ರಾಸುಗಳ ಪ್ರದರ್ಶನಕ್ಕೆ ಹೆಸರಾದ ಕಾವೇರಿ ತೀರದ ಮುಡುಕುತೊರೆ ಜಾತ್ರಾ ಮಹೋತ್ಸವ; ಜನವರಿ 31ರಿಂದ ಫೆಬ್ರವರಿ 16ರವರೆಗೆ ಆಯೋಜನೆ, 7 ರಂದು ರಥೋತ್ಸವ
Mudukuthore Jatre 2025: ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಕಾವೇರಿ ತೀರದ ಮುಡುಕುತೊರೆ ಜಾತ್ರಾ ಮಹೋತ್ಸವ ಹದಿನೇಳು ದಿನಗಳ ಕಾಲ ನಡೆಯಲಿದೆ. ಈ ಬಾರಿಯ ಜಾತ್ರಾ ವಿವರ ಇಲ್ಲಿದೆ.

Mudukuthore Jatre 2025: ಕಾವೇರಿ ನದಿ ಎರಡು ಭಾಗವಾಗಿ ಹೋಳಾಗಿ ಮುಂದೆ ಕೂಡುವಂತಹ ಮನಮೋಹಕ ವಾತಾವರಣ ಹೊಂದಿರುವ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವ ಜನವರಿ 31ರಿಂದ ಫೆಬ್ರವರಿ 16ರವರೆಗೆ ನಡೆಯಲಿದೆ. ಜನಗಳ ಜಾತ್ರೆಗೆ ಮುಡುಕುತೊರೆ ಜನಪ್ರಿಯ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಭಾಗದಿಂದಲೂ ರೈತರು ಇಲ್ಲಿಗೆ ರಾಸುಗಳನ್ನು ತಂದು ಮಾರಾಟ ಮಾಡುವುದು ವಾಡಿಕೆ. ಇದನ್ನು ಮುಡುಕುತೊರೆ ರಾಸುಗಳ ಜಾತ್ರೆಯೂ ಎಂದು ಕರೆಯಲಾಗುತ್ತೆದೆ. ಮುಡುಕತೊರೆಯ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಮೈಸೂರು ಭಾಗದ ಹಲವು ಕುಟುಂಬಗಳ ಆರಾಧ್ಯದೈವ, ಬೆಟ್ಟದ ಮೇಲೆ ಇರುವ ಈ ದೇಗುಲಕ್ಕೆ ತನ್ನದೇ ಆದ ಐತಿಹ್ಯವಿದೆ.
ಸುಮಾರು 300 ಅಡಿಗಳಷ್ಟು ಎತ್ತರದಲ್ಲಿರುವ ಬೆಟ್ಟದ ಮೇಲೆ ಗಂಗರ ಕಾಲದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮೂಲ ದೇವಾಲಯವನ್ನು ನಿರ್ಮಿಸಲಾಗಿದೆ. ನಂತರ ಇದನ್ನು ವಿಜಯನಗರ ಅರಸರ ಕಾಲದಲ್ಲಿ ದೇವಾಲಯದ ಜೀರ್ಣೋದ್ದಾರ ಮಾಡಲಾಗಿದೆ ಎನ್ನುವ ಇತಿಹಾಸವಿದೆ. ಆನಂತರ ಇದರ ಪ್ರವೇಶ ದ್ವಾರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿಸಿದ್ದು ಎನ್ನುವ ಮಾಹಿತಿಯೂ ಇದೆ. ಬೆಟ್ಟದ ಮೇಲೆ ಇರುವ ಈ ದೇಗುಲಕ್ಕೆ ಹೋಗಲು ಮೆಟ್ಟಿಲು ಏರಬೇಕು. ಮೇಲಿಂದ ನಿಂತು ಕಾವೇರಿ ನದಿ ಹರಿವು ನೋಡುವುದೇ ಚಂದ.
ಯಾವ ಜಿಲ್ಲೆ ಏನು ಕಾರ್ಯಕ್ರಮ
ಜನವರಿ 31 ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ ನಡೆಯಲಿದೆ, ಫೆಬ್ರವರಿ 7 ರಂದು ರಥೋತ್ಸವ, ಫೆಬ್ರವರಿ 10ಕ್ಕೆ ತೆಪ್ಪೋತ್ಸವ ಸಮಾರಂಭ. 17 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಕಾವೇರಿ ನದಿ ತೀರದಲ್ಲಿ ಸ್ವಚ್ಛ ವಾತಾವರಣ ಕಲ್ಪಿಸುವ ಜತೆಗೆ ದೇವಸ್ಥಾನದ ಆವರಣದಲ್ಲೂ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ದನಗಳ ಜಾತ್ರೆ ಇರುವ ಪ್ರದೇಶದಲ್ಲೂ ಸೂಕ್ತ ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.
ಸಿದ್ದತೆಗೆ ಸೂಚನೆ
ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಹಾಗೂ ವೈದ್ಯರು ತಂಡ ಜಾತ್ರಾ ಮಹೋತ್ಸವದಲ್ಲಿ ಇರಬೇಕು. ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ದೀಪಾಲಂಕಾರ ಮಾಡಬೇಕು. ತಾತ್ಕಾಲಿಕ ಶೌಚಾಲಯ, ಮೊಬೈಲ್ ಶೌಚಾಲಯ ಹಾಗೂ ಬಟ್ಟೆ ಬದಲಿಸುವ ಕೊಠಡಿ ನಿರ್ಮಿಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎನ್ನುವ ಸೂಚನೆಗಳನ್ನು ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್, ಧ್ವನಿ ವರ್ಧಕ , ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಜಾತ್ರಾ ಮಾಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾತ್ರಾ ಪ್ರದೇಶದಲ್ಲಿ ಸ್ವಚ್ಚತೆ ಹಾಗೂ ನೈರ್ಮಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದೂ ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಲಾಗಿದ್ದು. ಇದಕ್ಕಾಗಿ ಸಿದ್ದತೆಗಳು ಜೋರಾಗಿಯೇ ನಡೆದಿವೆ.
ಡಿಸಿ ಸಭೆ
ಅಧಿಕಾರಿಗಳು ಯಾವುದೇ ತೊಂದರೆ ಆಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಸಭೆ ನಡೆಸಿ ಸೂಚಿಸಿದ್ದಾರೆ.
ರಾಸುಗಳಿಗೆ ಬಹುಮಾನ
ಉತ್ತಮ ರಾಸುಗಳಿಗೆ ಆಯ್ಕೆ ಸಂಬಂಧ ಜನವರಿ 31 ರಿಂದ ಫೆಬ್ರವರಿ 3 ವರೆಗೆ ರಾಸುಗಳ ರೈತರು ಸ್ಥಳದಲ್ಲಿದ್ದು ಆಯ್ಕೆ ಸಂಬಂಧ ನೊಂದಣಿ ಮಾಡಿಕೊಳ್ಳಬೇಕು. ಫೆಬ್ರವರಿ 5 ರಂದು ಉತ್ತಮ ರಾಸುಗಳ ಆಯ್ಕೆ ನಡೆಯುತ್ತದೆ. ಆದರೆ ಕೊನೆಯ ಎರಡು ದಿನ ಅಥವಾ ಆಯ್ಕೆಯ ದಿನ ನೇರವಾಗಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎನ್ನುವುದು ಪಶುಪಾಲನಾ ಇಲಾಖೆಯ ಸಹಾಯ ನಿರ್ದೇಶಕರಾದ ಡಾ ಲಿಂಗರಾಜು ಅವರು ರೈತಾಪಿ ವರ್ಗಕ್ಕೆ ನೀಡಿರುವ ಮಾಹಿತಿ.
