Mysore News: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿನಾಯಿಗಳಿಗೆ ಆಹಾರ ನಿಷೇಧ ವಿವಾದ; ಕುಲಸಚಿವೆ ಶೈಲಜಾ ಹಠಾತ್ ವರ್ಗಾವಣೆ
ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿ ನಾಯಿಗಳಿಗೆ ಆಹಾರ ಕೊಡುವುದನ್ನು ನಿಷೇಧಿಸಿದ ವಿವಾದದ ಬೆನ್ನಲ್ಲೇ ಮೈಸೂರು ವಿವಿ ಕುಲಸಚಿವರಾಗಿದ್ದ ವಿ.ಆರ್.ಶೈಲಜಾ ಅವರನ್ನು ವರ್ಗ ಮಾಡಲಾಗಿದೆ.

ಮೈಸೂರು: ಮೈಸೂರಿನ ಪ್ರಮುಖ ಪ್ರವಾಸಿ ಹಾಗೂ ವಾಯು ತಾಣವಾದ ಕುಕ್ಕರಹಳ್ಳಿ ಕೆರೆ ಪ್ರದೇಶಕ್ಕೆ ಬರುವ ಬೀದಿ ನಾಯಿಗಳು, ಪಾರಿವಾಳಗಳಿಗೆ ಆಹಾರ ಹಾಕುವುದನ್ನು ಮೈಸೂರು ವಿಶ್ವವಿದ್ಯಾನಿಲಯ ನಿಷೇಧಿಸಿದೆ. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಹಿರಿಯ ಕೆಎಎಸ್ ಅಧಿಕಾರಿ ವಿ.ಆರ್.ಶೈಲಜಾ ಅವರಿಗೆ ಹುದ್ದೆ ತೋರಿಸದೇ ಕರ್ನಾಟಕ ಸರ್ಕಾರ ಮಂಗಳವಾರ ರಾತ್ರಿ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅವರು ಬೆಂಗಳೂರಿನ ಸಿಬ್ಬಂದಿ ಸುಧಾರಣೆ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅವರ ಸ್ಥಳಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾಗಿರುವ ಎಂ.ಕೆ. ಸವಿತಾ ಅವರನ್ನು ನೇಮಕ ಮಾಡಲಾಗಿದೆ. ಎರಡು ವರ್ಷದಿಂದ ಶೈಲಜಾ ಅವರು ಇಲ್ಲಿ ಕುಲಸಚಿವರಾಗಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಕುಕ್ಕರಹಳ್ಳಿ ಕೆರೆಯಲ್ಲಿ ನಿತ್ಯ ಸಹಸ್ರಾರು ಜನ ವಾಯು ವಿಹಾರಕ್ಕೆ ಬೆಳಿಗ್ಗೆ ಹಾಗೂ ಸಂಜೆ ಆಗಮಿಸುತ್ತಾರೆ. ಇಲ್ಲಿಗೆ ತಮ್ಮ ಸಾಕು ನಾಯಿಗಳೊಂದಿಗೆ ಕೆಲವರು ಆಗಮಿಸುತ್ತಾರೆ. ಸುತ್ತಮುತ್ತಲಿನ ಪ್ರದೇಶದ ಬೀದಿನಾಯಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕೆರೆ ಬಳಿ ಸುತ್ತುತ್ತವೆ. ಕೆರೆ ಆವರಣದಲ್ಲಿ ಮಾಂಸಾಹಾರದ ವಹಿವಾಟು ನಡೆಯುವುದರಿಂದ ಬೀದಿ ನಾಯಿಗಳು ಸಹಜವಾಗಿಯೇ ಹೆಚ್ಚಾಗಿವೆ. ಕೆಲವರು ವಾಯುವಿಹಾರಕ್ಕೆ ಬಂದಾಗ ನಾಯಿಗಳಿಗೆ ಆಹಾರ ಹಾಕುವುದು ನಡೆದುಕೊಂಡು ಬಂದಿದೆ. ಅಲ್ಲದೇ ಪಾರಿವಾಳ ಸೇರಿ ಪಕ್ಷಿಗಳಿಗೂ ಕೆಲವರು ಆಹಾರ ಕೊಡುತ್ತಾರೆ.
ಇದರಿಂದ ಇಲ್ಲಿ ವಾಯುವಿಹಾರಕ್ಕೆ ಬರುವವರಿಗೆ ತೊಂದರೆಯಾಗುತ್ತದೆ ಎನ್ನುವ ದೂರನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡಲಾಗಿತ್ತು. ಇದರಂತೆ ಇಲ್ಲಿ ಸ್ವಚ್ಛತೆ ಕಾಪಾಡಬೇಕು ಎನ್ನುವ ಉದ್ದೇಶದಿಂದ ಕುಕ್ಕರಹಳ್ಳಿ ಕೆರೆಯಲ್ಲಿ ಯಾವುದೇ ಸಾಕು ಪ್ರಾಣಿ ತರುವ ಹಾಗಿಲ್ಲ. ಬೀದಿ ನಾಯಿಗಳಿಗೆ ಆಹಾರ ಹಾಕುವಂತಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಆದೇಶಿಸಿದ್ದರು. ಅಷ್ಟೇ ಅಲ್ಲದೇ ಫಲಕಗಳನ್ನೂ ಹಲವು ಕಡೆ ಹಾಕಲಾಗಿತ್ತು.
ಪ್ರಾಣಿಗಳಿಗೆ ಆಹಾರ ಹಾಕುವುದನ್ನು ನಿಲ್ಲಿಸಿದ್ದರಿಂದ ಅವು ರಸ್ತೆಗೆ ಬಂದು ಸಂಚಾರಕ್ಕೂ ಅಡಚಣೆಯಾಗುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಪ್ರಾಣಿಗಳಿಗೆ ಆಹಾರ ನಿಷೇಧಿಸುವುದು ಕಾನೂನು ಬಾಹಿರ ಎಂದೂ ಟೀಕಿಸಲಾಗಿತ್ತು.
ಈ ನಡೆಗೆ ಪ್ರಾಣಿ ಪ್ರಿಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಮೈಸೂರಿನ ಪ್ರಾಣಿ ದಯಾ ಸಂಘಟನೆಗಳ ಪ್ರಮುಖರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಅಲ್ಲದೇ ಪ್ರಾಣಿ ರಕ್ಷಣಾ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವರೂ ಆಗಿರುವ ಮನೇಕಾ ಗಾಂಧಿ ಅವರಿಗೂ ದೂರು ನೀಡಲಾಗಿತ್ತು. ಅವರು ಇದನ್ನು ಗಂಭೀರವಾಗಿ ಪರಿಗಣಿಸಿ, ಇದು ಪ್ರಾಣಿಗಳ ಹಕ್ಕುಗಳ ಉಲ್ಲಂಘನೆ. ಈ ರೀತಿ ನಿಷೇಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಪರ್ಯಾಯವನ್ನು ಕಲ್ಪಿಸದೇ ಹೀಗೆ ಪ್ರಾಣಿ, ಪಕ್ಷಿಗಳ ಸಾವಿಗೆ ಕಾರಣವಾಗುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನೇಕಾ ಗಾಂಧಿ ಕೂಡ ಆಗ್ರಹಿಸಿದ್ದರು.
ಇದು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಕರ್ನಾಟಕ ಸರ್ಕಾರವು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದ ಶೈಲಜಾ ಅವರನ್ನು ವರ್ಗ ಮಾಡಿದೆ. ಅವರ ಜಾಗಕ್ಕೆ ಮತ್ತೊಬ್ಬ ಕೆಎಎಸ್ ಅಧಿಕಾರಿ ಎಂ.ಕೆ. ಸವಿತಾ ಅವರನ್ನು ನಿಯೋಜಿಸಿದೆ.
ಈ ಕುರಿತು ಮಾತನಾಡಿರುವ ಮನೇಕಾ ಗಾಂಧಿ, ಮೈಸೂರು ವಿಶ್ವವಿದ್ಯಾನಿಲಯದ ನಿರ್ವಹಣೆ ಮಾಡುತ್ತಿರುವ ಕುಕ್ಕರಹಳ್ಳಿ ಕೆರೆ ಅರಣ್ಯ ಇಲಾಖೆಗೆ ಸೇರಿದ್ದು. ಅಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದನ್ನು ವೈಜ್ಞಾನಿಕವಾಗಿ ಯೋಚಿಸದೇ ನಿಷೇಧಿಸಿರುವುದು ಸರಿಯಾದ ಕ್ರಮ ಅಲ್ಲವೇ ಅಲ್ಲ, ಈ ಬಗ್ಗೆ ಕುಲಪತಿ ಪ್ರೊ. ಲೋಕನಾಥ್ ಜತೆಗೂ ಮಾತನಾಡಿದ್ದೇನೆ, ಪ್ರಾಣಿ ರಕ್ಷಣೆ ಕುರಿತಾದ ಕಾನೂನುಗಳ ಕುರಿತೂ ಅವರಿಗೆ ಮಾಹಿತಿ ನೀಡಿದ್ದೇನೆ. ಆದೇಶ ವಾಪಾಸ್ ಪಡೆಯುವಂತೆಯೂ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
