Breaking News: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಕುಸಿತ, ಮಹಾರಾಣಿ ಕಾಲೇಜು ಕಟ್ಟಡದಲ್ಲಿ ಸಿಲುಕಿದ ಕಾರ್ಮಿಕ
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಕುಸಿತ, ಮಹಾರಾಣಿ ಕಾಲೇಜು ಕಟ್ಟಡದಲ್ಲಿ ಸಿಲುಕಿದ ಕಾರ್ಮಿಕ

Breaking News: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಕುಸಿತ, ಮಹಾರಾಣಿ ಕಾಲೇಜು ಕಟ್ಟಡದಲ್ಲಿ ಸಿಲುಕಿದ ಕಾರ್ಮಿಕ

ಮೈಸೂರಿನ ಪಾರಂಪರಿಕ ಕಟ್ಟಡವಾಗಿರುವ ಮಹಾರಾಣಿ ಕಾಲೇಜು ಕಟ್ಟಡ ಕುಸಿದು ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆದಿದೆ.

ಮೈಸೂರಿನ ಪಾರಂಪರಿಕ ಕಟ್ಟಡ ಕುಸಿದು ಕಾರ್ಮಿಕರೊಬ್ಬರು ಸಿಲುಕಿದ್ದಾರೆ.
ಮೈಸೂರಿನ ಪಾರಂಪರಿಕ ಕಟ್ಟಡ ಕುಸಿದು ಕಾರ್ಮಿಕರೊಬ್ಬರು ಸಿಲುಕಿದ್ದಾರೆ.

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡವೊಂದು ಕುಸಿದು ಕಾರ್ಮಿಕನೊಬ್ಬ ಅವಶೇಷಗಳ ಅಡಿ ಸಿಲುಕಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿಯಿರುವ ಮಹಾರಾಣಿ ಕಾಲೇಜು ಕಟ್ಟಡ ಕೆಲವು ದಿನಗಳ ಹಿಂದೆ ಕುಸಿದಿತ್ತು. ಆ ಕಟ್ಟಡದ ದುರಸ್ಥಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಲುಕಿದ್ದಾರೆ. ಅವರನ್ನು ಹೊರ ತೆಗೆಯಲು ಅಗ್ನಿ ಶಾಮಕ ದಳದ ತಂಡಗಳು ನಿರಂತರ ಪ್ರಯತ್ನ ನಡೆಸಿವೆ.ಮೈಸೂರಿನ ಗೌಸಿಯನಗರದ ನಿವಾಸಿ ಸದ್ದಾಂ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕ ಎಂದು ಗುರುತಿಸಲಾಗಿದೆ.

ಶಿಥಿಲಗೊಂಡಿದ್ದ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡವನ್ನು ಕರ್ನಾಟಕ ಸರ್ಕಾರ ಅನುದಾನದಡಿ ದುರಸ್ಥಿ ಕೆಲಸ ಆರಂಭಿಸಲಾಗಿತ್ತು. ಕೆಲ ವರ್ಷಗಳ ಹಿಂದೆಯೇ ಕಟ್ಟಡ ಕುಸಿದರೂ ಈಗ ಅನುದಾನ ಬಿಡುಗಡೆಯಾಗಿದ್ದರಿಂದ ಅದನ್ನು ತೆರವುಗೊಳಿಸುವ ಕೆಲಸ ನಡೆದಿತ್ತು. ಕಟ್ಟಡದ ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಸಂಭವಿಸಿರುವ ಘಟನೆ ಇದಾಗಿದ್ದು, ಕಾರ್ಮಿಕನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಐದಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಹಾಗು ಜೆಸಿಬಿ ಮೂಲಕ ಮುಂದುವರಿದ‌ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸ್ಥಳಕ್ಕೆ ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ ಗೌಡ ಭೇಟಿ ನೀಡಿ ಮಾಹಿತಿ ಪಡೆದರು.

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಲಾಗಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಭಾಗ ಮೂರು ವರ್ಷದಿಂದ ಭಾರೀ ಮಳೆ ಕಾರಣಕ್ಕೆ ಕುಸಿದು ಬಿದ್ದಿತ್ತು. ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದರೂ ಕಟ್ಟಡ ಕುಸಿದಾಗ ಹತ್ತಿರದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಅನಾಹುತವಾಗಿರಲಿಲ್ಲ. ವ್ಯಾಪಕ ಮಳೆ ಬಿದ್ದ ಪರಿಣಾಮ ಮಹಾರಾಣಿ ಕಲಾ ಕಾಲೇಜಿನ ಛಾವಣಿ ಹಾಗೂ ಮೊದಲ ಮಹಡಿಯ ಗೋಡೆ ಕುಸಿತವಾಗಿತ್ತು. ಇದಾದ ಬಳಿಕ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿರಲಿಲ್ಲ. ಕಟ್ಟಡ ಮರುನಿರ್ಮಾಣವೂ ಆಗಿರಲಿಲ್ಲ.

ಈಗ ಮರು ನಿರ್ಮಾಣಕ್ಕಾಗಿ ಶಿಥಿಲಗೊಂಡಿರುವ ಕಟ್ಟಡ ತೆರವುಗೊಳಿಸುವಾಗ ಈ ದುರ್ಘಟನೆ ನಡೆದಿದೆ. ಏಳೆಂಟು ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಟ್ಟಡದಲ್ಲಿನ ಕಿಟಕಿಗಳನ್ನು ತೆಗೆಯುವಾಗ ಏಕಾಏಕಿ ಕಿಟಕಿ ಉರುಳಿ ಬಿದ್ದಿದೆ. ಆಗ ಮಣ್ಣು ಕೂಡ ಉರುಳಿ ಅದರಡಿ ಸದ್ದಾಂ ಸಿಲುಕಿಕೊಂಡಿರುವುದು ಗೊತ್ತಾಗಿದೆ. ಅವರನ್ನು ರಕ್ಷಿಸಲು ಅಲ್ಲಿದ್ದವರು ಪ್ರಯತ್ನಿಸಿದರು. ಕಟ್ಟಡ ಶಿಥಿಲಗೊಂಡಿರುವುದರಿಂದ ಇನ್ನಷ್ಟು ಅನಾಹುತ ಆಗಬಹುದು ಎನ್ನುವ ಕಾರಣದಿಂದ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಅವರೂ ನೆರವಿಗೆ ಧಾವಿಸಿದ್ದಾರೆ.

ಶಾಸಕ, ಡಿಸಿ ಹೇಳಿದ್ದೇನು

ಸ್ಥಳದಲ್ಲಿ ಮಾತನಾಡಿದ ಶಾಸಕ ಹರೀಶ್‌ಗೌಡ, ಕಟ್ಟಡ ಶಿಥಿಲವಾಗಿದ್ದ ಕಾರಣ ಕಳೆದ ನಾಲ್ಕು ದಿನಗಳಿಂದ ಕಟ್ಟಡ ತೆರವುಗೊಳಿಸುವ ಕೆಲಸ ನಡೆಯುತ್ತಿತ್ತು.ಸ್ಟಾರ್ ಇನ್ಫ್ರಾಟೆಕ್ ಕಂಪನಿಗೆ ಕಾಮಗಾರಿ ನೀಡಲಾಗಿದೆ. ಅವಘಡ ನಡೆದಾಗ 14 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಟ್ಟಡದ ಕಿಟಕಿ, ಸರಳುಗಳನ್ನು ತೆಗೆಯುವ ಕೆಲಸ ಆಗುತ್ತಿತ್ತು. ಇದ್ದಕಿದ್ದಂತೆ ಮೊದಲ ಮಹಡಿಯ ಮೇಲ್ಚಾವಣಿ ಕುಸಿತ ಆಗಿದೆ. ತಕ್ಷಣ ಎಲ್ಲರೂ ಓಡಿ ಬಂದಿದ್ದಾರೆ. ಒಬ್ಬ ಮಾತ್ರ ಸಿಲುಕಿದ್ದಾನೆ.ಆತನ ರಕ್ಷಣೆ ನಡೆದಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ತೆರವಿನ ವೇಳೆ ಕಟ್ಟಡ ಕುಸಿದಿದೆ. ಅವಶೇಷಗಳಡಿ ಕಾರ್ಮಿಕ ಸಿಲುಕಿದ್ದು, ಸುರಕ್ಷತಾ ಕ್ರಮಗಳನ್ನು ಇಟ್ಟುಕೊಂಡು ಕಾಮಗಾರಿ ಮಾಡಬೇಕಿತ್ತು. ಇದರ ಬಗ್ಗೆ ಮೊದಲು ಗಮನ ಹರಿಸಲಾಗುವುದು. ಮೊದಲು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕನ ರಕ್ಷಣೆ ಆಗಲಿದೆ. ನಂತರದಲ್ಲಿ ತನಿಖೆ ಮಾಡಿ ಅವಘಡಕ್ಕೆ ಕಾರಣ ಆದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Whats_app_banner