ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಣಿಯಾಗಿದ್ದ ಮಗ ಸೇರಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಮೂವರನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಶಂಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಣಿಯಾಗಿದ್ದ ಮಗ ಸೇರಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಮೂವರನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಶಂಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಣಿಯಾಗಿದ್ದ ಮಗ ಸೇರಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಮೂವರನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಶಂಕೆ

Mysore News: ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಿಗ್ಗೆ ವರದಿಯಾಗಿದೆ. ವೃದ್ದೆ ತಾಯಿ ಹಾಗೂ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಗ, ಪತ್ನಿ ಜತೆಗೆ ವ್ಯಕ್ತಿ ಆತ್ಮಹತ್ಯೆಗ ಶರಣಾಗಿದ್ದಾನೆ.

ಮೈಸೂರಲ್ಲಿ ಆತ್ಮಹತ್ಯೆ ಮಾಡಿಕೊಂಡ  ಕುಟುಂಬ
ಮೈಸೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ

ಮೈಸೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೈಸೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಒಂದರಲ್ಲಿ ಘಟನೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ಮಗ, ವೃದ್ದ ತಾಯಿ, ಪತ್ನಿಯೊಂದಿಗೆ ವ್ಯಕ್ತಿ ಆತ್ಮಹತ್ಯೆಗೆ ಶರಣಾರಾಗಿದ್ದಾರೆ.ಆತ್ಮಹತ್ಯೆ ಮಾಡಿಕೊಂಡವರನ್ನು ಚೇತನ್ (45), ಅವರ ಪತ್ನಿ ರೂಪಾಲಿ (43) ತಾಯಿ ಪ್ರಿಯಂವಧ (65) ಹಾಗೂ ಪುತ್ರ ಕುಶಾಲ್ (15) ಎಂದು ಗುರುತಿಸಲಾಗಿದೆ. ಮೈಸೂರಿನ ವಿಶ್ವೇಶ್ವರನಗರದ ಅಪಾರ್ಟ್ಮೆಂಟ್ ನಲ್ಲಿ ನಡೆದಿರುವ ಘಟನೆ ಇದು. ಮೊದಲು ಚೇತನ್ ತನ್ನ ತಾಯಿ, ಪತ್ನಿ ಹಾಗು ಮಗನಿಗೆ ವಿಷ ಉಣಿಸಿ ಕೊಲೆ ಮಾಡಿರುವ ಶಂಕೆ. ನಂತರ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ.ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ಇನ್ಸ್‌ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರ ಸಾವಿನ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ಡೆತ್‌ನೋಟ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನವರೇ ಆದ ಚೇತನ್‌ ಕೆಲ ವರ್ಷ ವಿದೇಶದಲ್ಲಿದ್ದರು. ಆನಂತರ ಮೈಸೂರಿಗೆ ಮರಳಿದ್ದರು. ಸಾಲದ ಸುಳಿಯಲ್ಲಿ ನರಳಾಡುತ್ತಿದ್ದ ಚೇತನ್ ವಿದೇಶದಿಂದ ಬಂದ ಬಳಿಕ ಬದುಕು‌ ಕಟ್ಟಿಕೊಳ್ಳಲು ಪರದಾಡಿದ್ದು. ತನ್ನ ಕುಟುಂಬವನ್ನು ಮೇಲೆತ್ತಲು ಹರಸಾಹಸ‌ಪಟ್ಟಿದ್ದು. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ.

ಕೋವಿಡ್ ಬಳಿಕ ಉಂಟಾಗಿದ್ದ ಸಂಕಷ್ಟದಿಂದ ಹೊರಬರಲಾಗದೇ ಹೆಣಗಾಡಿದ್ದರು. ಇದೇ ವಿಚಾರವಾಗಿ ಮನೆಯವರೊಂದಿಗೆ ಆಗಾಗ ಬೇಸರ ತೋಡಿಕೊಳ್ಳುತ್ತಿದ್ದರು.

ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳವ ನಿರ್ಣಯಕ್ಕೆ ಬಂದ ಚೇತನ್‌ ಭಾನುವಾರ ರಾತ್ರಿ ಊಟದಲ್ಲಿ ತಾಯಿ, ಪತ್ನಿ ಹಾಗೂ ಮಗನಿಗೆ ವಿಷ ಬೆರೆಸಿ ನೀಡಿದ್ದು. ಆನಂತರ ಕೊಠಡಿಯಲ್ಲಿ ತಾನೂ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿದೆ. ಬೆಳಿಗ್ಗೆಯಾದರೂ ಯಾರೂ ಹೊರ ಬಾರದೇ ಇದ್ದಾಗ ಅನುಮಾನಗೊಂಡ ನೆರೆ ಹೊರೆಯವರು ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಫೋನ್‌ ಕರೆಯನ್ನೂ ಸ್ವೀಕರಿಸದೇ ಇದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ.

ಡೆತ್ ನೋಟ್ ನಲ್ಲಿ‌ ಸಾವಿಗೆ ಕಾರಣವಾದ ಅಂಶಗಳು ಉಲ್ಲೇಖ ಮಾಡಿದ್ದು ಆರ್ಥಿಕ ಸಂಕಷ್ಟದಿಂದ ಈ ಹಾದಿ ಹಿಡಿದಿರುವುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಆದರೂ ಸಂಬಂಧಿಕರು, ಪರಿಚಯಸ್ಥರಿಂದ ಮಾಹಿತಿಯನ್ನು ಪಡೆಯಲಾಗುತ್ತಿದೆ.

ಆದರೆ ತಂದೆಯಿಂದಲೇ ಕೊಲೆಯಾಗಿ ಜೀವ ಕಳೆದುಕೊಂಡ ಕುಶಾಲ್‌ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿತ್ತು. ಎಸ್ಎಸ್ಎಲ್‌ಸಿ ಪೂರ್ವಸಿದ್ದತೆ ಪರೀಕ್ಷೆ ಬರೆದಿದ್ದ ಕುಶಾಲ್ ಶನಿವಾರ ಇಂಗ್ಲೀಷ್ ಪರೀಕ್ಷೆ ಬರೆದು ಮನೆಗೆ ಮರಳಿದ್ದ. ಭಾನುವಾರ ಕುಟುಂಬ ಸಮೇತ ದೇವಾಲಯಕ್ಕೆ ತೆರಳಿದ್ದರು. ಮುಂದಿನ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳುತ್ತಿದ್ದ ಕುಶಾಲ್. ಬರುವ ಗುರುವಾರ ವಿಜ್ಞಾನ ವಿಷಯದ ಪರೀಕ್ಷೆಗೆ ಎದುರಿಸಬೇಕಿತ್ತು. ಇದರ ನಡುವೆ ಪ್ರಾಣ ಕಳೆದುಕೊಂಡಿದ್ದಾನೆ.

ಸಾಯುವ ಮುನ್ನ ಅಮೆರಿಕಾದಲ್ಲಿರುವ ಸಹೋದರ ಭರತ್‌ಗೆ ಕರೆ ಮಾಡಿದ್ದರು. ನಾವು ಬದುಕುಳಿಯುವುದಿಲ್ಲ, ಕ್ಷಮಿಸಿ ಬಿಡು ಎಂದು ಮೆಸೇಜ್ ಎನ್ನೂ ಚೇತನ್‌ ಮಾಡಿದ್ದರು.

ಏನಾಗಿದೆ ಎಂದು ಭರತ್ ಕೇಳುವ ಮುನ್ನವೇ ಕರೆ ಕಡಿತ ಮಾಡಿದ್ದರು. ಚೇತನ್ ನಡವಳಿಕೆಯ ಮೇಲೆ ಅನುಮಾನಗೊಂಡ ಭರತ್ ಕೂಡಲೇ ಭಾರತದಲ್ಲಿರುವ ತನ್ನ ಸಂಬಂಧಿಕರು,‌ ಗೆಳೆಯರ ಸಂಪರ್ಕ ಮಾಡಿ ಮಾಹಿತಿ ನೀಡಿದ್ದರು. ಅಪಾರ್ಟ್‌ಮೆಂಟ್ ಬಳಿಗೆ ತಕ್ಷಣ ತೆರಳುವಂತೆ ಹಲವರಿಗೆ ಮನವಿ ಮಾಡಿದ್ದರು. ಆಪ್ತರು ಬರುವ ಮುನ್ನವೇ ಹಾರಿಹೋಗಿದ್ದ ನಾಲ್ವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಬಗ್ಗೆ ಭರತ್‌ ಅವರೊಂದಿಗೆ ವಿದ್ಯಾರಣ್ಯಪುರಂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

(ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.)

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner