಕ್ಕಳ ದುಃಖತಪ್ತ ಪೋಷಕರಿಗೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಅಲ್ಲದೆ, ಈ ದುರ್ಘಟನೆಯಲ್ಲಿ ಮಡಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮೃತ ದೇಹಗಳನ್ನು ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ. ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು. ಅಪಾಯಕಾರಿ ಸ್ಥಳಗಳಿಗೆ ಭೇಟಿನೀಡುವಾಗ ಮಕ್ಕಳ ಮೇಲೆ ನಿಗಾ ಇಡಬೇಕು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಸಂಕಟವನ್ನು ನಾನು ಅರ್ಥೈಸಿಕೊಳ್ಳಬಲ್ಲೆ, ಇಂತಹ ಅವಘಡಗಳು ಮತ್ತೆಂದೂ ಸಂಭವಿಸದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Whats_app_banner