Mysore Dasara Exhibition: ಮೈಸೂರು ದಸರಾ ವಸ್ತು ಪ್ರದರ್ಶನ ವೀಕ್ಷಣೆ ಇಂದಿನಿಂದ ಎರಡು ದಿನ ಉಚಿತ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara Exhibition: ಮೈಸೂರು ದಸರಾ ವಸ್ತು ಪ್ರದರ್ಶನ ವೀಕ್ಷಣೆ ಇಂದಿನಿಂದ ಎರಡು ದಿನ ಉಚಿತ

Mysore Dasara Exhibition: ಮೈಸೂರು ದಸರಾ ವಸ್ತು ಪ್ರದರ್ಶನ ವೀಕ್ಷಣೆ ಇಂದಿನಿಂದ ಎರಡು ದಿನ ಉಚಿತ

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಎರಡು ದಿನ ಉಚಿತವಾಗಿ ಭೇಟಿ ನೀಡಲು ವಸ್ತುಪ್ರದರ್ಶನ ಪ್ರಾಧಿಕಾರವು ಅವಕಾಶ ಮಾಡಿಕೊಟ್ಟಿದೆ. ಜನವರಿ 06 ಮತ್ತು 07 ರಂದು ಇದಕ್ಕೆ ಅವಕಾಶವಿದೆ.

ಮೈಸೂರು ದಸರಾ ವಸ್ತು ಪ್ರದರ್ಶನವನ್ನು ಎರಡು ದಿನ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಮೈಸೂರು ದಸರಾ ವಸ್ತು ಪ್ರದರ್ಶನವನ್ನು ಎರಡು ದಿನ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಮೈಸೂರು: ಸತತ ನೂರು ದಿನಗಳ ಕಾಲ ನಡೆದು ದಸರಾ ವಸ್ತು ಪ್ರದರ್ಶನ 2024 ಭಾನುವಾರ ರಾತ್ರಿಗೆ ಮುಕ್ತಾಯ ಕಂಡಿದೆ. ಭಾರೀ ಪ್ರಮಾಣದಲ್ಲಿ ವಸ್ತು ಪ್ರದರ್ಶನಕ್ಕೆ ಜನ ಭೇಟಿ ನೀಡಿದ್ದಾರೆ. ಸಾರ್ವಜನಿಕ ಹಾಗೂ ಪ್ರವಾಸಿಗರ ಹಿತ ದೃಷ್ಟಿಯಿಂದ ದಸರಾ ವಸ್ತುಪ್ರದರ್ಶನವನ್ನು 2025 ರ ಜನವರಿ 06 ಮತ್ತು 07 ರಂದು ವಿಸ್ತರಣೆ ಮಾಡಲಾಗಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ ವಾಣಿಜ್ಯ ಮಳಿಗೆಗಳು ಹಾಗೂ ಸರ್ಕಾರಿ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕೊನೆಯ ಎರಡು ದಿನವೂ ವಸ್ತು ಪ್ರದರ್ಶನ ವೀಕ್ಷಣೆ ಮಾಡಬಹುದು. ಸರ್ಕಾರಿ ಮಳಿಗೆಗಳನ್ನು ವೀಕ್ಷಣೆ ಮಾಡಬಹುದು. ಖರೀದಿಗೂ ಕೂಡ ಅವಕಾಶಗಳು ಇರಲಿವೆ. ಅಲ್ಲದೇ ಆಟೋಪಕರಣಗಳೂ ಕೂಡ ಮನರಂಜನೆಗೆ ಲಭ್ಯ ಇವೆ ಎಂದು ತಿಳಿಸಲಾಗಿದೆ.

3ಡಿ ತಂತ್ರಜ್ಞಾನದ ಬಳಕೆ

ಪ್ರದರ್ಶನದಲ್ಲಿ ಉತ್ಪನ್ನಗಳ ವೀಕ್ಷಣೆ ಮತ್ತು ಮಾರಾಟದ ಜೊತೆಗೆ ಅವುಗಳ ತಯಾರಿಕೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶವಿದೆ. ವಸ್ತು ಪ್ರದರ್ಶನಕ್ಕೆ ಬಂದಂತಹ ಮಕ್ಕಳಿಗೆ ಮನರಂಜನೆಯನ್ನು ನೀಡಲು ಇಂಟರಾಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನವನ್ನು ಒಳಗೊಂಡಿರುವ ವರ್ಚುವಲ್ ಪಾರ್ಕ್‌ಗಳು ಕೂಡ ಈ ಬಾರಿ ಆಕರ್ಷಣೆಯಾಗಿದ್ದವು.

ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10 ರಿಂದ 15 ಸ್ಥಳಗಳಲ್ಲಿ ಏರ್ಪೋರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ.

ದೀಪಾಲಂಕಾರದ ಆಕರ್ಷಣೆ

ಅತಿ ಹೆಚ್ಚು ಸ್ಥಳೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು, ಈ ಬಾರಿ ವಸ್ತು ಪ್ರದರ್ಶನದಲ್ಲಿ ದೀಪಾಲಂಕಾರವನ್ನು ಹೆಚ್ಚಿಸಲಾಗಿತ್ತು. ಮುಖ್ಯದ್ವಾರ ಮುಂಭಾಗ ಹಾಗೂ ಪ್ರಾಧಿಕಾರದ ಪ್ರಮುಖ ರಸ್ತೆಗಳಲ್ಲಿ ಮತ್ತು ಪ್ರಾಧಿಕಾರದ ವೃತ್ತಗಳಿಗೆ ವಿಶೇಷ ಮಾದರಿಯ ವಿದ್ಯುತ್ ದೀಪ ಬಣ್ಣದ ದೀಪಾಲಂಕಾರಗಳೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.

80 ಎಕರೆ ವಿಸ್ತೀರ್ಣದಲ್ಲಿ ನಡೆಯುವ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು ರಿಯಾಯಿತಿ ದರದಲ್ಲಿ 3 ಎಲೆಕ್ಟ್ರಾನಿಕ್ ಏಕೋ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟ್‌ ಕೂಡ ಇದೆ. ಅಲ್ಲದೆ ವಸ್ತು ಪ್ರದರ್ಶನದ ಪಾರ್ಕ್ ಗಳಲ್ಲಿ ಹೂಗಳಿಂದ ವಿವಿಧ ಆಕಾರದ ಹೂಗುಚ್ಛಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದು ಬಂದಂತಹ ಪ್ರವಾಸಿಗರು ಮತ್ತು ಮಕ್ಕಳಿಗೆ ವಿಶೇಷ ಅನುಭವವನ್ನು ನೀಡುತ್ತಿದೆ.

ಮಳಿಗೆಗಳೂ ರಶ್‌

ವಿವಿಧ ಇಲಾಖೆಗಳ 30 ಸ್ಟಾಲ್ ಹಾಗೂ 153 ಖಾಸಗಿ ಸ್ಟಾಲ್ ಗಳು ಈ ಬಾರಿ ಗಮನ ಸೆಳೆದಿವೆ. ಜಿಲ್ಲಾಪಂಚಾಯಿತಿ, ಸರ್ಕಾರಿ ಇಲಾಖೆ, ನಿಗಮ ಮಂಡಳಿಗಳ ಮಳಿಗೆಗಳು ಭರಪೂರ ಮಾಹಿತಿ ನೀಡಿವೆ. ಕೆಲವು ಮಳಿಗೆಗಳಂತೂ ಹೊರ ಹಾಗೂ ಒಳಾವರಣದಲ್ಲಿ ಗಮನ ಸೆಳೆಯುವಂತೆ ರೂಪುಗೊಂಡಿರುವುದೂ ವಿಶೇಷವೇ.

ಪ್ರತಿ ವರ್ಷ ಬಹುತೇಕ ನೂರು ದಿನಗಳ ಕಾಲ ವಸ್ತು ಪ್ರದರ್ಶನ ನಡೆಯುತ್ತದೆ. ಈ ಬಾರಿಯೂ ಯಶಸ್ವಿಯಾಗಿ ನಡೆದಿರುವ ಪ್ರದರ್ಶನ ಲಕ್ಷಾಂತರ ಪ್ರವಾಸಿಗರನ್ನು ಸೆಳೆದಿದೆ. ಕಾರ್ಯಕ್ರಮಗಳು, ಮಳಿಗೆಗಳಿಗೂ ಜನ ಹೆಚ್ಚಿನ ಭೇಟಿ ನೀಡಿದ್ದಾರೆ. ಜನವರಿ 5ರ ಭಾನುವಾರಕ್ಕೆ ಈ ವರ್ಷದ ದಸರಾ ವಸ್ತು ಪ್ರದರ್ಶನ ಮುಗಿಯಿತು. ಆದರೆ ಮೈಸೂರಿಗೆ ಬಂದಿರುವ ಪ್ರವಾಸಿಗರ ಭೇಟಿಗೆ ಅನುಕೂಲವಾಗುವಂತೆ ಎರಡು ದಿನ ವಸ್ತು ಪ್ರದರ್ಶನ ವೀಕ್ಷಣೆಗೆ ಲಭ್ಯ ಇರಲಿದೆ. ಪ್ರವೇಶ ಮಾತ್ರ ಉಚಿತ ಎನ್ನುವುದು ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌ ವಿವರಣೆ.

Whats_app_banner