ಮೈಸೂರು ದಸರಾ2024: ಆನೆಗಳಿಗೆ ಅಂಬಾರಿ ತಾಲೀಮು ಶುರು, ಮೊದಲ ದಿನ ಮರಳ ಮೂಟೆ ಜತೆ ಅಂಬಾರಿ ಹೊತ್ತೋರು ಯಾರು
ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಗಜ ಪಡೆಗೆ ಅಂಬಾರಿ ಹೊರಿಸುವ ತಾಲೀಮು ಬುಧವಾರ ಶುರುವಾಯಿತು. ಅಭಿಮನ್ಯು ಮರದ ಅಂಬಾರಿ ಹೊತ್ತು ಯಶಸ್ವಿಯಾಗಿ ಸಾಗಿದ.
ಮೈಸೂರು: ಮೈಸೂರು ದಸರಾಗೆ ದಿನಗಣನೆ ಶುರುವಾಗಿರುವ ಗಜಪಡೆಯ ತಾಲೀಮು ಕೂಡ ಬಿರುಸುಕೊಂಡಿದೆ. ತಿಂಗಳ ಹಿಂದೆಯೇ ಮೈಸೂರಿಗೆ ಆಗಮಿಸಿ ಬೀಡು ಬಿಟ್ಟಿರುವ ಗಜ ಪಡೆಯ ತಂಡಕ್ಕೆ ನಾನಾ ರೀತಿಯ ತಾಲೀಮು ನಡೆದಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ತಾಲೀಮು ನಡೆಯುತ್ತಿದ್ದು ಈಗ ಅಂಬಾರಿ ಭಾರ ಹೊರಿಸುವ ಚಟುವಟಿಯೂ ಶುರುವಾಗಿದೆ. ಬುಧವಾರ ಸಂಜೆ ಸುಮಾರು 250 ಕೆ ಜಿ ಮರದ ಅಂಬಾರಿ ಜೊತೆಗೆ ಮರಳಿನ ಮೂಟೆಗಳು ಸೇರಿದಂತೆ ಒಟ್ಟು 750 ಕೆ ಜಿ ಯಷ್ಟು ಭಾರವನ್ನು ಅಭಿಮನ್ಯುವಿಗೆ ಹೊರಿಸಿ ತಾಲೀಮು ನಡೆಸಲಾಯಿತು.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ ಐ ಬಿ ಪ್ರಭುಗೌಡ ನೇತೃತ್ವದಲ್ಲಿ ಮರದ ಅಂಬಾರಿ ಕಟ್ಟಿ ತಾಲೀಮು ಮಧ್ಯಾಹ್ನದ ನಂತರ ಶುರುವಾಯಿತು. ಅರಣ್ಯ ಇಲಾಖೆ ಸಿಬ್ಬಂದಿಗಳು ಅಭಿಮನ್ಯುವಿಗೆ ಮೂಟೆಗಳ ಜತೆಗೆ ಅಂಬಾರಿಯನ್ನೂ ಯಶಸ್ವಿಯಾಗಿ ಕಟ್ಟಿದರು. ಅಂಬಾವಿಲಾಸ ಅರಮನೆಯ ಖಾಸಗಿ ಅರಮನೆಯ ಬಳಿ ಕ್ರೇನ್ ನಲ್ಲಿ ಮರದ ಅಂಬಾರಿ ಕಟ್ಟುವ ಕಾರ್ಯ ನೆರವೇರಿಸಲಾಯಿತು. ಅರಣ್ಯ ಸಿಬ್ಬಂದಿ ಅಕ್ರಂ ಹಾಗೂ ಇತರರು ಅಂಬಾರಿ ಕಟ್ಟುವುದರಲ್ಲಿ ನಿಷ್ಣಾತರು.
ಮರದ ಅಂಬಾರಿಗೆ ಹಾಗೂ ಆನೆಗಳಿಗೆ ಅರ್ಚಕ ಪ್ರಹ್ಲಾದ್ ರಾವ್ ರಿಂದ ವಿಶೇಷ ಪೂಜೆ ಸಲ್ಲಿಸಿದರು.
ಅಂಬಾರಿ ಹೊತ್ತ ಅಭಿಮನ್ಯುವಿನ ತಾಲೀಮು ಆನಂತರ ಶುರುವಾಯಿತು. ಅಭಿಮನ್ಯು ಮುಂಚೂಣಿಯಲ್ಲಿ ಹೆಜ್ಜೆ ಹಾಕುತಿದ್ದರೆ ಇತರೆ ಆನೆಗಳು ಅದನ್ನು ಹಿಂಬಾಲಿಸಿದವು. ವರಲಕ್ಷ್ಮಿ, ಕಂಜನ್, ಏಕಲವ್ಯ, ಭೀಮ, ಮಹೇಂದ್ರ, ಧನಂಜಯ, ದೊಡ್ಡಹರವೆ ಲಕ್ಷ್ಮಿ, ರೋಹಿತ್, ಗೋಪಿ, ಪ್ರಶಾಂತ, ಸುಗ್ರೀವ ಆನೆಗಳು ಸಾಥ್ ನೀಡಿದರೆ ಅಭಿಮನ್ಯುವಿನ ಎಡಬಲದಲ್ಲಿ ಲಕ್ಷ್ಮಿ ಹಾಗು ಹಿರಣ್ಯ ಆನೆಗಳು ಕುಮ್ಕಿ ಆನೆಗಳಾಗಿ ಸಾಥ್ ಕೊಟ್ಟವು.
ಅರಮನೆ ಅಂಗಳದಿಂದ ಮರದ ಅಂಬಾರಿ ಹೊತ್ತು ಬಲರಾಮ ಜಯರಾಮ ದ್ವಾರದ ಮೂಲಕ ಹೊರಬಂದು ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ನ್ಯೂಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ಹಳೆ ಆರ್ ಎಂ ಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪ ತಲುಪಿತು ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ.
ಮರದ ಅಂಬಾರಿ ಹೊತ್ತು ರಾಜ ಬೀದಿಯಲ್ಲಿ ಗಜಗಾಂಭಿರ್ಯದಿಂದ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯುವನ್ನು ರಸ್ತೆಯುದಕ್ಕೂ ಜನ ವೀಕ್ಷಿಸಿ ಖುಷಿಪಟ್ಟರು. ಹಲವರು ವೀಡಿಯೋ ಕೂಡ ತೆಗೆದುಕೊಂಡರು.
ಬುಧವಾರದಿಂದ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಮರದ ಅಂಬಾರಿ ಹೊತ್ತು ಸಾಗುವ ತಾಲೀಮು ಆರಂಭವಾಗಿದ್ದು, ಇನ್ನು ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ. ಕ್ಯಾಪ್ಟನ್ ಅಭಿಮನ್ಯುಗೆ ಇಂದು ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಿದ್ದು, ಏಕಲವ್ಯ, ಭೀಮ, ಧನಂಜಯ, ಮಹೇಂದ್ರ ಆನೆಗಳಿಗೂ ಅಂಬಾರಿ ಹೊರಿಸುವ ತಾಲೀಮು ನಡೆಯಲಿದೆ.
ಆನೆಗಳಿಗೆ ಅಂಬಾರಿ ತಾಲೀಮು ಶುರುವಾಗಿದೆ. ಅಭಿಮನ್ಯು ಮೊದಲ ದಿನ ಯಶಸ್ವಿಯಾಗಿ ಮರದ ಅಂಬಾರಿ ಹೊತ್ತು ಸಾಗಿದ್ದೇನೆ. ಇನ್ನೂ ಎರಡು ಮೂರು ಆನೆಗಳಿಗೆ ಈ ತಾಲೀಮು ಮಾಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.