ಸಿಎಂ ಸಿದ್ದರಾಮಯ್ಯ ತವರಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ: ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಊರು ಬಿಡುತ್ತಿರುವ ಮಹಿಳೆಯರು
ಕನ್ನಡ ಸುದ್ದಿ  /  ಕರ್ನಾಟಕ  /  ಸಿಎಂ ಸಿದ್ದರಾಮಯ್ಯ ತವರಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ: ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಊರು ಬಿಡುತ್ತಿರುವ ಮಹಿಳೆಯರು

ಸಿಎಂ ಸಿದ್ದರಾಮಯ್ಯ ತವರಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ: ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಊರು ಬಿಡುತ್ತಿರುವ ಮಹಿಳೆಯರು

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಹಲವು ಕಡೆಗಳಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಸಾಲದ ವಸೂಲಾತಿ ಕಿರುಕುಳಕ್ಕೆ ಊರು ಬಿಡುತ್ತಿರುವ ಕುರಿತು ದೂರುಗಳು ವ್ಯಾಪಕವಾಗಿವೆ.

ಮೈಸೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮೈಕ್ರೋಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ಹಲವರು ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ.
ಮೈಸೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮೈಕ್ರೋಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ಹಲವರು ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ.

ಮೈಸೂರು: ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯೂ ಸೇರಿದಂತೆ ಚಾಮರಾಜನಗರ ಭಾಗದ ಹಲವು ಕಡೆಗಳಲ್ಲಿ ಮೈಕ್ರೋಫೈನಾನ್ಸ್‌ಗಳ ಹಾವಳಿಯಿಂದಾಗಿ ಜನರಿಗೆ ಸಾಲ ಪಾವತಿಸಲು ತೊಂದರೆಯಾಗಿದೆ. ಕೆಲವು ಕಡೆಗಳಲ್ಲಿ ವಾರದ ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬರತೊಡಗಿವೆ. ಚಾಮರಾಜನಗರ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಹಾಯವಾಣಿಯನ್ನೂ ಆರಂಭಿಸಿದೆ. ಅಧಿಕಾರಿಗಳ ತಂಡವೇ ಗ್ರಾಮಗಳಿಗೆ ಭೇಟಿ ನೀಡುತ್ತಿದೆ. ಆದರೆ ಮೈಸೂರು ಜಿಲ್ಲೆಯಲ್ಲಿ ಅಧಿಕೃತವಾಗಿ ಯಾವುದೇ ದೂರು ಬಾರದೇ ಇರುವುದರಿಂದ ಜಿಲ್ಲಾ ಪೊಲೀಸರು ಬೆಳವಣಿಗೆಗಳ ಕುರಿತು ಗಮನ ಹರಿಸುತ್ತಿದ್ದಾರೆ. ಹಲವು ಗ್ರಾಮಗಳಲ್ಲಿ ಈ ಬೆಳವಣಿಗೆಗಳು ಆತಂಕವನ್ನಂತೂ ಹುಟ್ಟು ಹಾಕಿವೆ.

ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಕೆಲವು ಶಾಸಕರು ಮಾತನಾಡಿ ಮೈಕ್ರೋ ಫೈನಾನ್ಸ್‌ಗಳು ನೀಡುವ ಸಾಲಕ್ಕೆ ಶೇಕಡ 40 ಪರ್ಸೆಂಟ್ ಬಡ್ಡಿ ವಿಧಿಸಲಾಗುತ್ತಿದೆ. ಇದರಿಂದ ಸಾಲಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಹಾಗಾಗಿ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದುದ್ದನ್ನ ಇಲ್ಲಿ ಸ್ಪರಿಸಬಹುದು. ಹಾಗಾಗಿ ಮೈಕ್ರೋಫೈನಾನ್ಸ್ ಗಳ ಇಂತಹ ಕೆಟ್ಟ ನಿರ್ಧಾರಗಳಿಗೆ ಕಡಿವಾಣ ಹಾಕುವಂತೆ ಸಾಲಗಾರರು ಹಾಗೂ ಗ್ರಾಮದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿಎಂ ತವರಲ್ಲೂ ಉಂಟು

ಮೀಟರ್ ಬಡ್ಡಿ ದಂಧೆಗಿಂತಲೂ ಕಠೋರವಾಗಿರುವ ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದಾಗಿ ಇದೀಗ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ನಲುಗಿ ಹೋಗಿವೆ. ಸಾಲದ ಆಸೆಗಾಗಿ ಸಾಲ ಪಡೆದ ಕುಟುಂಬಗಳು ಹೆತ್ತು ಹೊತ್ತು ಸಾಕಿದ ಮಕ್ಕಳನ್ನು ತಬ್ಬಲಿ ಮಾಡಿ, ದುಡಿಯುವ ತಂದೆ ತಾಯಂದಿರು ಮನೆಯನ್ನೇ ಬಿಟ್ಟುಹೋಗಿದ್ದಾರೆ. ಅದೆಷ್ಟೋ ಮನೆಗಳಲ್ಲಿ ಗಂಡ ಇದ್ದರೆ ಹೆಂಡತಿ ಇಲ್ಲ, ಹೆಂಡತಿ ಇದ್ದರೆ ಗಂಡ ಇಲ್ಲದೇ ಹಲವಾರು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ ಎನ್ನುವ ಮಾತುಗಳು ಹೇಳಿ ಬರುತ್ತಿವೆ.

ಇದು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಬೇಸತ್ತ ಜನರು ಗ್ರಾಮಗಳನ್ನೇ ತೊರೆಯುತ್ತಿರುವ ಪ್ರಕರಣಗಳು ನಂಜನಗೂಡು ತಾಲೂಕಿನಾದ್ಯಂತ ಬೆಳಕಿಗೆ ಬಂದಿವೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು, ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ, ಮೈಕ್ರೋ ಫೈನಾನ್ಸ್ ಗಳಿಗೆ ಹೆದರಿರುವ ಜನರು ಗ್ರಾಮಗಳನ್ನೇ ತೊರೆಯುತ್ತಿದ್ದಾರೆ.

ನಂಜನಗೂಡು ತಾಲ್ಲೂಕಿನ ಹಲವು ಕಡೆ ಮೈಕ್ರೋಫೈನಾನ್ಸ್‌ನವರ ಕಿರುಕುಳದ ಮಾಹಿತಿಯಿದೆ. ನಮಗೆ ಯಾವುದೇ ದೂರು ಬಂದಿಲ್ಲ. ಆದರೂ ತೊಂದರೆ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಗಮನಹರಿಸುತ್ತೇವೆ ಎನ್ನುವುದು ಮೈಸೂರು ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ.ಮಲ್ಲಿಕ್‌ ಅವರ ವಿವರಣೆ.

ಹೀಗಿದೆ ಕಿರುಕುಳದ ಪರಿ

ಸಾಲ ಪಡೆದವರ ಮನೆಗಳ ಮುಂಭಾಗದಲ್ಲಿ ನಾಮ ಫಲಕಗಳನ್ನು ಅಳವಡಿಸಿ ಅವರ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಸಾಲ ಬಾಕಿ ಇರುವ ಕೆಲ ಮನೆಗಳಿಗೆ ಇವರೇ ಬೀಗ ಹಾಕಿಕೊಂಡು ಕುಟುಂಬದವರನ್ನು ಹೊರದಬ್ಬಿರುವ ಘಟನೆಗಳೂ ಸಹ ಸಂಭವಿಸಿದೆ ಎನ್ನಲಾಗಿದೆ. ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆದ ಪರಿಣಾಮ ಕೆಲವು ಕುಟುಂಬಸ್ಥರು, ತಮ್ಮ ಗ್ರಾಮಗಳಲ್ಲಿ ಸಾವು ನೋವು ಸಂಭವಿಸಿದಾಗ ಭಾಗವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲೆಡೆ ಗ್ರಾಮೀಣ ಪ್ರದೇಶದ ಜನತೆ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿದರೆ, ಈ ಗ್ರಾಮಗಳ ಕೆಲವು ಕುಟುಂಬಗಳು ಮೈಕ್ರೋ ಫೈನಾನ್ಸ್ ಗಳವರ ಹಾವಳಿಗೆ ಬೆದರಿ ಗ್ರಾಮದತ್ತ ಮುಖ ಮಾಡಲು ಸಾಧ್ಯವಾಗದಂತಾಗಿದೆ ಎಂದು ಶಿರಮಳ್ಳಿ ಗ್ರಾಮದ ಹುಚ್ಚಯ್ಯ ಆರೋಪಿಸುತ್ತಾರೆ.

ಇನ್ನು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಜಾಹೀರಾತು ಮುಖಾಂತರ '"ಕನಸು ನಿಮ್ಮದು ಸಾಲ ನಮ್ಮದು" ಎಂದು ಸಾಲದ ಆಮಿಷಗಳನ್ನು ಒಡ್ಡಿ ಬಲವಂತವಾಗಿ ಸಾಲ ಕೊಡುತ್ತಿರುವ ಮೈಕ್ರೋ ಫೈನಾನ್ಸ್ ಗಳು ನಂತರ ವಸೂಲಿಗಾಗಿ ಕಠಿಣ ಮಾರ್ಗಗಳನ್ನ ಹಿಡಿದು ಕಿರುಕುಳ ಕೊಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲೂ

ಚಾಮರಾಜನಗರ ತಾಲ್ಲೂಕಿನ ದೇಶವಳ್ಳಿ, ಹೆಗ್ಗವಾಡಿಪುರ, ಕೂಡ್ಲೂರು ಗ್ರಾಮದಲ್ಲೂ ಇಂತದೇ ಪ್ರಕರಣಗಳು ವರದಿಯಾಗಿವೆ. ಸಾಲ ಪಡೆದವರನ್ನು ಬೆದರಿಸಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದ್ದಾರೆ ಎಂದು ಸಂತೇಮರಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಿರುಕುಳ ನೀಡುವವರ ವಿರುದ್ದ ಕ್ರಮಕ್ಕೆ ಪೊಲೀಸರೂ ಸಿದ್ದತೆ ಮಾಡಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಹಾಗೂ ಎಸ್ಪಿ ಡಾ.ಬಿ.ಟಿ.ಕವಿತಾ ಅವರು ಮುನ್ನೆಚ್ಚರಿಕೆ ವಹಿಸಿದ್ದು, ಚಾಮರಾಜನಗರ ತಹಸಿಲ್ದಾರ್‌ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಗಳಿಗೂ ಭೇಟಿ ಜನರಿಗೆ ವಿಶ್ವಾಸ ತುಂಬಿದೆ. ಭಯ ಬೀಳುವ ಅಗತ್ಯವಿಲ್ಲ. ಬೆದರಿಕೆ ಹಾಕುವ ಪ್ರಯತ್ನ ಮಾಡಿದರೆ ಸಹಾಯವಾಣಿಗೆ ಕರೆ ಮಾಡುವಂತೆಯೂ ಸೂಚಿಸಿದ್ದಾರೆ.

ಯಾವ ಸಂಸ್ಥೆಗಳ ವಿರುದ್ದ ದೂರು

ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರ ಹಾಗೂ ದೇಶವಳ್ಳಿ ಗ್ರಾಮಸ್ಥರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಹೆಗ್ಗವಾಡಿಪುರದ ದಿವ್ಯಮಣಿ ಶ್ರೀಕಂಠಸ್ವಾಮಿ ಎಂಬುವವರಿಗೆ ಬೆದರಿಕೆ ಹಾಕಲಾಗಿದೆ. ಅದರಲ್ಲೂ ಐಡಿಎಸ್‌ಸಿ, ಬಿಎಸ್‌ಎಸ್‌, ಆರ್‌ಬಿಎನ್‌ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಿಂದ ಸಾಲ ಪಡದುಕೊಂಡಿದ್ದರೂ ಸಂಸ್ಥೆ ಪ್ರತಿನಿಧಿಗಳು ಸಾಲ ಪಾವತಿಸುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇದಲ್ಲದೇ ಗ್ರಾಮದ ಶೋಭ ಮಹದೇವೇಗೌಡ, ಸುಮಾ ಶಿವಣ್ಣ, ಶಾರದಾ ಮಹೇಶ್‌, ನಾಗಮ್ಮಪುಟ್ಟಪ್ಪ, ಪುಟ್ಟತಾಯಮ್ಮ ಅವರಿಗೂ ಕಿರುಕುಳದಿಂದ ಊರು ಬಿಟ್ಟು ಹೋಗಿರುವ ಮಾಹಿತಿಯನ್ನೂ ಉಲ್ಲೇಖಿಸಲಾಗಿದೆ.

 

Whats_app_banner