ಮೈಸೂರಿನಲ್ಲಿ ನಾಳೆಯಿಂದ ಎರಡು ದಿನ ಹಲಸಿನ ಘಮಘಮ, ಹಲಸಿನ ಮೇಳದಲ್ಲಿ ಬಾಯಿ ರುಚಿ ತಣಿಸಲಿದೆ ಬಿಲ್ವ ಹಣ್ಣಿನ ಜ್ಯೂಸ್
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರಿನಲ್ಲಿ ನಾಳೆಯಿಂದ ಎರಡು ದಿನ ಹಲಸಿನ ಘಮಘಮ, ಹಲಸಿನ ಮೇಳದಲ್ಲಿ ಬಾಯಿ ರುಚಿ ತಣಿಸಲಿದೆ ಬಿಲ್ವ ಹಣ್ಣಿನ ಜ್ಯೂಸ್

ಮೈಸೂರಿನಲ್ಲಿ ನಾಳೆಯಿಂದ ಎರಡು ದಿನ ಹಲಸಿನ ಘಮಘಮ, ಹಲಸಿನ ಮೇಳದಲ್ಲಿ ಬಾಯಿ ರುಚಿ ತಣಿಸಲಿದೆ ಬಿಲ್ವ ಹಣ್ಣಿನ ಜ್ಯೂಸ್

ಭಾರತದಲ್ಲಿನ ವಿವಿಧ ಹಣ್ಣು, ಆಹಾರೋತ್ಪನ್ನಗಳನ್ನು ಜನ ಬಳಸಲು ಬೇಕಾದ ವೇದಿಕೆ ನಿರ್ಮಿಸುತ್ತಾ ಉತ್ತೇಜನ ನೀಡುವ ಸಹಜ ಸಮೃದ್ದ ಸಂಸ್ಥೆ ಮೈಸೂರಿನಲ್ಲಿ ಶನಿವಾರದಿಂದ ಎರಡು ದಿನ ಹಲಸು ಮೇಳ ಆಯೋಜಿಸಿದೆ.

ಮೈಸೂರಿನಲ್ಲಿ ಶನಿವಾರದಿಂದ ಆರಂಭವಾಗಲಿರುವ ಹಲಸಿನ ಮೇಳಕ್ಕೆ ಅಣಿಯಾದ ಹಣ್ಣಿನ ರಾಶಿ.
ಮೈಸೂರಿನಲ್ಲಿ ಶನಿವಾರದಿಂದ ಆರಂಭವಾಗಲಿರುವ ಹಲಸಿನ ಮೇಳಕ್ಕೆ ಅಣಿಯಾದ ಹಣ್ಣಿನ ರಾಶಿ.

ಮೈಸೂರು ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗಗಳಲ್ಲಿ ವಿವಿಧ ಹಣ್ಣು, ಕಾಳುಗಳು, ಬೀಜಗಳು, ಕೃಷಿ ಉತ್ಪನ್ನಗಳ ಮೇಳಗಳನ್ನು ಆಯೋಜಿಸುತ್ತಾ ಬರುತ್ತಿರುವ ಸಹಜ ಸಮೃದ್ದ ಈ ಬಾರಿ ಮೈಸೂರಿನಲ್ಲಿ ಹಲಸು ಮೇಳವನ್ನು ಮೇ ರಂದು ಹಮ್ಮಿಕೊಂಡಿದೆ. ಜನರಲ್ಲಿ ದೇಸಿ ಹಣ್ಣು, ಆಹಾರ ಮಹತ್ವ ತಿಳಿಸುವ ನಿಟ್ಟಿನಲ್ಲಿ ಸಹಜ ಸಮೃದ್ದ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಈಗಾಗಲೇ ಹಲಸಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದ್ದರೂ ಸಹಜ ಸಮೃದ್ದದ ಮೇಳದಲ್ಲಿ ಖುದ್ದು ಹಲಸು ಬೆಳೆದವರೇ ವಿವಿಧ ಬಗೆಯ ಹಲಸಿನ ಹಣ್ಣನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ಹಲಸಿನ ಕೃಷಿ ಕುರಿತು ತರಬೇತಿ ಕಾರ್ಯಕ್ರಮ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಹಲಸು ಎತ್ತುವ, ತೂಕ ಊಹಿಸುವ ವಿಭಿನ್ನ ಸ್ಪರ್ಧೆಗಳೂ ಈ ಬಾರಿಯ ಆಕರ್ಷಣೆಯಾಗಲಿವೆ. ಮೈಸೂರಿನ ಮೆಟ್ರೋಪೋಲ್‌ ವೃತ್ತದಲ್ಲಿರುವ ನಂಜರಾಜ ಬಹದ್ದೂರು ಛತ್ರದಲ್ಲಿ ಹಲಸಿನ ಮೇಳ ನಡೆಯಲಿದೆ. ಮೇಳಕ್ಕೆ ಬಂದವರು ಹಲಸಿನ ಕುರಿತು ತಿಳಿದುಕೊಳ್ಳಬಹುದು. ಅಲ್ಲದೇ ಹಲಸಿನ ವಿವಿಧ ತಳಿಗಳ ಕಸಿ ಗಿಡಗಳನ್ನು ಖರೀದಿಸಲೂ ಬಹುದು ಎಂದು ಸಹಜ ಸಮೃದ್ದ ತಿಳಿಸಿದೆ.

ಮೈಸೂರಿನ ಹಲಸಿನ ಮೇಳ ಮತ್ತೆ ಬಂದಿದೆ. ಈ ಬಾರಿ ಮಾವಿಗಿನ್ನ ಮೊದಲೇ ಹಲಸಿನ ಹಣ್ಣುಗಳು ಸಿಗುತ್ತಿವೆ.ಹಾಗಾಗಿ ಮೇ 3 ಮತ್ತು 4 ರಂದು ನಂಜರಾಜ ಬಹದ್ದೂರು ಛತ್ರದಲ್ಲಿ ಹಲಸಿನ ಹಬ್ಬ ಏರ್ಪಡಿಸಿದ್ದೇವೆ. ಎಂದಿನಂತೆ ಕೆಂಪು ಹಲಸು, ಚಂದ್ರ ಹಲಸು, ರುದ್ರಾಕ್ಷಿ ಬಕ್ಕೆ ಜೊತೆಗೆ ಕರ್ನಾಟಕದ ಆಯ್ದ ತೋಟಗಳ ವಿಶೇಷ ಹಲಸಿನ ಹಣ್ಣುಗಳನ್ನು ನಿಮಗಾಗಿ ತರಲಿದ್ದೇವೆ. ಮಾವಿನ ಹಣ್ಣೂ ಇರಲಿದೆ.ಹಲಸಿನ ಅಡುಗೆ, ಮೌಲ್ಯವರ್ಧಿತ ಪದಾರ್ಥಗಳು ಮತ್ತು ಉತ್ತಮ ಹಲಸಿನ ತಳಿಯ ಗಿಡಗಳು ನೆಡಲು ಸಿಗಲಿವೆ. ಹಲಸಿನ ತೋಟ ಕಟ್ಟುವವರಿಗಾಗಿ ಅಗತ್ಯ ತರಬೇತಿ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಹಲಸಿನ ಆಟಗಳು, ಹಾಡು- ನೃತ್ಯ ಇರಲಿದೆ ಎಂದು ಆಯೋಜಕರಾದ ಸಹಜ ಸಮೃದ್ದದ ಜಿ. ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.

ಹಲಸಿನ ಹಬ್ಬದಲ್ಲಿ ವೈವಿಧ್ಯಮಯ ಟೊಮೊಟೋ ತಳಿಗಳನ್ನು ಪ್ರದರ್ಶನಕ್ಕೆ ಬರುತ್ತಿವೆ. ಆನೇಕಲ್ಲಿನ‌ ಕಾಂತರಾಜುರವರು 30ಕ್ಕೂ ಹೆಚ್ಚಿನ ಟೊಮೊಟೋ ತಳಿಗಳ ಬೆಳೆಸಿದ್ದಾರೆ. ಅದರ ಸ್ಯಾಂಪಲ್ ಗಳ ಮೇಳಕ್ಕೆ ಕಳಿಸಿಕೊಡಲಿದ್ದಾರೆ. ಅವುಗಳ ಬೀಜ ಕೂಡ ಸಿಗಲಿದೆ.

ಥಾಯಲ್ಯಾಂಡ್ ಮೂಲದ ಕೆಂಪು ಹಲಸಿನ‌ ತಳಿಯಾದ 'ಡೆಂಗ್ ಸೂರ್ಯ' ಕರ್ನಾಟಕ ಮತ್ತು ಕೇರಳದಲ್ಲೂ ಜನಪ್ರಿಯವಾಗುತ್ತಿದೆ. ಆಕರ್ಷಕ ಕೆಂಪು ಸೊಳೆಯ, ಅಂಟು ಕಡಿಮೆ ಇರುವ, ನೆಟ್ಟ 4 ವರ್ಷಕ್ಕೆ ಕಾಯಿ ಶುರುವಾಗುವ ಕೆಂಪು ಹಲಸಿನ ತಳಿ ಇದು. ಹಲಸಿನ ಹಬ್ಬದಲ್ಲಿ' ಡೆಂಗ್ ಸೂರ್ಯ ಹಲಸಿನ ಗಿಡಗಳು ಮಾರಾಟಕ್ಕೆ ಬರಲಿವೆ. ಒಂದಷ್ಟು ಗಿಡಗಳನ್ನು ಕೊಂಡು ನೆಟ್ಟರೆ, ನಾಲ್ಕೈದು ವರ್ಷಕ್ಕೆ ನಿಮ್ಮದೇ ಗಿಡದ ಕೆಂಪು ಹಲಸು ಸವಿಯಬಹುದು.

ಹಲಸಿನ ಮೇಳದಲ್ಲಿ ಬಿಲ್ವ ಹಣ್ಣು!

ದೇವರ ಪೂಜೆಗೆ ' ಬಿಲ್ವ ಪತ್ರೆ' ಬಳಸುವುದು ನಮಗೆಲ್ಲಾ ಗೊತ್ತು. ಕೇಶ ಸೌಂದರ್ಯ ವೃದ್ಧಿಗೂ ಇದು ಬೇಕು. ಆದರೆ ಬಿಲ್ವ ಕಾಯಿಯಿಂದ ಜ್ಯೂಸ್ ಮಾಡುವುದು ನಮಗೆ ಗೊತ್ತಿಲ್ಲ. ಚಕ್ಕೋತ ಗಾತ್ರದ ಕಾಯಿ ಬಿಡುವ ಬಿಲ್ವ ತಳಿಗಳು ಉತ್ತರ ಭಾರತದಲ್ಲಿವೆ. ಬೇಸಿಗೆಯ ತಂಪು‌ ಪಾನೀಯವಾಗಿ ಬಿಲ್ವ ಇಲ್ಲಿ ಬಲು‌ ಜನಪ್ರಿಯ. ಮಾರುಕಟ್ಟೆಯಲ್ಲಿ ಬಿಲ್ವ ಹಣ್ಣುಗಳು ಸಾಮಾನ್ಯ.

ಕರ್ನಾಟಕದಲ್ಲೂ ಜ್ಯೂಸ್ ಬಿಲ್ವ ಬೆಳೆಯಬಹುದು. ಮೈಸೂರಿನಲ್ಲೂ ಜ್ಯೂಸ್ ಬಿಲ್ವದ ಮರವೊಂದು ಇದೆ. ತೋಟಗಾರಿಕಾ ಬೆಳೆಯಾಗಿ ಜ್ಯೂಸ್ ಬಿಲ್ವ ಬೆಳೆಸುವ ಅವಕಾಶ ರೈತರಿಗಿದೆ. ಅಡಿಕೆ ಪತ್ರಿಕೆ ಜ್ಯೂಸ್ ಬಿಲ್ವವನ್ನು ಜನಪ್ರಿಯಗೊಳಿಸುವ ಕೆಲಸ ಮಾಡುತ್ತಿದೆ. ಮೈಸೂರಿನ ಹಲಸಿನ ಮೇಳದಲ್ಲಿ 'ಜ್ಯೂಸ್ ಬಿಲ್ವ'ದ ಹಣ್ಣು,ಜ್ಯೂಸ್ ಮತ್ತು ಗಿಡಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಜಿ. ಕೃಷ್ಣಪ್ರಸಾದ್ ಹೇಳುತ್ತಾರೆ.

ಹಲಸಿನ ತೋಟ ಕಟ್ಟುವವರಿಗೆ ಆಹ್ವಾನ

ಮಳೆಯಾಶ್ರಿತ ಒಣಭೂಮಿ, ಪಾಳು ಬಿದ್ದ ಜಮೀನು, ನೀರಿನ ಕೊರತೆ ಇರುವ ರೈತರು ಹಲಸಿನ ತೋಟವನ್ನು ಅನಾಯಾಸವಾಗಿ ಕಟ್ಟಬಹುದು. ಮೂರು ನಾಲ್ಕು ವರ್ಷ ಆರೈಕೆ ಮಾಡಿದರೆ, ಮುಂದಿನ ನೂರು ವರ್ಷ ಆದಾಯ ತಂದುಕೊಡುವ ಬೆಳೆ ಹಲಸು.

ಮೈಸೂರಿನ ಹಲಸಿನ ಮೇಳದ ಅಂಗವಾಗಿ 3 ಮೇ,ಶನಿವಾರ ಆಸಕ್ತ ರೈತರಿಗಾಗಿ‌' ಹಲಸಿನ ಕೃಷಿ ತರಬೇತಿ ' ಕಾರ್ಯಕ್ರಮ ಏರ್ಪಾಡಾಗಿದೆ.

ಹಲಸು ತಜ್ಞರಿಂದ ಹಲಸಿನ ತಳಿ ಆಯ್ಕೆ, ನೆಡುವ ಕ್ರಮ, ಕಾಳಜಿ, ಪ್ರೂನಿಂಗ್ ಮಾಡುವುದು,ಕೊಯ್ಲು ಸೇರಿದಂತೆ ಹಲವು ಮಾಹಿತಿ ತಿಳಿಸಿಕೊಡಲಾಗುತ್ತದೆ.

ಇದು ಪುಸ್ತಕದ ಪಾಠ ಹೇಳುವ ತರಬೇತಿಯಲ್ಲ. ಹತ್ತಾರು ವರ್ಷಗಳ ಅನುಭವದಿಂದ ರೈತರಿಗೆ ಮಾರ್ಗದರ್ಶನ ನೀಡುವ ಅನುಭವ ಹಂಚಿಕೆ.

ನಿಮ್ಮ ಪರಿಚಯದ ರೈತರಿಗೆ ಟ್ಯಾಗ್ ಮಾಡಿ. ಮನಸು ಮಾಡಿ ಅವರು ಹಲಸು ಬೆಳೆದರೆ; ನಿಮಗೂ ಹಣ್ಣು ತಿನ್ನುವ ಯೋಗ.

ಮಾಹಿತಿಗೆ ಸುಹಾಸ್ - 94821 15495 ಸಂಪರ್ಕಿಸಬಹುದು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.