ಪ್ರೀತಿಸಿದ ಯುವಕನ ಜತೆ ಹಿರಿ ಮಗಳು ಪರಾರಿ, ಮನನೊಂದು ಕಿರಿ ಮಗಳೊಂದಿಗೆ ಕಿರು ಜಲಾಶಯಕ್ಕೆ ಹಾರಿದ ದಂಪತಿ; ಮೂವರ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರೀತಿಸಿದ ಯುವಕನ ಜತೆ ಹಿರಿ ಮಗಳು ಪರಾರಿ, ಮನನೊಂದು ಕಿರಿ ಮಗಳೊಂದಿಗೆ ಕಿರು ಜಲಾಶಯಕ್ಕೆ ಹಾರಿದ ದಂಪತಿ; ಮೂವರ ಸಾವು

ಪ್ರೀತಿಸಿದ ಯುವಕನ ಜತೆ ಹಿರಿ ಮಗಳು ಪರಾರಿ, ಮನನೊಂದು ಕಿರಿ ಮಗಳೊಂದಿಗೆ ಕಿರು ಜಲಾಶಯಕ್ಕೆ ಹಾರಿದ ದಂಪತಿ; ಮೂವರ ಸಾವು

ಹಿರಿಯ ಮಗಳು ಪ್ರಿಯತಮನ ಜತೆಗೆ ಓಡಿ ಹೋದಳು ಎನ್ನುವ ಕಾರಣಕ್ಕೆ ಮನ ನೊಂದ ದಂಪತಿ ಕಿರಿ ಮಗಳೊಂದಿಗೆ ಹಗ್ಗ ಕಟ್ಟಿಕೊಂಡು ಹೆಬ್ಬಳ್ಳ ಜಲಾಶಯಕ್ಕೆ ಹಾರಿ ಜೀವ ಬಿಟ್ಟಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹಿರಿ ಮಗಳು ಮನೆಬಿಟ್ಟು ಹೋಗಿದ್ದರಿಂದ ದಂಪತಿ ಇನ್ನೊಬ್ಬಳ ಮಗಳೊಂದಿಗೆ ಸಾವಿಗೆ ಶರಣಾದ ಘಟನೆ ನಡೆದಿದೆ.
ಹಿರಿ ಮಗಳು ಮನೆಬಿಟ್ಟು ಹೋಗಿದ್ದರಿಂದ ದಂಪತಿ ಇನ್ನೊಬ್ಬಳ ಮಗಳೊಂದಿಗೆ ಸಾವಿಗೆ ಶರಣಾದ ಘಟನೆ ನಡೆದಿದೆ.

ಮೈಸೂರು: ಮನೆಯವರ ವಿರೋಧದ ನಡುವೆಯೂ ತಾನು ಪ್ರೀತಿಸುತ್ತಿದ್ದ ಯುವಕನಿಗಾಗಿ ಮಗಳು ಮನೆ ಬಿಟ್ಟು ಹೋದ ಕಾರಣಕ್ಕೆ ಮನನೊಂದ ಒಂದೇ ಕುಟುಂಬದ ದಂಪತಿ ಹಾಗೂ ಇನ್ನೊಬ್ಬ ಮಗಳು ಮೂವರು ಹೆಬ್ಬಳ್ಳ ಕಿರು ಜಲಾಶಯಕ್ಕೆ ಜಿಗಿದು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೂದನೂರಿನಲ್ಲಿ ನಡೆದಿದೆ. ಹಗ್ಗ ಕಟ್ಟಿಕೊಂಡು ಶನಿವಾರ ಕೆರೆಯಲ್ಲಿ ಮುಳುಗಿದ್ದ ಮೂವರ ಮೃತ ದೇಹಗಳು ಪತ್ತೆಯಾಗಿವೆ. ಬೂದನೂರು ಗ್ರಾಮದ ನಿವಾಸಿಗಳಾದ ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಮೃತ ಮೃತಪಟ್ಟವರು. ಮಹದೇವಸ್ವಾಮಿಯವರ ಹಿರಿಯ ಪುತ್ರಿ ಅರ್ಪಿತಾ ಪ್ರೀತಿಸುತ್ತಿದ್ದ ಹುಡುಗನ ಜೊತೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎಚ್‌ಡಿಕೋಟೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗಳು ಪರಿಚಯಸ್ಥ ಯುವಕನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗುವುದಾಗಿಯೂ ಹೇಳಿದ್ದಳು. ಆದರೆ ಮನೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಶಿಕ್ಷಣ ಮುಗಿದ ನಂತರ ನೋಡೋಣ ಎಂದು ಪೋಷಕರು ಹೇಳಿದ್ದರು. ಆದರೆ ಮಗಳು ಪೋಷಕರ ವಿರೋಧವನ್ನೂ ಲೆಕ್ಕಿಸದೇ ಮಗಳು ಮನೆಬಿಟ್ಟು ಪ್ರಿಯತಮನ ಜತೆಗೆ ಹೋಗಿದ್ದಳು. ಇದರಿಂದ ಬೇಸರಗೊಂಡ ದಂಪತಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಹಗ್ಗವನ್ನು ಕಟ್ಟಿಕೊಂಡು ಮೂವರು ಗ್ರಾಮದ ತುಂಬಿರುವ ಹೆಬ್ಬಳ ಕಿರು ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ಧಾರೆ. ಮೂವರು ಕೆರೆಗೆ ಹಾರಿರುವ ವಿಷಯ ತಿಳಿದು ಎಚ್‌ಡಿಕೋಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿತ್ತು. ಶನಿವಾರ ಸಂಜೆ ಹೊತ್ತಿಗೆ ಮೃತದೇಹಗಳು ಪತ್ತೆಯಾಗಿವೆ. ನಿರಂತರ ಪ್ರಯತ್ನ ನಡೆಸಿದ ಮೂವರ ಮೃತ ದೇಹಗಳು ಒಂದೇ ಸ್ಥಳದಲ್ಲಿ ಪತ್ತೆಯಾದವು ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತರು ಡೆತ್‌ ನೋಟ್‌ ಬರೆದಿಟ್ಟಿದ್ದು, ಮಗಳ ನಡವಳಿಕೆಯಿಂದ ಬೇಸತ್ತು ಹಾಗೂ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಉಲ್ಲೇಖಿಸಿದ್ಧಾರೆ.

ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಪೊಲೀಸರು ನಂತರ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

(ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.)

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.