ಕನ್ನಡ ಸುದ್ದಿ  /  Karnataka  /  Muslim Women's College: Karnataka Governmet Has No Intention Of Establishing Muslim College Said Ministers

Muslim women's college: ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜು ಪ್ರಸ್ತಾವನೆ; ಸ್ವಾಗತ ಎಂದ ಎಚ್‌ಡಿಕೆ; ಪ್ರಸ್ತಾವನೆಯೇ ಇಲ್ಲೆಂದ ಸರ್ಕಾರ

Muslim women's college: ರಾಜ್ಯದಲ್ಲಿ ಹಿಜಾಬ್‌ ವಿವಾದದ ಕಾರಣ, ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ 10 ಮಹಿಳಾ ಕಾಲೇಜು ಸ್ಥಾಪನೆಗೆ ವಕ್ಫ್‌ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಅದಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ ಎಂಬ ಸುದ್ದಿ ಗಮನಸೆಳೆದಿದೆ. ಇದು ಮತ್ತೆ ರಾಜಕೀಯ ಸಂಚಲನ ಮೂಡಿಸಿದೆ. ಯಾರು ಏನು ಹೇಳಿದ್ರು? ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Social Media)

ರಾಜ್ಯದಲ್ಲಿ ಹಿಜಾಬ್‌ ವಿವಾದದ ಕಾರಣ, ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ 10 ಮಹಿಳಾ ಕಾಲೇಜು ಸ್ಥಾಪನೆಗೆ ವಕ್ಫ್‌ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. . ಅದಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ ಎಂಬ ಸುದ್ದಿ ಈಗ ರಾಜಕೀಯ ಸಂಚಲನ ಮೂಡಿಸಿದೆ.

ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿರುವ ಸಂಬಂಧ ವಿವಾದ ಇರುವ ಮಧ್ಯೆಯೇ ಇದೀಗ ಆ ಸಮುದಾಯದ ಮಹಿಳೆಯರಿಗೆ 10 ಪ್ರತ್ಯೇಕ ಕಾಲೇಜುಗಳು ಆರಂಭಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಜ್ಯ ವಕ್ ಬೋರ್ಡ್ ಈ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ತಿಂಗಳು ಕಾಲೇಜುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ನಿರೀಕ್ಷೆಯಿದೆ. ಮಂಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ 10 ಕಾಲೇಜುಗಳು ತಲೆಯೆತ್ತಲಿವೆ. ಈ ಕಾಲೇಜುಗಳು ವಕ್ಫ್‌ ಬೋರ್ಡ್‌ನಿಂದ ನಡೆಸಲ್ಪಡುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜುಗಳು

ಮಾ‍ಧ್ಯಮ ವರದಿಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ ಮುಸ್ಲಿಮರು ಹೆಚ್ಚಿರುವ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸುವ ಸಾಧ್ಯತೆ ಇದೆ.

ರಾಜ್ಯಾದ್ಯಂತ ಇರುವ ವಕ್ಫ್‌ ಆಸ್ತಿಯಲ್ಲೇ ಈ ಕಾಲೇಜುಗಳು ತಲೆ ಎತ್ತಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರಥಮ ಪಿಯುಸಿ ನಂತರದ ವರ್ಷ ದ್ವಿತೀಯ ಪಿಯುಸಿ ಹೀಗೆ ಪದವಿ ಹಂತದವರೆಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆ ಕ್ರಮ ಸ್ವಾಗತಾರ್ಹ

ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಿಸಿದರೆ, ಅದನ್ನು ಪಕ್ಷ ಸ್ವಾಗತಿಸುತ್ತದೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ನರಸೀಪುರದಲ್ಲಿ ಹೇಳಿದರು. ಜೆಡಿಎಸ್‌ ಪಂಚರತ್ನ ರಥಯಾತ್ರೆ ನಡೆಸುತ್ತಿರುವ ಅವರು, ಮುಸ್ಲಿಂ ಹೆಣ್ಮಕ್ಕಳು ಕೂಡ ನಮ್ಮ ಕರ್ನಾಟಕದವರಲ್ಲವೇ. ಅವರ ವಿದ್ಯಾಭ್ಯಾಸಕ್ಕಾಗಿ ಪ್ರತ್ಯೇಕ ಕಾಲೇಜು ಆರಂಭಿಸಿದರೆ ಒಳ್ಳೆಯದು ಎಂದು ಹೇಳಿದರು.

ಪ್ರಸ್ತಾವನೆ ಅಲ್ಲಗಳೆಯುತ್ತಿದೆ ಸರ್ಕಾರ

ಪ್ರತ್ಯೇಕವಾಗಿ ಮುಸ್ಲಿಂ ಕಾಲೇಜುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಅಂತಹ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ ಆಗಿಲ್ಲ. ಇಂತಹ ಯಾವುದೇ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆ ಸಲ್ಲಿಸಿಲ್ಲ. ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಮಾಡುವ ಉದ್ದೇಶ ಸರ್ಕಾರಕ್ಕೂ ಇಲ್ಲ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿರುವುದಾಗಿ ಪಬ್ಲಿಕ್‌ ಟಿವಿ ವರದಿ ಮಾಡಿದೆ.

ಪ್ರಸ್ತಾವನೆ ಅಥವಾ ಕಡತವೂ ನಮ್ಮ ಮುಂದೆ ಇಲ್ಲ

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಮುಸ್ಲಿಂ ಮಹಿಳೆಯರಿಗಾಗಿಯೇ ಪ್ರತ್ಯೇಕ ಕಾಲೇಜು ಪ್ರಾರಂಭಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಯಾವುದೇ ಪ್ರಸ್ತಾವನೆಗಳು ಇಲ್ಲ. ಕಾಲೇಜುಗಳ ಪ್ರಾರಂಭದ ಬಗ್ಗೆ ವಕ್ಫ್‌ ಬೋರ್ಡ್‌ ಅಧ್ಯಕ್ಷರ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಈ ವಿಷಯದ ಕುರಿತು ನಾನು ಈಗಾಗಲೇ ವಕ್ಫ್‌ ಬೋರ್ಡ್‌ ಅಧ್ಯಕ್ಷರ ಜತೆ ಮಾತನಾಡಿದ್ದು, ಇದರ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

IPL_Entry_Point