Infosys Layoff: ಇನ್ಫೋಸಿಸ್‌ ತರಬೇತಿಗೆ ಬಂದ ಉದ್ಯೋಗಿಗಳ ವಜಾ, ವಿವರಣೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ: ಕಾರ್ಮಿಕ ಇಲಾಖೆ ಆಯುಕ್ತ
ಕನ್ನಡ ಸುದ್ದಿ  /  ಕರ್ನಾಟಕ  /  Infosys Layoff: ಇನ್ಫೋಸಿಸ್‌ ತರಬೇತಿಗೆ ಬಂದ ಉದ್ಯೋಗಿಗಳ ವಜಾ, ವಿವರಣೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ: ಕಾರ್ಮಿಕ ಇಲಾಖೆ ಆಯುಕ್ತ

Infosys Layoff: ಇನ್ಫೋಸಿಸ್‌ ತರಬೇತಿಗೆ ಬಂದ ಉದ್ಯೋಗಿಗಳ ವಜಾ, ವಿವರಣೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ: ಕಾರ್ಮಿಕ ಇಲಾಖೆ ಆಯುಕ್ತ

Infosys Layoff: ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಫ್ರೆಷರ್ಸ್‌ಗಳನ್ನು ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಮಿಕ ಇಲಾಖೆಯು ವಿವರಗಳನ್ನು ಸಂಗ್ರಹಿಸಿ ವರದಿಯನ್ನು ಸಲ್ಲಿಸಲಿದೆ.

ಮೈಸೂರಿನ ಇನ್ಪೋಸಿಸ್‌ ಕ್ಯಾಂಪಸ್‌ನ ವಜಾಗೊಳಿಸಿರುವ ವಿಚಾರದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮಾತನಾಡಿದ್ದಾರೆ.
ಮೈಸೂರಿನ ಇನ್ಪೋಸಿಸ್‌ ಕ್ಯಾಂಪಸ್‌ನ ವಜಾಗೊಳಿಸಿರುವ ವಿಚಾರದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮಾತನಾಡಿದ್ದಾರೆ.

Infosys Layoff: ಮೈಸೂರಿನಲ್ಲಿರುವ ಇನ್ಫೋಸಿಸ್‌ ಸಂಸ್ಥೆಯ ಜಾಗತಿಕ ತರಬೇತಿ ಕೇಂದ್ರದಲ್ಲಿನ ಫ್ರೆಷರ್ಸ್‌ ಅನ್ನು ತೆಗೆದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದಿದೆ. ಮೈಸೂರು ಕ್ಯಾಂಪಸ್‌ಗೆ ಇಲಾಖೆಯ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ತಂಡವು ವಿವರಣೆ ಪಡೆದಿದ್ದು, ವರದಿಯನ್ನು ಒಂದೆರಡು ದಿನಗಳಲ್ಲಿ ಸಲ್ಲಿಸಲಿದೆ. ವರದಿ ಆಧರಿಸಿ ಕರ್ನಾಟಕ ಸರ್ಕಾರಕ್ಕೆ ಪ್ರತ್ಯೇಕ ವರದಿಯನ್ನು ಸಲ್ಲಿಸಲಾಗುವುದು. ಸರ್ಕಾರದಿಂದ ಬರುವ ಸೂಚನೆ ಆಧರಿಸಿ ಇನ್ಫೋಸಿಸ್‌ ಸಂಸ್ಥೆಗೆ ನೋಟಿಸ್‌ ನೀಡುವುದೋ ಅಥವಾ ಬೇರೆ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೋ ಎನ್ನುವ ಕುರಿತು ಪರಿಶೀಲಿಸಲಾಗುವುದು ಎಂದು ಕರ್ನಾಟಕ ಕಾರ್ಮಿಕ ಇಲಾಖೆಯ ಆಯುಕ್ತ ಎಚ್‌.ಎನ್‌.ಗೋಪಾಲಕೃಷ್ಣ ಹೇಳುತ್ತಾರೆ.

ವಿವಾದದ ಹಿನ್ನೆಲೆಯಲ್ಲಿ ಹಿಂದೂಸ್ತಾನ್‌ ಟೈಂಸ್‌ ಕನ್ನಡದೊಂದಿಗೆ ಮಾತನಾಡಿದ ಅವರು, ಇನ್ಫೋಸಿಸ್‌ನಲ್ಲಿ ತರಬೇತಿ ಹಂತದಲ್ಲಿದ್ದ ನೌಕರರು ಈಗಾಗಲೇ ಇಲಾಖೆಗೆ ನೀಡಿದ್ದಾರೆ. ಏಕಾಏಕಿ ನಮ್ಮನ್ನು ತೆಗೆದು ಹಾಕಿದ್ದು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ದೂರು ಆಧರಿಸಿ ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ್‌ ನೇತೃತ್ವದ ಅಧಿಕಾರಿಗಳ ತಂಡವು ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಅಲ್ಲಿನ ಮಾನವ ಸಂಪನ್ಮೂಲ ವಿಭಾಗದವರು ವಿವರಣೆಯನ್ನು ನೀಡಿದ್ದಾರೆ. ಲಿಖಿತವಾಗಿಯೇ ಮಾಹಿತಿಯನ್ನು ಒದಗಿಸಿದ್ದಾರೆ. ಈ ಸಂಬಂಧ ಇಲಾಖೆ ಅಧಿಕಾರಿಗಳ ತಂಡ ವರದಿ ಸಲ್ಲಿಸಲಿದೆ. ವರದಿ ಆಧರಿಸಿ ಅಲ್ಲಿನ ಸ್ಥಿತಿಗತಿ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ತಿಳಿಸಿದರು.

ಕೋವಿಡ್‌ ವೇಳೆಯಲ್ಲಿ ನೇಮಕಾತಿ ಆದೇಶ ಪಡೆದವರೂ ತರಬೇತಿಗೆ ಬಂದಿರಲಿಲ್ಲ. ಮೂರು ತಿಂಗಳ ಹಿಂದೆ ತರಬೇತಿ ಶುರು ಮಾಡಿದವವರ ನಿಗದಿತ ಅವಧಿಯ ಕಾರ್ಯಕ್ಷಮತೆ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಕಾರ್ಮಿಕ ಕಾನೂನುಗಳು ಹಾಗೂ ಕೈಗಾರಿಕಾ ವ್ಯಾಜ್ಯಗಳ ವ್ಯಾಪ್ತಿಯಡಿ ಏನು ಮಾಡಬಹುದು ಎನ್ನುವ ಕುರಿತು ಸಲಹೆ ಪಡೆಯಲಾಗುತ್ತದೆ. ಅಲ್ಲದೇ ಆಫರ್‌ ಪತ್ರಗಳ ದಾಖಲೆಗಳನ್ನು ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗುವುದು. ಸೋಮವಾರದ ಒಳಗೆ ವರದಿ ಬರುವ ನಿರೀಕ್ಷೆಯಿದೆ. ಆನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ ಅವರು.

ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಇನ್ಫೋಸಿಸ್‌ ಸಂಸ್ಥೆಗೆ ನೊಟೀಸ್‌ ನೀಡುವುದೋ ಅಥವಾ ಬೇರೆ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು. ಕನಿಷ್ಠ ಇಷ್ಟು ದಿನ ಕೆಲಸ ಮಾಡಿದ್ದರೆ ಅವರ ಸೇವೆ ತರಬೇತಿ ಅವಧಿ ಮುಗಿಯಲಿದೆ ಎನ್ನುವುದು ಕಾರ್ಮಿಕ ಕಾನೂನಿನಲ್ಲಿದೆ. ಇದು ಐಟಿ ವಲಯವಾಗಿರುವುದರಿಂದ ಕಾರ್ಮಿಕ ಎಂದು ಪರಿಗಣನೆಯಾಗುವುದಿಲ್ಲ. ಕೈಗಾರಿಕಾ ವ್ಯಾಜ್ಯಗಳ ಕಾಯಿದೆಯಡಿ ಇದನ್ನು ಪರಿಶೀಲಿಸಬೇಕಾಗುತ್ತದೆ. ಈ ಕಾರಣಕ್ಕೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ವರದಿಯಲ್ಲಿ ತಿಳಿಸಲಾಗುತ್ತದೆ ಎಂದರು ಗೋಪಾಲಕೃಷ್ಣ.

ಕೇಂದ್ರದಿಂದಲೂ ಸೂಚನೆ

ಈ ನಡುವೆ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಐಟಿ ವಲಯದ ಉದ್ಯೋಗಿಗಳ ಸಂಘಟನೆ ನೈಟ್ಸ್‌( ನಾಸೆಂಟ್‌ ಇನ್‌ಫಾರ್ಮೇಷನ್‌ ಟೆಕ್ನಾಲಜಿ ಎಂಪ್ಲಾಯಸ್‌ ಸೆನೆಟ್‌) ನೀಡಿದ ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಗೆ ಇನ್ಫೋಸಿಸ್‌ ಫ್ರೆಷರ್ಸ್‌ ವಜಾ ಸಮಸ್ಯೆ ಪರಿಹರಿಸಲು ತುರ್ತು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೇ ದೂರುದಾರರಿಗೂ ಕೈಗೊಂಡ ಕ್ರಮದ ಕುರಿತು ವಿವರಣೆ ಕೊಡಬೇಕು ಎನ್ನುವ ಸೂಚನೆ ಕೊಡಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner