ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡದಡಿ ಸಿಲುಕಿದ್ದ ವ್ಯಕ್ತಿ ಸಾವು; ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ರಕ್ಷಿಸಲು ಆಗಲೇ ಇಲ್ಲ
ಮೈಸೂರಿನಲ್ಲಿ ಮಹಾರಾಣಿ ಕಾಲೇಜಿನ ಪಾರಂಪರಿಕ ಕಟ್ಟಡದ ಭಾಗ ಕುಸಿದು ಅದರಡಿ ಸಿಲುಕಿದ್ದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗಿಲ್ಲ. ಆತ ಮೃತಪಟ್ಟಿರುವುದು ಖಚಿತವಾಗಿದೆ.

ಮೈಸೂರು: ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಸದ್ದಾಂ ಎನ್ನುವ ಯುವಕನನ್ನು ರಕ್ಷಿಸಲು ಆಗಲಿಲ್ಲ. ಆತ ಮೃತಪಟ್ಟಿದ್ದು ಬುಧವಾರ ಬೆಳಿಗ್ಗೆ ಶವವನ್ನು ಪತ್ತೆ ಮಾಡಲಾಗಿದೆ. ಮಂಗಳವಾರ ಸಂಜೆ ಕಟ್ಟಡವನ್ನು ತೆರವು ಮಾಡುವ ಕಾರ್ಯಾಚರಣೆ ವೇಳೆ ಕಿಟಕಿ ತೆಗೆಯುವಾಗ ಕುಸಿತವಾಗಿತ್ತು. ಈ ವೇಳೆ ಹಲವು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಓಡಿ ಬಂದರೆ ಸದ್ದಾಂ ಮಾತ್ರ ಅಲ್ಲಿಯೇ ಸಿಲುಕಿಕೊಂಡಿದ್ದ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರಿಂದ ಸದ್ದಾಂ ಹೊರ ಬರಲು ಆಗಿರಲಿಲ್ಲ. ಅಗ್ನಿಶಾಮಕ ದಳ ಹಾಗೂ ಇತರೆ ರಕ್ಷಣಾ ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ರಕ್ಷಿಸುವ ಪ್ರಯತ್ನ ಮಾಡಿದವು. ಆದರೂ ಬೆಳಗಿನಜಾವದವರೆಗೂ ಆಗಿರಲಿಲ್ಲ. ಬುಧವಾರ ಬೆಳಿಗ್ಗೆ ಹೊತ್ತಿಗೆ ಸದ್ದಾಂ ದೇಹ ಮಣ್ಣಿನ ಅಡಿ ಸಿಲುಕಿರುವುದು ಕಂಡು ಬಂದಿತು. ತೆಗೆಯುವ ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಸದ್ದಾಂ ಕುಟುಂಬದವರು ಹಾಗೂ ಸ್ನೇಹಿತರು ರಾತ್ರಿಯಿಡೀ ಅಲ್ಲಿಯೇ ಉಳಿದು ಸದ್ದಾಂ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದರು. ಬರುವ ನಿರೀಕ್ಷೆಯಲ್ಲೂ ಇದ್ದರು. ರಕ್ಷಣಾ ಸಿಬ್ಬಂದಿ ಕೂಡ ಎಚ್ಚರಿಕೆಯಿಂದಲೇ ಕಾರ್ಯಾಚರಣೆ ನಡೆಸಿದ್ದರು. ಮಣ್ಣಿನ ಅವಶೇಷ ತೆಗೆದಾಗ ಸದ್ದಾಂ ದೇಹ ಅಲ್ಲಿರುವುದು ಕಂಡು ಬಂದಿತು. ಬದುಕುಳಿರಬಹುದು ಎಂದು ಕುಟುಂಬಸ್ಥರು ಕಾತುರದಿಂದಲೇ ನೋಡಿದರು. ಆದರೆ ಮಣ್ಣುಬಿದ್ದ ರಭಸಕ್ಕೆ ಆತ ಬದುಕುಳಿದಿರಲಿಲ್ಲ. ಆತನ ದೇಹವನ್ನು ಹೊರಕ್ಕೆ ತಂದಾಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿಂದ ಸದ್ದಾಂ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ಈ ಕುರಿತು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಣಿ ಕಾಲೇಜು ಕಟ್ಟಡದ ಒಂದು ಭಾಗ ಮೂರು ವರ್ಷದ ಹಿಂದೆ ಕುಸಿದಿತ್ತು. ಅದನ್ನು ತೆರವು ಮಾಡುವ ಕೆಲಸ ಶುರುವಾಗಿತ್ತು. ಅಲ್ಲಿ ಹೊಸ ಕಟ್ಟಡ ನಿರ್ಮಿಸುವ ಚಟುವಟಿಕೆ ಶುರುವಾಗಬೇಕಿತ್ತು. ಈ ರೀತಿ ದುರಂತವಾಗಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದ್ದರು.
ನಾವು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆವು. ಒಂದು ಭಾಗದಿಂದ ಮಣ್ಣು ಹಾಗೂ ಅವಶೇಷಗಳನ್ನು ತೆಗೆಯುತ್ತಾ ಬಂದೆವು. ಆದರೂ ಆತ ಜೀವಂತವಾಗಿ ಉಳಿಯಲಿಲ್ಲ ಎಂದು ಕಾರ್ಯಾಚರಣೆ ನಿರತ ಅಗ್ನಿಶಾಮಕ ಸಿಬ್ಬಂದಿ ಹೇಳಿದರು.
ಮೈಸೂರಿನ ಗೌಸಿಯನಗರದ ನಿವಾಸಿ ಸದ್ದಾಂಗೆ 32 ವರ್ಷ. ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಯುವಕ ಕಟ್ಟಡ ಕೆಲಸದಲ್ಲಿ ನಿರತರಾಗಿದ್ದರು. ಒಂದು ದಶಕದಿಂದ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಖಾಸಗಿ ಕಂಪೆನಿ ಮಹಾರಾಣಿ ಕಾಲೇಜು ಕಟ್ಟಡದ ತೆರವು ಗುತ್ತಿಗೆ ಪಡೆದಿತ್ತು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಏಕಾಏಕಿ ತೆರವಿಗೆ ಮುಂದಾಗಿತ್ತು ಅನಾಹುತಕ್ಕೆ ಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ. ಮೈಸೂರು ಡಿಸಿ ಲಕ್ಷ್ಮಿಕಾಂತ ರೆಡ್ಡಿ ಕೂಡ ಅದನ್ನೇ ಹೇಳಿದ್ದರು. ಗುತ್ತಿಗೆ ವಹಿಸಿಕೊಂಡು ಕಂಪೆನಿ ವಿರುದ್ದ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದ್ದು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಲಾಗಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಭಾಗ ಮೂರು ವರ್ಷದಿಂದ ಭಾರೀ ಮಳೆ ಕಾರಣಕ್ಕೆ ಕುಸಿದು ಬಿದ್ದಿತ್ತು. ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದರೂ ಕಟ್ಟಡ ಕುಸಿದಾಗ ಹತ್ತಿರದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಅನಾಹುತವಾಗಿರಲಿಲ್ಲ.ವ್ಯಾಪಕ ಮಳೆ ಬಿದ್ದ ಪರಿಣಾಮ ಮಹಾರಾಣಿ ಕಲಾ ಕಾಲೇಜಿನ ಛಾವಣಿ ಹಾಗೂ ಮೊದಲ ಮಹಡಿಯ ಗೋಡೆ ಕುಸಿತವಾಗಿತ್ತು. ಇದಾದ ಬಳಿಕ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿರಲಿಲ್ಲ. ಕಟ್ಟಡ ಮರುನಿರ್ಮಾಣವೂ ಆಗಿರಲಿಲ್ಲ. ಈಗ ಶಿಥಿಲಗೊಂಡಿರುವ ಕಟ್ಟಡ ತೆರವುಗೊಳಿಸುವಾಗ ಈ ದುರ್ಘಟನೆ ನಡೆದಿದೆ

ವಿಭಾಗ