ಡಾ.ಅಂಬೇಡ್ಕರ್‌ಗೆ ಅವಮಾನ; ನಾಳೆ ಮೈಸೂರು, ಜನವರಿ 9ರಂದು ಹುಬ್ಬಳ್ಳಿ ಧಾರವಾಡ ಬಂದ್, ಏನಿರಲಿದೆ, ಏನು ಇರೋಲ್ಲ
ಡಾ.ಅಂಬೇಡ್ಕರ್ ಅವರಿಗೆ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಮೈಸೂರು ಹಾಗೂ ಹುಬ್ಬಳ್ಳಿ-ಧಾರವಾಡ ಬಂದ್ ಗೆ ಕರೆ ನೀಡಿವೆ.
ಮೈಸೂರು/ ಹುಬ್ಬಳ್ಳಿ: ಸಂವಿಧಾನ ತಜ್ಞ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ಅವಹೇಳಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವರ್ತನೆಯನ್ನು ಖಂಡಿಸಿ ದಲಿತ ಸಂಘಟನೆಗಳು. ಪ್ರಗತಿಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. 2025 ರ ಜನವರಿ 7 ರ ಮಂಗಳವಾರ ಮೈಸೂರು ನಗರದಲ್ಲಿ ಬಂದ್ ನಡೆದರೆ, ಜನವರಿ 9ರ ಗುರುವಾರದಂದು ಹುಬ್ಬಳ್ಳಿ ಧಾರವಾಡ ನಗರದಲ್ಲಿ ಬಂದ್ ನಡೆಯಲಿದೆ. ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಪ್ರಮುಖ ವಹಿವಾಟು ಪ್ರದೇಶದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಂದ್ ಆಗುವ ಸಾಧ್ಯತೆಯಿದೆ. ಮೈಸೂರಿನಲ್ಲಿ ಹೊಟೇಲ್‌ಗಳು ನೈತಿಕವಾಗಿ ಬೆಂಬಲ ಮಾತ್ರ ನೀಡುವುದಾಗಿ ಹೇಳಿವೆ. ಪ್ರತಿಭಟನೆಯನ್ನು ದಾಖಲಿಸಿ ಮನವಿ ಸಲ್ಲಿಸುವ ಸಾಧ್ಯತೆಗಳಿವೆ. ಶಾಲಾ, ಕಾಲೇಜು ರಜೆ ವಿಚಾರವಾಗಿ ಯಾವುದೇ ತೀರ್ಮಾನ ಆಗಿಲ್ಲ. ಬಂದ್, ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆ ಹಾಕಲು ಮೈಸೂರು ಪೊಲೀಸರು ಮುಂದಾಗಿದ್ದಾರೆ. ಬಸ್ ಸಹಿತ ವಾಹನ ಸಂಚಾರವೂ ಸಾಮಾನ್ಯವಾಗಿ ಇರುವ ಸಾಧ್ಯತೆಗಳಿವೆ.
ಅಂಬೇಡ್ಕರ್ ಬಗ್ಗೆ ಹೇಳಿಕೆ ಖಂಡಿಸಿ ನಾಳೆ ಮೈಸೂರು ಬಂದ್ ಗೆ ಡಾ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯಿಂದ ಕರೆ ನೀಡಲಾಗಿದೆ. ಮೈಸೂರು ಬಂದ್ ಗೆ ವಿವಿಧ ಸಂಘಟನೆಗಳು. ಬೆಂಬಲ ಸೂಚಿಸಿವೆ. ನಾಳೆ ಮೈಸೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗದಿರಲು ಪೌರ ಕಾರ್ಮಿಕರು ನಿರ್ಧಾರ ಮಾಡಿದ್ದಾರೆ. ಪ್ರಗತಿಪರ ಸಂಘಟನೆ, ಅಂಬೇಡ್ಕರ್ ಸಂಘ, ಪೌರ ಕಾರ್ಮಿಕರ ಸಂಘಗಳ ಬೆಂಬಲ ನೀಡಿರುವುದರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಮೈಸೂರು ಬಂದ್ ಗೆ ರೈತ ಸಂಘಟನೆಗಳ ಬೆಂಬಲವೂ ದೊರೆತಿದೆ. ಕರ್ನಾಟಕ ರಾಜ್ಯ ರೈತ ಸಂಘ ಬಡಗಲಪುರ ನಾಗೇಂದ್ರ ಬಣ ಬೆಂಬಲ ನೀಡಿದ್ದು. ಅಮಿತ್ ಶಾ ಹೇಳಿಕೆ ಖಂಡಿಸುವುದಾಗಿ ಹೇಳಿದ್ದಾರೆ.
ಅಂಬೇಡ್ಕರ್ ಬಗ್ಗೆ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ನಾಳೆ ಮೈಸೂರು ಬಂದ್ ಗೆ ಕರೆ ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿದೆ. ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿದಿನಗಳು ಬೆಂಬಲ ಕೊಡುತ್ತೇವೆ. ಬಂದ್ ನಲ್ಲಿ ನಾವು ಕೂಡ ಭಾಗಿಯಾಗುತ್ತೇವೆ. ಎಲ್ಲಾ ಧರ್ಮದ ಗುರುಗಳನ್ನು ಬಂದ್ ಗೆ ಅಹ್ವಾನ ನೀಡುತ್ತೇವೆ. ಬಂದ್ ಗೆ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ ಜೆ ವಿಜಯ್ ಕುಮಾರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅವರ ಪ್ರಕಾರ, ಹೊಟೇಲ್ ಗಳಲ್ಲಿ ಎಲ್ಲಾ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಬಂದ್ ಗೆ ಬೆಂಬಲ ನೀಡುತ್ತೇವೆ. ಹೊಟೆಲ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
9ರಂದು ಹುಬ್ಬಳ್ಳಿ ಧಾರವಾದ ಬಂದ್
ಕೇಂದ್ರ ಗೃಹ ಸಚಿವ ಬಾಬಾ ಸಾಹೇಬ್ ಅಂಬೇಡ್ಕರ್‌ರ ಕುರಿತು ಸಂಸತ್ ಅಧಿವೇಶನದಲ್ಲಿ ಅವಮಾನಕರ ಹೇಳಿಕೆ ನೀಡಿರುವುದನ್ನು ಖಂಡಿಸಿ ಮತ್ತು ಅವರ ರಾಜೀನಾಮೆಗೆ ಆಗ್ರಹಿಸಿ ನೂರಕ್ಕೂ ಹೆಚ್ಚು ಸಂಘಟನೆಗಳು ಜನವರಿ 9ರಂದು ಗುರುವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಬಂದ್‌ಗೆ ಕರೆ ನೀಡಿವೆ.
ಅಮಿತ್ ಶಾ ಹೇಳಿಕೆ ಖಂಡಿಸಿ ಅಂದು ಬೆಳಿಗ್ಗೆ 6 ರಿಂದ ಸಾಯಂಕಾಲ 6 ರವರೆಗೆ ಬಂದ್ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಈ ಬಂದ್‌ಗೆ ಅವಳಿನಗರದ ಸುಮಾರು ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಪಕ್ಷಾತೀತವಾಗಿ ಈ ಬಂದ್‌ಗೆ ಕರೆ ನೀಡಿದ್ದು, ವಿವಿಧ ಬಡಾವಣೆಗಳಿಂದ ಮೆರವಣಿಗೆ ಮೂಲಕ ಆಗಮಿಸಿ ಹುಬ್ಬಳ್ಳಿಯಲ್ಲಿ ಚನ್ನಮ್ಮ ವೃತ್ತ ಮತ್ತು ಧಾರವಾಡ ದ ಜುಬಿಲಿ ವ್ರತ್ತದಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.
ಸಂವಿಧಾನ ಮತ್ತು ಸಂವಿಧಾನಶಿಲ್ಪಿಯನ್ನ ಗೌರವಿಸೋ ಮೀಸಲು ವರ್ಗದ ಎಲ್ಲ ಸಮುದಾಯದ ಪ್ರಮುಖರು ಭಾಗವಹಿಸುವ ಮೂಲಕ ದೇಶಪ್ರೇಮ ಮೆರೆಯಲು ಮನವಿ ಮಾಡಿದ ಮುಖಂಡರು, ಅವಳಿನಗರದಲ್ಲಿ ಸಾರ್ವಜನಿಕರು ಅಂದು ಯಾವುದೆ ಕೆಲಸ ಕಾರ್ಯ ಗಳನ್ನ ಹಮ್ಮಿಕೊಳ್ಳದೇ ವಾಹನ ಸಂಚಾರ ಮತ್ತು ವಾಣಿಜ್ಯ ವ್ಯವಹಾರ ಹೋಟೆಲ್ ಸಿನಿಮಾ ಆಟೋ ,ಶಾಲಾ ಕಾಲೇಜು ,ಸರ್ಕಾರಿ ಕಛೇರಿ/ವಾಹನ ಸಹಿತ ಸಕಲ ಚಟುವಟಿಕೆ ಬಂದ್ ಮಾಡಲು ಮುಖಂಡರು ವಿನಂತಿಸಿದರು.