Mysore News: ಮೈಸೂರು ಜೈಲಿನ ಮೂವರು ಖೈದಿಗಳ ಸಾವು; ಕೇಕ್‌ಗೆ ಬಳಸುವ ಎಸೆನ್ಸ್ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜೀವಾವಧಿ ಶಿಕ್ಷಿತರು
ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕೇಕ್ ತಯಾರಿಸುವ ಎಸೆನ್ಸ್ ಅನ್ನು ಸೇವಿಸಿದ್ದ ಮೂವರು ಖೈದಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೈಸೂರು: ಕೇಕ್‌ಗೆ ಬಳಸುವ ಎಸೆನ್ಸ್ ಅನ್ನು ಸೇವಿಸಿದ್ದ ಮೂವರು ಖೈದಿಗಳು ಮೃತಪಟ್ಟಿರುವ ಘಟನೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆಯೇ ಘಟನೆ ನಡೆದು ಮೂವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಮೈಸೂರಿನ ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲು ಒಬ್ಬಾತ ಮೃತಪಟ್ಟಿದ್ದು, ಇನ್ನಿಬ್ಬರು ಬುಧವಾರ ಅಸುನೀಗಿದ್ದಾರೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೂವರೂ ಕಾರಾಗೃಹದ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಎಸೆನ್ಸ್ ಸೇವಿಸಿ ಮೃತಪಟ್ಟಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮೈಸೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಶವಾಗಾರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮಾದೇಶ, ಕೊಳ್ಳೇಗಾಲ ತಾಲೂಕು ಸತ್ತೇಗಾಲ ಗ್ರಾಮದ ನಾಗರಾಜು, ಹಾಸನ ಮೂಲದ ರಮೇಶ್ ಮೃತರು.
ಏನಿದು ಘಟನೆ
ಮೈಸೂರು ಕಾರಾಗೃಹದಲ್ಲಿ ಒಂದೂವರೆ ದಶಕದಿಂದಲೂ ಬೇಕರಿ ವಿಭಾಗವಿದ್ದು. ಇಲ್ಲಿ ಖೈದಿಗಳೇ ಬೇಕರಿ ಉತ್ಪನ್ನ ತಯಾರಿಸುತ್ತಾರೆ. ಡಿಸೆಂಬರ್ 26ರಂದು ಕೇಕ್‌ಗೆ ಬಳಸುವ ಎಸೆನ್ಸ್ ಕುಡಿದು ಅಸ್ವಸ್ಥರಾಗಿದ್ದ ಮೂವರು ಖೈದಿಗಳನ್ನು ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಕ್ಕೆ ಅವರು ಒಳಗಾಗಿದ್ದರು. ಇದರಲ್ಲಿ ಮಾದೇಶ್ ಮಂಗಳವಾರ ಮೃತದಾದರೆ ಕೊಳ್ಳೇಗಾಲದ ನಾಗರಾಜು ಹಾಗೂ ಹಾಸನದ ರಮೇಶ್ ಬುಧವಾರ ಕೊನೆಯುಸಿರೆಳೆದರು ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಸಿಲುಕಿದ್ದ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆನಂತರ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿಯೇ ಇದ್ದ ಮೂವರು ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಬೇಕರಿ ವಿಭಾಗಕ್ಕೆ ಹಾಕಲಾಗಿತ್ತು. ಅಲ್ಲಿಯೇ ಕೆಲ ದಿನಗಳಿಂದ ಬೇಕರಿ ಉತ್ಪನ್ನ ತಯಾರಿಸಲು ಸಹಕರಿಸುತ್ತಿದ್ದರು.
ಏನಿದು ಎಸೆನ್ಸ್
ಬೇಕರಿ ಉತ್ಪನ್ನಗಳಿಗೆ ಸುವಾಸನೆ ಬರಲಿ ಎನ್ನುವ ಕಾರಣಕ್ಕೆ ವಿವಿಧ ಬಣ್ಣಗಳ ಎಸೆನ್ಸ್‌ನ್ನ ಬಳಕೆ ಮಾಡಲಾಗುತ್ತದೆ. ದ್ರವ ರೂಪದ ಎಸೆನ್ಸ್ ಅನ್ನು ಮೂವರು ಸೇವಿಸಿದ್ದರು.
ಅಸ್ವಸ್ಥರಾದ ಮೂವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಹೆಚ್ಚಿನ ಪ್ರಮಾಣದಲ್ಲಿ ಎಸೆನ್ಸ್ ಅನ್ನು ಸೇವಿಸಿದ್ದರಿಂದ ಚೇತರಿಸಿಕೊಳ್ಳಲು ಆಗಲಿಲ್ಲ ಎನ್ನಲಾಗುತ್ತಿದೆ.
ತನಿಖೆಗೆ ಸೂಚನೆ
ಜೀವಾವಧಿ ಶಿಕ್ಷಿತರ ಪ್ರಕರಣ ಆಗಿರುವುದರಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಸಂಬಂಧ ಬಂಧಿಖಾನೆ ಡಿಐಜಿ ಅವರು ವಿಚಾರಣೆಗೆ ಆದೇಶಿಸಿದ್ದಾರೆ. ಅವರಿಗೆ ಎಸೆನ್ಸ್ ಹೆಚ್ಚಿನ ಪ್ರಮಾಣದಲ್ಲಿ ಹೇಗೆ ಸಿಕ್ಕಿತು. ಅಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗ ಏನು ಮಾಡುತ್ತಿದ್ದರು ಎನ್ನುವ ಕುರಿತು ತನಿಖೆ ನಡೆಸಲಾಗುತ್ತದೆ.
ಆಸ್ಪತ್ರೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೃತ ನಾಗರಾಜು ಅಣ್ಣನ ಮಗ ಮಲ್ಲು, ನಮ್ಮ ಚಿಕ್ಕಮ್ಮ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜೈಲು ಸೇರಿದ್ದರು. ಚಾಮರಾಜನಗರ ಜೈಲಿನಲ್ಲಿ 6 ವರ್ಷ ಇದ್ದು, 7 ತಿಂಗಳ ಹಿಂದೆಯಷ್ಟೇ ಮೈಸೂರು ಜೈಲಿಗೆ ಬಂದಿದ್ದರು ನಮ್ಮ ಚಿಕ್ಕಪ್ಪ. ಡಿಸೆಂಬರ್ 26ರಂದು ನಮ್ಮ ಚಿಕ್ಕಪ್ಪನಿಗೆ ಕಿಡ್ನಿ ತೊಂದರೆ ಇದೆ ಎಂದು ಆಸ್ಪತ್ರೆಗೆ ಸೇರಿಸಿದ್ದಾಗಿ ಮಾಹಿತಿ ನೀಡಿದ್ದರು. ನಾವೆಲ್ಲರೂ ಆಸ್ಪತ್ರೆಗೆ ಬಂದಿದ್ದೆವು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಈ ವೇಳೆ ಅವರೊಂದಿಗೆ ಮಾತನಾಡಿದಾಗ ಕ್ರಿಸ್ಮಸ್ ಗೆ ತಯಾರಿಸಿದ್ದ ಕೇಕ್ ತಿಂದಾಗ ಹೀಗೆ ಆಯಿತು. ಆನಂತರ ಬಿಸಿಬೇಳೆ ಬಾತ್ ತಿಂದಿದ್ದರಂತೆ. ಕೇಕ್ ಹಾಗೂ ಬಿಸಿಬೇಳೆ ಬಾತ್ ತಿಂದ ನಂತರ ಹೊಟ್ಟೆ ನೋವು ಬಂದಿತ್ತು ಎಂದು ಹೇಳಿದ್ದರು. ಈಗ ಮೃತಪಟ್ಟಿದ್ದಾರೆ ಎಂದು ಕಣ್ಣೀರಾದರು.
ಏಕಾಗಿದೆ, ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಘಟನೆಗೆ ಕಾರಣ ಏನು ಎಂಬುದನ್ನು ಪೊಲೀಸರೇ ತಿಳಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದರು.
ವಿಭಾಗ