ಮೈಸೂರು‌ ಕರಗ ಮಹೋತ್ಸವ 2025 ಕ್ಕೆ ಇಂದು ವಿದ್ಯುಕ್ತ ಚಾಲನೆ; ಮೇ 3ರಂದು ನಡೆವ ಇತಿಹಾಸ ಪ್ರಸಿದ್ದ ಈ ಉತ್ಸವ ಮಿನಿ ದಸರಾ ಎಂದೇ ಖ್ಯಾತಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು‌ ಕರಗ ಮಹೋತ್ಸವ 2025 ಕ್ಕೆ ಇಂದು ವಿದ್ಯುಕ್ತ ಚಾಲನೆ; ಮೇ 3ರಂದು ನಡೆವ ಇತಿಹಾಸ ಪ್ರಸಿದ್ದ ಈ ಉತ್ಸವ ಮಿನಿ ದಸರಾ ಎಂದೇ ಖ್ಯಾತಿ

ಮೈಸೂರು‌ ಕರಗ ಮಹೋತ್ಸವ 2025 ಕ್ಕೆ ಇಂದು ವಿದ್ಯುಕ್ತ ಚಾಲನೆ; ಮೇ 3ರಂದು ನಡೆವ ಇತಿಹಾಸ ಪ್ರಸಿದ್ದ ಈ ಉತ್ಸವ ಮಿನಿ ದಸರಾ ಎಂದೇ ಖ್ಯಾತಿ

ಮೈಸೂರಿನ ಇತಿಹಾಸ ಪ್ರಸಿದ್ದ ಕರಗವು ನೂರು ವರ್ಷಗಳನ್ನು ಈಗಾಗಲೇ ಪೂರೈಸಿದೆ. ಈ ವರ್ಷ ಕರಗ ಮಹೋತ್ಸವದ ಚಟುಟಿಕೆಗಳಿಗೆ ಚಾಲನೆ ನೀಡಲಾಗಿದೆ.

ಮೈಸೂರು ಕರಗ ಉತ್ಸವದ ಧಾರ್ಮಿಕ ಚಟುವಟಿಕೆಗಳು ಮಂಗಳವಾರ ಆರಂಭಗೊಂಡಿವೆ.
ಮೈಸೂರು ಕರಗ ಉತ್ಸವದ ಧಾರ್ಮಿಕ ಚಟುವಟಿಕೆಗಳು ಮಂಗಳವಾರ ಆರಂಭಗೊಂಡಿವೆ.

ಮೈಸೂರು: ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸುತ್ತಾ ಬಂದಿರುವ ಕರಗ ಮಹೋತ್ಸವಕ್ಕೆ ಈ ವರ್ಷವೂ ಧಾರ್ಮಿಕ ವಿಧಿವಿಧಾನಗಳು ಮಂಗಳವಾರ ಶುರುವಾಗಿವೆ. ಅಂದಿನ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಚಾಲನೆ ಪಡೆದುಕೊಂಡಿರುವ ಶ್ರೀ‌ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ 101 ನೇ ವರ್ಷದ ಮೈಸೂರು ಕರಗ ಮಹೋತ್ಸವಕ್ಕೆ ಇಂದು ಅದ್ದೂರಿಯ ಚಾಲನೆ ‌ಸಿಕ್ಕಿದೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ನೆಲೆ ನಿಂತಿರುವ ಚಾಮುಂಡಿ ಬೆಟ್ಟದಿಂದ ಇಂದು ಹಸಿ ಕರಗ ತರುವ ಮೂಲಕ ಕರಗ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು. ಚಾಮುಂಡಿಬೆಟ್ಟದಿಂದ ಹೊರಟ ಹಸಿ‌ಕರಗ ಇಟ್ಟಿಗೆಗೂಡಿಗೆ ಆಗಮಿಸುತ್ತಿದ್ದಂತೆ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಯಿತು.

ಇಂದಿನಿಂದ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ಮೇ 3ರಂದು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ನಡೆಯಲಿರುವ ಕರಗ ಮಹೋತ್ಸವದ ಮೆರವಣಿಗೆಗೆ ಸಕಲ ಸಿದ್ದತೆ ನಡೆದಿದೆ.ಮೇ 3 ರಂದು ರಾತ್ರಿ 8 ಗಂಟೆ ಸುಮಾರಿಗೆ ಇಟ್ಟಿಗೆಗೂಡಿನಿಂದ ಮೆರವಣಿಗೆ ಆರಂಭವಾಗಲಿದೆ. ಮೈಸೂರು‌ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ‌ಸಮ್ಮುಖದಲ್ಲಿ ಕರಗ ಮಹೋತ್ಸವದ ಮೆರವಣಿಗೆಗೆ ಚಾಲನೆ ಸಿಗಲಿದೆ.

ಬಳಿಕ ಚಾಮರಾಜ ಜೋಡಿ ರಸ್ತೆ, ನಾರಾಯಣ ಶಾಸ್ತ್ರಿರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ ರಸ್ತೆ, ಕಬೀರ್ ರಸ್ತೆ, ಕಾಳಮ್ಮನಗುಡಿ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಅಶೋಕರಸ್ತೆ, ನಜರ್ ಬಾದ್, ಚಾಮರಾಜೇಂದ್ರ ಮೃಗಾಲಯ ರಸ್ತೆ ಮಾರ್ಗವಾಗಿ ಮೇ 4 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ದೇಗುಲಕ್ಕೆ ಬಂದ ನಂತರ ಮೆರವಣಿಗೆ ಅಂತ್ಯವಾಗಲಿದೆ.

ಕರಗ ಮಹೋತ್ಸವದ ಅಂಗವಾಗಿ ಏಪ್ರಿಲ್ 29 ರಿಂದ ಮೇ 5 ರವರೆಗೆ ವಿವಿಧ ಧಾರ್ಮಿಕ ವಿಧಿಗಳು ಮುಂದುವರಿಯಲಿವೆ.

ಮೈಸೂರು ಕರಗ ಮಹೋತ್ಸವಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ.

ಶತಮಾನದ ಹಿಂದೆ ಇಡೀ ಊರಿಗೆ ಸಾಂಕ್ರಾಮಿಕ ರೋಗರುಜಿನಗಳು ಹರಡಿದ ಪರಿಣಾಮ ಪ್ರತಿನಿತ್ಯ ಹತ್ತಾರು ಮಂದಿ ಸಾವನ್ನಪ್ಪುತ್ತಿದ್ದರು. ಮನೆ ಮಂದಿಯೆಲ್ಲಾ ರೋಗದಿಂದ ಬಳಲುತ್ತಿದ್ದರೇ ಮಳೆಯೂ ಇಲ್ಲದೇ ಕ್ಷಾಮ ಕೂಡ ಆವರಿಸಿತ್ತು. ಈ ಎಲ್ಲಾ ಜಂಜಾಟಗಳ ನಡುವೆ ಪ್ರತಿನಿತ್ಯ ಸಾವನ್ನಪ್ಪುತ್ತಿದ್ದವರ ಅಂತ್ಯ ಸಂಸ್ಕಾರ ನಡೆಸುವುದು ಸವಾಲಿನ ಕೆಲಸವಾಗಿತ್ತು. ಇದರಿಂದ ದಿಕ್ಕು ತೋಚದಾದ ಜನರೆಲ್ಲರೂ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಮೊರೆ ಹೋದರು. ಅಂದಿನಿಂದ ಆರಂಭವಾದ ಮೈಸೂರು ಕರಗ ಮಹೋತ್ಸವಕ್ಕೆ ಈ ಬಾರಿ 101ನೇ ವರ್ಷದ ಸಂಭ್ರಮ. ಮೈಸೂರು ಕರಗ ಮಹೋತ್ಸವಕ್ಕೆ ಒಂದು ತಿಂಗಳಿರುವಂತಯೇ ಯುಗಾದಿಯ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಶ್ರೀ ಮಾರಿಯಮ್ಮ ದೇವಿಗೆ ಊರಿನ ಸಕಲರೂ ಅರಿಶಿನ ನೀರಿನ ಅಭಿಷೇಕ ನೆರವೇರಿಸಿ ದೇವಿಗೆ ತಂಪನ್ನೆರೆದು ಸಂಜೆ ದೇವಿಯ ತವರು ಮನೆಯಾದ ಮಡಿವಾಳರ ಮನೆಯಲ್ಲಿ ಸಾಂಪ್ರದಾಯಿಕ ವಿಭೂತಿ ಪೂಜೆ ನೆರವೇರಿಸಿ ಎಲ್ಲರಿಗೂ ವಿಭೂತಿ ಪ್ರಸಾದ ವಿನಿಯೋಗದೊಂದಿಗೆ ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡುವುದು ವಾಡಿಕೆಯಾಗಿದೆ. ಕರಗವು ಇಟ್ಟಿಗೆಗೂಡಿನ ಎಲ್ಲಾ ರಸ್ತೆಗಳಲ್ಲೂ ಸಂಚರಿಸಿ ಹರಕೆ ಹೊತ್ತ ಭಕ್ತರ ಮನೆಗೆ ಬಂದಾಗ ಭಕ್ತರು ತಮ್ಮ ಮನೆಯಲ್ಲಿ ದೇವಿಯನ್ನು ಕೂರಿಸಿ ಹಾಲು ಮಜ್ಜಿಗೆ ಪಾನಕ ಕೋಸಂಬರಿ ಸೇರಿದಂತೆ ನಾನಾ ಬಗೆಯ ಪ್ರಸಾದಗಳನ್ನು ನೈವೇದ್ಯ ಮಾಡಿ ಪೂಜಿಸುತ್ತಾರೆ. ಹರಕೆ ಹೊತ್ತಿರುವ ಎಲ್ಲರ ಮನೆಯಲ್ಲೂ ಕರಗ ಇಳಿಸಲಾಗುತ್ತದೆ. ಮೇ 3ರಂದು ಕರಗ ಮಹೋತ್ಸವದ ಮೆರವಣಿಗೆ ಆರಂಭವಾಗುವವರೆಗೂ ಪ್ರತಿನಿತ್ಯ ಇಟ್ಟಿಗೆಗೂಡಿನ ಹರಕೆ ಹೊತ್ತ ಭಕ್ತರ ಮನೆಗೆ ಕರಗವನ್ನು ಕೊಂಡೊಯ್ಯಲಾಗುತ್ತದೆ.

ಅಂದಿನ ಆಳರಸರ ಕಾಲದಲ್ಲಿ ಆರಂಭವಾದ ಕರಗ ಮಹೋತ್ಸವ ಈ ಬಾರಿ 101 ನೇ ವರ್ಷಕ್ಕೆ ಕಾಲಿಟ್ಟಿರುವುದರಿಂದ ಇಟ್ಟಿಗೆಗೂಡಿನಾದ್ಯಂತ ಸಂಭ್ರಮ‌ ಮನೆ ಮಾಡಿದೆ. ಖುಷಿಯಿಂದ ಕರಗ ಆಚರಿಸುತ್ತಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.