Mysore News: ಮೈಕ್ರೋ ಫೈನಾನ್ಸ್ ನವರಿಂದ ಕಿರುಕುಳ ಆರೋಪ, ಕ್ರಿಮಿನಾಶಕ ಮಾತ್ರೆ ನುಂಗಿ ಹುಣಸೂರಿನ ಮಹಿಳೆ ಆತ್ಮಹತ್ಯೆ
Mysore Crime News: ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಸಾಲ ಹಿಂದುರಿಗಿಸಲು ಕಿರುಕುಳ ನೀಡಿದ ಬೇಸರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಸೂರು: ಮೈಕ್ರೋ ಫೈನಾನ್ಸ್ ನವರ ಕಿರುಕುಳ ತಾಳಲಾರದೇ ಕಾಳಿನ ಕ್ರಿಮಿನಾಶಕ ಮಾತ್ರೆ ನುಂಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆಯೊಂದು ಮೈಸೂರು ಜಿಲ್ಲೆ ಹುಣಸೂರು ಸಮೀಪದ ಕಿರಿಜಾಜಿ ಗ್ರಾಮದಲ್ಲಿ ನಡೆದಿದೆ.ಹುಣಸೂರು ತಾಲೂಕಿನ ಕಿರಿಜಾಜಿ ಗ್ರಾಮದ ಸಣ್ಣಕಾಳಯ್ಯನವರ ಪತ್ನಿ ಸುಶೀಲ (48) ಎಂಬ ಮಹಿಳೆಯೇ ಕಾಳಿನ ಕ್ರಿಮಿನಾಶಕ ಮಾತ್ರೆ ನುಂಗಿ ಸಾವನಪ್ಪಿದ್ದಾರೆ. ಮೃತರಿಗೆ ಪತಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಸುಶೀಲ ಅವರು ಹುಣಸೂರಿನ ಫಾರ್ಚುನ್ ಮೈಕ್ರೋ ಫೈನಾನ್ಸ್ ರವರಿಂದ ಸಾಲ ಪಡೆದಿದ್ದು, ಸಾಲದ ಮರುಪಾವತಿಯನ್ನು ಸಕಾಲದಲ್ಲಿ ಪಾವತಿ ಮಾಡುತ್ತಾ ಬಂದಿದ್ದಾರೆ. ಆದರೆ ಈ ವಾರದ ಮರುಪಾವತಿಯನ್ನು ಪಾವತಿಸಲು ಸಾಧ್ಯವಾಗದ ಕಾರಣ ನಾಳೆ ಕಟ್ಟುತ್ತೇನೆ ಸಮಯ ಕೊಡಿ ಎಂದು ಕೇಳಿದ್ದಾರೆ.
ಆದರೆ ಮರುಪಾವತಿಗೆ ಬಂದಿದ್ದ ಉಮೇಶ್ ಮತ್ತು ಆತನ ನಾಲ್ಕು ಮಂದಿ ಸಹಚರರು ಸುಶೀಲ ಅವರಿಗೆ ಈಗಲೇ ಹಣ ಕೊಡಿ ಎಂದು ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಇದರಿಂದ ಮನನೊಂದ ಸುಶೀಲ ಮಧ್ಯಾಹ್ನ ಕಾಳಿನ ಕ್ರಿಮಿನಾಶಕ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಬಿದ್ದಿರುವುದನ್ನು ಕಂಡ ಮನೆಯವರು ಹುಣಸೂರು ಡಿ ದೇವರಾಜ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಕಳೆದ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಸುಶೀಲ ಮೃತ ಪಟ್ಟಿದ್ದಾರೆ. ಈ ಬಗ್ಗೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪುತ್ರ ನವೀನ್ ದೂರು ದಾಖಲಿಸಿದ್ದಾರೆ.
ನಮ್ಮ ತಾಯಿ ಸಾಲವನ್ನು ಪಡೆದಿದ್ದರೂ ನಿಯಮಿತವಾಗಿ ಕಟ್ಟಿಕೊಂಡು ಬಂದಿದ್ದರು. ಈ ತಿಂಗಳಿನ ಸಾಲ ಪಾವತಿಯಲ್ಲಿ ವಿಳಂಬವಾಗಿತ್ತು. ಆದರೆ ಫೈನಾನ್ಸ್ ಕಡೆಯವರು ಬಂದು ಅವಮಾನ ಮಾಡಿದ್ದಕ್ಕೆ ಬೇಸರಗೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಈ ರೀತಿ ಮಾಡಿಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಅವರ ಪುತ್ರ ಹೇಳಿದ್ದಾರೆ.
(ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ)