ಹುಣಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಅವಘಡ: ಐವರಿಗೆ ಸುಟ್ಟ ಗಾಯ
ಮೈಸೂರು ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಅವಘಡ ಸಂಭವಿಸಿದ್ದು, ಸಹಾಯಕ್ಕೆ ಬಂದ ಪಕ್ಕದ ಮನೆಯ ಮೂವರು ಸೇರಿದಂತೆ ಒಟ್ಟು ಐವರಿಗೆ ಸುಟ್ಟ ಗಾಯ ಉಂಟಾಗಿದೆ.

ಮೈಸೂರು : ಮೈಸೂರು ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಇಬ್ಬರ ಸಹಾಯಕ್ಕೆ ಬಂದ ಪಕ್ಕದ ಮನೆಯ ಮೂವರು ಸೇರಿದಂತೆ ಒಟ್ಟು ಐವರಿಗೆ ಸುಟ್ಟ ಗಾಯಗಳು ಉಂಟಾಗಿವೆ. ಹುಣಸೂರು ನಗರದ ಕಲ್ಕುಣಿಕೆಯ ಕುರ್ಜನ್ ಬೀದಿಯ ವಠಾರದಲ್ಲಿ ಈ ಘಟನೆ ನಡೆದಿದೆ. ಗ್ಯಾಸ್ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಐವರಿಗೆ ಗಾಯವಾಗಿದೆ.
ನಿಂಗರಾಜು ಎಂಬುವರ ಮನೆಯಲ್ಲಿ ಘಟನೆ ನಡೆದಿದ್ದು, ನಿಂಗರಾಜು ಪತ್ನಿ ಜ್ಯೋತಿ, ಪಕ್ಕದ ಮನೆಯ ರಾಣಿಯಮ್ಮ, ಶೀಲ ಮತ್ತು ನಾಗಮ್ಮಗೆ ಗಾಯಗಳಾಗಿವೆ. ಗಾಯಗೊಂಡವರಿಗೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಂಗರಾಜುರವರ ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ದಂಪತಿಗೆ ಮೊದಲು ಬೆಂಕಿ ಹತ್ತಿಕೊಂಡಿತ್ತು.
ಬೆಂಕಿ ಹತ್ತಿಕೊಂಡಿದ್ದರಿಂದ ದಂಪತಿ ಕಿರುಚಾಡಿದ್ದಾರೆ. ಆಗ ಜೋರಾದ ಶಬ್ದ ಕೇಳಿದ ಪಕ್ಕದ ಮನೆಯವರಾದ ರಾಣಿಯಮ್ಮ, ಶೀಲ, ನಾಗಮ್ಮರವರು ನೋಡಲು ಹೋಗುತ್ತಿದ್ದಂತೆ ಅವರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದೆ. ಈ ಸಂಬಂಧ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಶಾಸಕ ಜಿ ಡಿ ಹರೀಶ್‌ಗೌಡ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.