ಸಿದ್ದರಾಮಯ್ಯ ಕುಟುಂಬದ ಇನ್ನಷ್ಟು ಭ್ರಷ್ಟಾಚಾರ ಬಯಲು ಮಾಡುವೆ, ಮುಡಾ ಪ್ರಕರಣ ಸುಪ್ರೀಂಗೆ ಮೊರೆ: ಸ್ನೇಹಮಯಿ ಕೃಷ್ಣ
Mysore Muda Scam: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಿಲ್ಲುವುದಿಲ್ಲ ಎಂದು ಮೈಸೂರಿನ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

Mysore Muda Scam: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎನ್ನುವ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದದ ನಿವೇಶನ ಹಗರಣದ ಕುರಿತು ಕಾನೂನು ಹೋರಾಟ ಮಾಡುತ್ತಿರುವ ಮೈಸೂರಿನ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ಕೊಂಚ ಹಿನ್ನಡೆಯಾದರೂ ನನ್ನ ಕಾನೂನು ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಸಿಎಂ ಸಿದ್ದರಾಮಯ್ಯ ಕುಟುಂಬ ಸದಸ್ಯರ ವಿರುದ್ಧದ ಮತ್ತಷ್ಟು ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆಯುವುದಾಗಿಯೂ ಕೃಷ್ಣ ಪ್ರಕಟಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ತೀರ್ಪಿನ ಬಳಿಕ ಮೈಸೂರಿನಲ್ಲಿ ಕೃಷ್ಣ ವಿವರವಾಗಿ ಮಾತನಾಡಿದ್ದಾರೆ.
ಮುಡಾ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೊರೆ ಹೋಗಿದ್ದೆ. ಏಕೆಂದರೆ ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ನಡೆದಿಲ್ಲ. ಹಾಗಾಗಿ ಮುಡಾ ಅಕ್ರಮಗಳ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದೆ. ಆದರೆ ನ್ಯಾಯಾಲಯ ಲೋಕಾಯುಕ್ತ ನೀಡಿರುವ ತನಿಖಾ ವರದಿಯನ್ನು ಪರಿಗಣಿಸಿದಂತಿದೆ. ಹಾಗಾಗಿ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದಿರಬಹುದು. ನ್ಯಾಯಾಲಯದ ಆದೇಶದ ಪ್ರಕಾರ ಬೇರೊಂದು ತನಿಖಾ ಸಂಸ್ಥೆಯಿಂದ ಮತ್ತೊಮ್ಮೆ ತನಿಖೆಯ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಇದೇ ನ್ಯಾಯಾಲಯದ ಅಂತಿಮ ತೀರ್ಪಲ್ಲ ಎನ್ನುವುದು ಸ್ನೇಹಮಯಿ ಕೃಷ್ಣ ವಿವರಣೆ.
ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ನ್ಯಾಯಾಲಯ ಅಂತಿಮ ತೀರ್ಪು ನೀಡಬೇಕಿದೆ. ಹೈಕೋರ್ಟ್ ನಿಲುವು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಏನೇ ಆದರೂ ನನ್ನ ಕಾನೂನು ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನುತ್ತಾರೆ ಕೃಷ್ಣ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಕುಟುಂಬ ಸದಸ್ಯರ ವಿರುದ್ಧದ ಮತ್ತಷ್ಟು ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆಯುವುದಾಗಿ ಘೋಷಿಸಿದ ಸ್ನೇಹಮಯಿ ಕೃಷ್ಣ ಸಿದ್ದರಾಮಯ್ಯರ ಪತ್ನಿ ಪಾರ್ವತಿಯವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಮಾಡಿರುವ ಮತ್ತಷ್ಟು ಅಕ್ರಮದ ದಾಖಲೆಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಪಾರ್ವತಿಯವರ ಸಹೋದರ ಮಲ್ಲಿಕಾರ್ಜುನಸ್ವಾಮಿ ನಡೆಸಿರುವ ಭ್ರಷ್ಟಾಚಾರಕ್ಕೆ ಸಿದ್ದರಾಮಯ್ಯ ಪರೋಕ್ಷವಾಗಿ ಕಾರಣರಾಗಿದ್ದಾರೆ. ಸಿದ್ದರಾಮಯ್ಯನವರ ಪ್ರಭಾವ ಬಳಸಿಕೊಂಡು ಮಲ್ಲಿಕಾರ್ಜುನಸ್ವಾಮಿ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಅಕ್ರಮವಾಗಿ ಖರೀದಿಸಿದ ಆಸ್ತಿಯನ್ನು ಪಾರ್ವತಿಯವರಿಗೆ ನೀಡಿದ್ದಾರೆ. ಇದಕ್ಕೆ ಸೂಕ್ತ ದಾಖಲೆಗಳು ನನ್ನ ಬಳಿ ಇದ್ದುಅದನ್ನು ಬಹಿರಂಗಪಡಿಸುತ್ತೇನೆ ಎಂದರು ಸ್ನೇಹಮಯಿ ಕೃಷ್ಣ.
ನಾನು ನಡೆಸುತ್ತಿರುವ ಹೋರಾಟದ ಹಿಂದೆ ಯಾವುದೇ ಪ್ರಭಾವಿ ವ್ಯಕ್ತಿಗಳ ಕೈವಾಡವಿಲ್ಲ.ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ತನಕ ನನ್ನ ಹೋರಾಟ ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಸಿಎಂ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಬದಲಿ ನಿವೇಶನಗಳನ್ನು ಪಡೆಯಲಾಗಿತ್ತು. ಭೂಸ್ವಾಧೀನಪಡಿಸಿಕೊಂಡ ಬಡಾವಣೆ ಬಿಟ್ಟು ಬೇರೆ ಕಡೆಗೆ ನೀಡಲಾಗಿತ್ತು. ಇದು ವಿವಾದ ಸ್ವರೂಪ ಪಡೆದಿತ್ತು. ಈ ಕುರಿತು ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಬಳಿಕ ಇಡಿ ಕೂಡ ಪ್ರಕರಣ ದಾಖಲಿಸಿತ್ತು. ಆಗ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ನಿವೇಶನ ವಾಪಾಸ್ ನೀಡುವುದಾಗಿ ಪ್ರಕಟಿಸಿದ್ದರು. ಇದಾಗುತ್ತಲೇ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಲೋಕಾಯುಕ್ತ ತನಿಖೆಗೂ ಆದೇಶಿಸಲಾಗಿದ್ದು, ಆ ವಿಚಾರಣೆಯೂ ನಡೆದು ಕೋರ್ಟ್‌ಗೆ ವರದಿ ಸಲ್ಲಿಸಲಾಗಿದೆ. ಇದರ ನಡುವೆ ಹೈಕೋರ್ಟ್ ಸ್ನೇಹಮಯಿ ಕೃಷ್ಣ ಅರ್ಜಿ ವಜಾಗೊಳಿಸಿ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯ ಇಲ್ಲ ಎಂದು ಪ್ರಕಟಿಸಿದೆ.
