ನಂಜನಗೂಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಸೇರಿ ಒಂದೇ ಕುಟುಂಬದ ಮೂರು ಮಂದಿ ಸಾವು
ಮೈಸೂರು ಗುಂಡ್ಲುಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಮೈಸೂರು: ಮೈಸೂರಿನಿಂದ ಗುಂಡ್ಲುಪೇಟೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಅಪಘಾತದ ವಲಯವಾಗಿ ಮಾರ್ಪಟ್ಟಿದೆ. ಕೆಲ ದಿನಗಳಲ್ಲಿ ಹಲವು ಅಪಘಾತಗಳು ಈ ಮಾರ್ಗದಲ್ಲಿ ನಡೆದಿವೆ. ಅದರಲ್ಲೂ ನಂಜನಗೂಡು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ನಂಜನಗೂಡು ಹಾಗೂ ಗುಂಡ್ಲುಪೇಟೆ ಹೆದ್ದಾರಿ ಹಿರೀಕಾಟಿ ಗೇಟ್ ಬಳಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದೇ ಕುಟುಂಬದ ಮೂರು ಮಂದಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ತೀವ್ರ ಗಾಯಗಳಾಗಿವೆ.
ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಶಶಿಧರ್ ಆತನ ಪತ್ನಿ ಶಾಲಿನಿ, ತಾಯಿ ಭಾಗ್ಯಮ್ಮ ಒಂದೇ ಕುಟುಂಬದ ಮೃತ ದುರ್ದೈವಿಗಳಾಗಿದ್ದು ಓರ್ವನ ಹೆಸರು ತಿಳಿದು ಬಂದಿಲ್ಲ. ಮೃತರು ಸರಗೂರು ತಾಲೂಕಿನ ಪುಣ್ಯಕ್ಷೇತ್ರ ಚಿಕ್ಕದೇವಮ್ಮನ ಬೆಟ್ಟದಿಂದ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಎರಡು ಬೈಕುಗಳಲ್ಲಿ ಕೂಡ್ಲಾಪುರಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ತೆರಳುವ ಮಾರ್ಗ ಮಧ್ಯೆ ಹಿರೀಕಾಟಿ ಬಳಿ ನಂಜನಗೂಡಿನಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಕೆಎ 10 ಎಂ 5127 ನಂಬರ್ ಪ್ಲೇಟ್ ಹೊಂದಿರುವ ಕಾರೊಂದು ಎರಡು ಬೈಕ್ ಗಳಿಗೂ ಡಿಕ್ಕಿ ಹೊಡೆದ ಕಾರಣ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮತ್ತೋರ್ವ ವ್ಯಕ್ತಿಗೆ ಗಾಯವಾಗಿದ್ದು ಬೇಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತ ಸ್ಥಳದಿಂದ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿದು ಆಗಮಿಸಿದ ಬೇಗೂರು ಠಾಣೆಯ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತಪಟ್ಟ ಶಶಿಧರ್ ಮತ್ತು ಶಾಲಿನಿ ಅವರಿಗೆ ಕಳೆದ ವರ್ಷವಷ್ಟೇ ಮದುವೆಯಾಗಿತ್ತು. ಅಲ್ಲದೇ ಇದೇ ಕುಟುಂಬದ ವ್ಯಕ್ತಿಯೊಬ್ಬರು ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗಿದ್ದರು. ಈ ಕುಟುಂಬದಲ್ಲಿ ಸಾವಿನ ಆಘಾತ ಮುಂದುವರಿದಿದೆ ಎಂದು ಕೂಡ್ಲಾಪುರ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಈ ನಡುವೆ ಅಪಘಾತದಲ್ಲಿ ಮೃತಪಟ್ಟ ಮೂವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲ್ಲೂಕಿನ ಹಿರೇಕಾಟಿ ಗೇಟ್ ಬಳಿ ಮಂಗಳವಾರ ತಡರಾತ್ರಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ನವದಂಪತಿ ಹಾಗೂ ಹುಡುಗನ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೂವರ ಕಣ್ಣುಗಳನ್ನು ದಾನ ಮಾಡುವ ಮೂಲಕ 12 ಜನರ ಬಾಳಿಗೆ ದೃಷ್ಟಿ ನೀಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದರು.
