ಮೈಸೂರು ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಪ್ರಸ್ತಾಪ; ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಯದುವೀರ್ ಒಡೆಯರ್
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಪ್ರಸ್ತಾಪ; ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಯದುವೀರ್ ಒಡೆಯರ್

ಮೈಸೂರು ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಪ್ರಸ್ತಾಪ; ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಯದುವೀರ್ ಒಡೆಯರ್

Mysore News: ಮೈಸೂರಿನ ಪ್ರಿನ್ಸೆನ್ಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರು ಇಟ್ಟರೆ ತಪ್ಪೇನು ಎಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ.

ಮೈಸೂರು ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಪ್ರಸ್ತಾಪ; ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಯದುವೀರ್ ಒಡೆಯರ್
ಮೈಸೂರು ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಪ್ರಸ್ತಾಪ; ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಯದುವೀರ್ ಒಡೆಯರ್

ಮೈಸೂರು: ಇಲ್ಲಿನ ಪ್ರಿನ್ಸೆಸ್ ರಸ್ತೆಗೆ ಮುಖ್ಯಮಂತ್ರಿ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡುವ ವಿಚಾರಕ್ಕೆ ಸಂಬಂಧಿಸಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಹೆಸರಿಡಲಿ ಎಂದು ಪ್ರಸ್ತಾಪಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ. ನಾನು ಸಂಸದನಾದ ನಂತರ ರಾಜಮನೆತನ ಹೆಚ್ಚು ಗುರಿಯಾಗುತ್ತಿದೆ. ಪ್ರತಾಪ್ ಸಿಂಹ ಅವರು ಇತಿಹಾಸ ಮರೆತಿದ್ದಾರೆ ಎನ್ನಿಸುತ್ತಿದೆ. ನಾನು ಇತಿಹಾಸ ಹೇಳಿದ ಮೇಲೆ ಮತ್ತೆ ನೆನಪಾಗಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ನನ್ನ ವಿರೋಧವಿಲ್ಲ. ಆದರೆ ಪ್ರಿನ್ಸೆಸ್ ರಸ್ತೆಗೆ ಅವರ ಹೆಸರಿಡುವುದು ಬೇಡ. ಹಿಂದಿನಿಂದಲೂ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ, ಕೆಆರ್‌ಎಸ್ ರಸ್ತೆ ಎಂದು ಕರೆಯುತ್ತಾರೆ. ರಾಜಕುಮಾರಿ ಕೃಷ್ಣರಾಜಮ್ಮಣ್ಣಿ ಹಾಗೂ ಅವರ ಮಕ್ಕಳು ಟಿಬಿಯಿಂದ ಮೃತರಾಗುತ್ತಾರೆ. ಈ ರೀತಿ ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಂಗಿಯ ನೆನೆಪಿಗಾಗಿ ಅಲ್ಲಿ ಟಿಬಿ ಆಸ್ಪತ್ರೆ ಕಟ್ಟಿಸುತ್ತಾರೆ. ಅದಕ್ಕಾಗಿ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ ಅಥವಾ ರಾಜಕುಮಾರಿ ರಸ್ತೆ, ಕೆ ಆರ್​​ಎಸ್​ರಸ್ತೆ ಎಂದೇ ಕರೆಯುತ್ತಾರೆ ಎಂದು ಯದುವೀರ್ ಇತಿಹಾಸ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಈ ಹಿಂದಿನಿಂದಲೂ ರಾಜಮನೆತನವನ್ನು ಸರ್ಕಾರ ಗುರಿ ಮಾಡುತ್ತಿದೆ. ಚಾಮುಂಡಿ ಬೆಟ್ಟ, ಪ್ರಾಧಿಕಾರ, ಕುರುಬಾರಹಳ್ಳಿ ವಿಚಾರಗಳ ಬಗ್ಗೆಯೂ ಹೇಳುವುದಿದೆ. ಆದರೆ ನಾನು ಹೇಳಲ್ಲ ಎಂದು ಹೇಳಿದ್ದಾರೆ.

ಈಗ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿಲ್ಲ. ಯಾರು ಜನಪ್ರತಿನಿಧಿಗಳು ಇಲ್ಲ. ಈಗ ರೀತಿಯ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಮೈಸೂರಿನಲ್ಲಿ ಸಾಕಷ್ಟು ರಸ್ತೆಗಳಿವೆ. ಅದರಲ್ಲಿ ಯಾವುದಕ್ಕಾದರೂ ಸಿದ್ದರಾಮಯ್ಯ ಅವರ ಹೆಸರಿಡಲಿ. ಇದೇ ವಿಚಾರಕ್ಕೆ ಹಿಂದಿನಿಂದಲೂ ಸಾಕಷ್ಟು ಜನರು ಹೋರಾಟ ಮಾಡುತ್ತಿದ್ದಾರೆ. ಈಗ ಮಹಾನಗರ ಪಾಲಿಕೆಗೆ ಸಾಕಷ್ಟು ಜನ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ಹರೀಶ್ ಗೌಡ ಹೇಳಿದ್ದೇನು?

ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರು ಪ್ರಸ್ತಾಪಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರು, ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡಲು ಪ್ರಸ್ತಾಪಿಸಿದ್ದೇ ನಾನು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಿದ್ದರಾಮಯ್ಯ ಆರೋಗ್ಯ ಮಾರ್ಗಕ್ಕೆ ವಿರೋಧ ಮಾಡುತ್ತಿರುವವರು ಹೊಟ್ಟೆ ಕಿಚ್ಚಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಾರಾಜರ ನಂತರ ಮೈಸೂರಿಗೆ ಅತಿ ಹೆಚ್ಚು ಕೊಡುಗೆ ಕೊಟ್ಟವರು ಸಿದ್ದರಾಮಯ್ಯ. ಶಾಲಾ ಕಾಲೇಜುಗಳ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಬಹಳ ದೊಡ್ಡದು ಎಂದ ಅವರು, ಪ್ರತಾಪ್ ಸಿಂಹ ಹೇಳಿದ್ದನ್ನು ಕೇಳಿ ಖುಷಿಯಾಯ್ತು ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಅವರು ಚೆನ್ನಾಗಿ ಸಿದ್ದರಾಮಯ್ಯ ಅವರ ಸಾಧನೆ ವಿವರಿಸಿದ್ದಾರೆ. ಮನಸ್ಸು ಶುದ್ದಿ ಇಲ್ಲದವರು ಮಾತ್ರ ಸಿದ್ದರಾಮಯ್ಯನವರ ಹೆಸರು ವಿರೋಧಿಸುತ್ತಾರೆ. ಮಹಾತ್ಮ ಗಾಂಧಿ ಮೇಲೂ ಆರೋಪ ಮಾಡುತ್ತಾರೆ. ನಾಥೂರಾಮ್ ಗೋಡ್ಸೆ, ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದು ತಪ್ಪಲ್ಲ ಎಂದು ಬಿಜೆಪಿ ಹೇಳುತ್ತದೆ. ಇದು ಬಿಜೆಪಿ ಲಕ್ಷಣ. ಸಿದ್ದರಾಮಯ್ಯ ಮೇಲೆ ಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ. ನೂರಕ್ಕೆ ನೂರು ಸಿದ್ದರಾಮಯ್ಯ ಹೆಸರನ್ನು ಕೆಆರ್​ಎಸ್​ ರಸ್ತೆಗೆ ಇಡುತ್ತೇವೆ. ಕಾನೂನಾತ್ಮಕವಾಗಿಯೇ ಹೆಸರು ಇಡುತ್ತೇವೆ. ನೂರಕ್ಕೆ ನೂರರಷ್ಟು ಸಿದ್ದರಾಮಯ್ಯನವರ ಹೆಸರನ್ನೇ ಇಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಕೆ ಹರೀಶ್ ಗೌಡ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

Whats_app_banner