Arjuna Memorial: ದಸರಾ ಕ್ಯಾಪ್ಟನ್ ಅರ್ಜುನನ ಸ್ಮಾರಕ ಉದ್ಘಾಟನೆಗೆ ಕೊನೆಗೂ ಅಣಿ, ಫೆಬ್ರವರಿಯಲ್ಲೇ ಜೋಡಿ ಸ್ಮಾರಕ ಸಮರ್ಪಣೆ
Arjuna Memorial: ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ ಸ್ಮಾರಕ ಹಾಸನ ಜಿಲ್ಲೆಯ ಯಸಳೂರು ಜತೆಗೆ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಬಳ್ಳೆಯಲ್ಲೂ ಉದ್ಘಾಟನೆಯಾಗಲಿದೆ.

Arjuna Memorial: 14 ತಿಂಗಳ ಹಿಂದೆ ಹಾಸನ ಜಿಲ್ಲೆಯ ಯಸಳೂರಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಹುತ್ಮಾತನಾಗಿದ್ದ ಮೈಸೂರು ದಸರಾ ಅಂಬಾರಿ ಹೊತ್ತ ಆನೆ ಅರ್ಜುನನ ಸ್ಮಾರಕ ಉದ್ಘಾಟನೆಗೆ ಸಿದ್ದವಾಗಿದೆ. ಕಳೆದ ವರ್ಷವೇ ಸ್ಮಾರಕವನ್ನು ಎಸಳೂರಿನಲ್ಲಿ ಉದ್ಘಾಟಿಸಲಾಗುತ್ತದೆ ಎಂದು ಹೇಳಲಾಗಿತ್ತಾದರೂ ನಾನಾ ಕಾರಣಗಳಿಂದ ಇದು ಮುಂದೆ ಹೋಗಿತ್ತು. ಅದೂ ಅಲ್ಲದೇ ಅರ್ಜುನ ಹೆಚ್ಚು ವರ್ಷಗಳ ವಾಸವಿದ್ದ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ನಾಗರಹೊಳೆಯ ಬಳ್ಳೆ ಶಿಬಿರದಲ್ಲೂ ಒಂದು ಸ್ಮಾರಕ ಬರಲಿದೆ. ಎರಡನ್ನೂ ಫೆಬ್ರವರಿಯಲ್ಲಿ ಉದ್ಘಾಟಿಸುವುದು ಖಚಿತವಾಗಿದೆ. ಮೊದಲು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರಿನಲ್ಲಿ ಅರ್ಜುನ ಆನೆ ಸ್ಮಾರಕ ಉದ್ಘಾಟನೆಗೊಂಡರೆ ನಂತರ ಬಳ್ಳೆಯ ಸ್ಮಾರಕವೂ ಉದ್ಘಾಟನೆಯಾಗಲಿದೆ.
ಹಾಸನ ಜಿಲ್ಲೆ, ಯಸಳೂರು ಅರಣ್ಯದಲ್ಲಿ 2023ರ ಡಿ.4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಅಂಬಾರಿ ಹೊರುತ್ತಿದ್ದ ಗಜಶ್ರೇಷ್ಠ ಅರ್ಜುನನ ಸ್ಮಾರಕವನ್ನು ಫೆಬ್ರವರಿ ಮೊದಲ ವಾರ ಉದ್ಘಾಟಿಸಲಾಗುವುದು. ಹುತಾತ್ಮ ಅರ್ಜುನನ ಸ್ಮಾರಕ ಸಂಪೂರ್ಣ ಸಿದ್ಧವಾಗಿದ್ದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಫೆಬ್ರವರಿ ಮೊದಲ ವಾರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಮರ್ಪಣೆ ಮಾಡಲಾಗುವುದು. ಅರ್ಜುನನ ಸ್ಮಾರಕವನ್ನು ಡಿ.4ರ ಪ್ರಥಮ ಪುಣ್ಯ ತಿಥಿಯೊಳಗಾಗಿ ನೆರವೇರಿಸುವ ಉದ್ದೇಶ ಇತ್ತು. ಆದರೆ, ತಾಂತ್ರಿಕ ಕಾರಣಗಳಿಂದ ತಡವಾಗಿದೆ. ಸ್ಮಾರಕ ಅರಣ್ಯ ಪ್ರದೇಶದಲ್ಲಿದ್ದು, ಸಾರ್ವಜನಿಕರು ಸ್ಮಾರಕ ದರ್ಶನಕ್ಕೆ ಬರಲು ತೊಡಕಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎನ್ನುವುದು ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿವರಣೆ.
ನಾಗರಹೊಳೆಯ ಕಾಕನಕೋಟೆಯಲ್ಲಿ 1968ರಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿರುವ ಎಚ್‌ಡಿಕೋಟೆ ತಾಲ್ಲೂಕಿನ ಬಳ್ಳೆ ಆನೆ ಶಿಬಿರದಲ್ಲಿದ್ದ ಹಿನ್ನೆಲೆಯಲ್ಲಿ ಬಳ್ಳೆಯಲ್ಲಿ ಕೂಡ ಸ್ಮಾರಕ ನಿರ್ಮಿಸಲಾಗಿದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲವಾರದಲ್ಲಿ ಆ ಸ್ಮಾರಕವನ್ನೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎನ್ನುತ್ತಾರೆ ಸಚಿವರು.
ಹೀಗಿರಲಿದೆ ಸ್ಮಾರಕ
ಸಕಲೇಶಪುರ ತಾಲ್ಲೂಕಿನ ಯಸಳೂರಿನಲ್ಲಿ ಅರ್ಜುನ ಆನೆ ಮೃತಪಟ್ಟ ಸ್ಥಳದಲ್ಲಿ ಈಗಾಗಲೇ ಸಮಾಧಿ ನಿರ್ಮಾಣವಾಗಿದೆ. ಅಲ್ಲಿಯೇ ಅರ್ಜುನನ ಆಕರ್ಷಕವಾದ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಕಲಾವಿದ ಧನಂಜಯ್ ಪಡು ಅವರ ಕೈ ಚಳಕದಲ್ಲಿ ಅರ್ಜುನ ಆನೆಯ ಆಕರ್ಷಕ ಪುತ್ಥಳಿ ನಿರ್ಮಿಸಿದ್ದು, ಸಮಾಧಿಯ ಬಳಿಯೇ ನಿಲ್ಲಲಿದೆ. ಸಮಾಧಿ ಮೇಲೆ ಸ್ಮಾರಕ ನಿರ್ಮಾಣವಾಗಬೇಕೆನ್ನುವುದು ಅಭಿಮಾನಿಗಳ ಒತ್ತಾಯವೂ ಆಗಿದೆ. ಇದರಿಂದ ಸಮಾಧಿಯೂ ಸೇರಿದಂತೆ ಅಲ್ಲಿಯೇ ಸ್ಮಾರಕ ನಿರ್ಮಿಸಿ ಪ್ರವಾಸಿ ಸ್ಥಳವಾಗಿ ಇದನ್ನು ರೂಪಿಸಲಾಗುತ್ತದೆ.
ಮೈಸೂರು ಸಂಸದರ ಬೇಡಿಕೆ
ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿರುವ ಅರ್ಜುನನ ಸ್ಮಾರಕ ಎರಡು ಕಡೆ ಆದರೂ ಮೈಸೂರಿನ ವೃತ್ತವೊಂದರಲ್ಲಿ ಆತನ ನೆನಪಿನ ತಾಣ ಮಾಡಬೇಕು ಎನ್ನುವುದು ಸಂಸದ ಯದುವೀರ್ ಬೇಡಿಕೆ.
ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ "ಅರ್ಜುನ" ಆನೆ ಹಲವಾರು ವರ್ಷಗಳ ಕಾಲ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಜನರ ಮನಸಿನಲ್ಲಿ ಉಳಿದಿದ್ದಾನೆ., ಆದರೆ ಕಾಡಾನೆಯೊಂದರ ದಾಳಿಯಿಂದಾಗಿ ನಾವು ಅರ್ಜುನ ಆನೆಯನ್ನು ಕಳೆದುಕೊಂಡಿರುವುದು ನಿಜ. ಈಗ ಅರ್ಜುನ ಆನೆಯ ಗೌರವ ಸೂಚಕವಾಗಿ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಎಲ್ಐಸಿ ಸರ್ಕಲ್‌ಗೆ ಆನೆ ಹೆಸರಿಡಬೇಕು. ಇದನ್ನು ಐತಿಹಾಸಿಕ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವರಲ್ಲಿ ಮನವಿ ಮಾಡಿದ್ದಾರೆ.
