Mysore Crime News: ಸಾಲ ತೀರಿಸಲು ಸ್ನೇಹಿತೆಯನ್ನೇ ಕೊಂದು ಚಿನ್ನದ ಸರ ಎಗರಿಸಿ ಸಿಕ್ಕಿಬಿದ್ದ ಮೈಸೂರು ಮಹಿಳೆ
Mysore Crime News: ಸಾಲ ಎನ್ನುವುದು ಸ್ನೇಹವನ್ನೂ ಮರೆಸಿ ಕೆಲವೊಮ್ಮೆ ಅನಾಹುತಕ್ಕೂ ದಾರಿ ಮಾಡಿಕೊಡಬಹುದು.ಮೈಸೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಮಹಿಳೆಯೊಬ್ಬಳು ಸ್ನೇಹಿತೆಯನ್ನೇ ಕೊಂದು ಜೈಲು ಸೇರಿರುವ ಪ್ರಕರಣವಿದು.

Mysore Crime News: ಅವರಿಬ್ಬರೂ ಹಲವಾರು ವರ್ಷಗಳಿಂದ ಆತ್ಮೀಯ ಸ್ನೇಹಿತರು. ಜತೆಯಲ್ಲಿಯೆ ಹೆಚ್ಚು ಹೊತ್ತು ಕಳೆಯೋರು. ಕಷ್ಟ ಸುಖಗಳನ್ನು ಹಂಚಿಕೊಳ್ಳೋರು. ಒಬ್ಬ ಮಹಿಳೆ ಪೊಲೀಸ್ ನೌಕರರ ಪತ್ನಿ. ಇನ್ನೊಬ್ಬಾಕೆ ಅಡುಗೆ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದವರು. ಆತ್ಮೀಯರಾಗಿದ್ದ ಕಾರಣದಿಂದ ಎರಡು ಕುಟುಂಬಗಳ ನಡುವೆ ಒಡನಾಟವೂ ಚೆನ್ನಾಗಿತ್ತು. ಆದರೆ ಇವರಲ್ಲಿ ಒಬ್ಬ ಮಹಿಳೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಳು. ಅಲ್ಲಲ್ಲಿ ಹಣ ಹೊಂದಿಸಿ ಸಾಕಾಗಿ ಹೋಗಿತ್ತು. ಸ್ನೇಹಿತೆಯೊಂದಿಗೂ ಈ ವಿಚಾರ ಮಾತನಾಡಿದ್ದಳು ಕೂಡ. ಆದರೆ ಕಳೆದ ವಾರ ಅದೇನಾಯಿತೋ. ಸಾಲ ತೀರಿಸಲು ಆಕೆ ದೊಡ್ಡ ಸ್ಕೆಚ್ ಅನ್ನೇ ಹಾಕಿದಳು. ಸ್ನೇಹಿತೆಯನ್ನು ಕೊಂದು ಆಕೆಯ ಚಿನ್ನದ ಸರ ಎಗರಿಸುವ ಯೋಜನೆ ಹಾಕಿ ಅದನ್ನು ಕಾರ್ಯಗತಗೊಳಿಸಿದಳು. ಸ್ನೇಹಿತೆಯನ್ನು ಕೊಂದು ಚಿನ್ನಾಭರಣ ಕದ್ದು ಈಗ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾಳೆ.
ಈ ಘಟನೆ ನಡೆದಿರುವುದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹಾಗೂ ಪಾರಂಪರಿಕ ನಗರಿ ಎನ್ನುವ ಅಭಿದಾನಕ್ಕೆ ಪಾತ್ರವಾಗಿರುವ ಮೈಸೂರಿನಲ್ಲಿ. ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಕೆಂಪ ಚಲುವಮ್ಮಣ್ಣಿ ಕೆಸಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಸುಲೋಚನಾ ಎಂಬುವವರು ಕೊಲೆಯಾಗಿದ್ದು ಆಕೆಯ ಸ್ನೇಹಿತೆ ಶಕುಂತಲಾ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾಳೆ.
ಆಗಿದಾದ್ದರೂ ಏನು
ಕೊಲೆಯಾದ ಸುಲೋಚನಾ (62) ಹಾಗೂ ಕೊಲೆ ಅರೋಪದಡಿ ಬಂಧನಕ್ಕೆ ಒಳಗಾಗಿರುವ ಬಡಾವಣೆಯ ನಿವಾಸಿ ಶಕುಂತಲಾ (42) ಅವರು ಕೆಲ ವರ್ಷದಿಂದ ಸ್ನೇಹಿತರು. ಸಮೀಪದಲ್ಲಿಯೇ ಮನೆಗಳು ಇದ್ದುದರಿಂದ ಒಡನಾಟವಿತ್ತು. ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಸುಲೋಚನಾ ಅವರೂ ಶಕುಂತಲಾ ಅವರನ್ನು ನಂಬಿದ್ದರು. ಇಬ್ಬರು ಮನೆಗಳಿಗೆ ಬಂದು ಹೋಗುತ್ತಿದ್ದರು. ಇದು ಎರಡು ಕುಟುಂಬದ ವಿಶ್ವಾಸಕ್ಕೂ ಕಾರಣವಾಗಿತ್ತು.
ಸುಲೋಚನಾ ಅವರ ಪತಿ ಗಂಗಣ್ಣ ಪೊಲೀಸ್ ಇಲಾಖೆಯ ನಿವೃತ್ತ ನೌಕರ. ಶಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡಿತ್ತು.
ಅನುಮಾನಾಸ್ಪದ ಸಾವು
ಮಾರ್ಚ್ 5ರಂದು ಸುಲೋಚನಾ ಅವರ ಸಾವಾಗಿತ್ತು. ಈ ವೇಳ ಮನೆಯಲ್ಲಿ ಯಾರು ಇರಲಿಲ್ಲ. ಶಕುಂತಲಾ ಮಾತ್ರ ಇದ್ದಳು. ಈ ವೇಳೆ ಮೃತಪಟ್ಟಿದ್ದ ಸುಲೋಚನಾ ಅವರ ಸಾವಿನ ಕುರಿತು ಶಕುಂತಲಾ ಮಾಹಿತಿ ನೀಡಿದ್ದಳು. ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಕುಟುಂಬದವರಿಗೆ ತಿಳಿಸಿದ್ದಳು. ಮನೆಯವರು ನಂಬಿದ್ದರು. ಇದಾದ ನಂತರ ಅನುಮಾನಗೊಂಡ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನಜರ್‌ಬಾದ್ ಪೊಲೀಸರಿಗೆ ಶಾಕಿಂಗ್ ಮಾಹಿತಿ ತಿಳಿದಿತ್ತು. ಶಕುಂತಲಾನೇ ಉಸಿರುಗಟ್ಟಿಸಿ ಸುಲೋಚನಾ ಅವರನ್ನು ಕೊಲೆ ಮಾಡಿ ಸುಳ್ಳು ಮಾಹಿತಿ ನೀಡಿರುವುದನ್ನು ಪೊಲೀಸರು ಬಯಲು ಮಾಡಿದ್ದರು.
ಬಯಲಾದ ಕೊಲೆ ಸತ್ಯ
ಸಾಲದ ಕಾರಣದಿಂದ ಸುಲೋಚನಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಅವರ ಕತ್ತಿನಲ್ಲಿದ್ದ ಭಾರೀ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿ ಅದನ್ನು ಗಿರವಿಯಿಟ್ಟು ಒಂದೂವರೆ ಲಕ್ಷ ಹಣ ಪಡೆದು ಸಾಲ ತೀರಿಸಿದ್ದಾಗಿಯೂ ಶಕುಂತಲಾ ಒಪ್ಪಿಕೊಂಡಿದ್ದಳು. ಬಳಿಕ ಶಕುಂತಲಾಳನ್ನು ನಜರ್‌ಬಾದ್ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈಗ ಆಕೆಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಜೈಲು ಸೇರಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪರಿಚಿತಳೆಂದು ಅದೇ ಬಡಾವಣೆಯ ಮಹಿಳೆಯನ್ನು ಹತ್ತಿರ ಬಿಟ್ಟುಕೊಂಡರೆ ಈ ರೀತಿ ಕೃತ್ಯ ಎಸಗಿದ್ದಾಳೆ. ಅತಿಯಾಗಿ ನಂಬಿದವರನ್ನೇ ಕೊಂದು ಚಿನ್ನಾಭರಣ ದೋಚಿದ್ದೂ ಅಲ್ಲದೇ ಸುಳ್ಳು ಹೇಳಿದ್ದಾಳೆ.ಇಂತವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸುಲೋಚನಾ ಕುಟುಂಬದ ಸದಸ್ಯರು ಬೇಸರ ಹೊರ ಹಾಕಿದರು.
